ಮುದ್ದೇಬಿಹಾಳ: ‘ನಿವೃತ್ತ ಮುಖ್ಯಶಿಕ್ಷಕ, ಸಾಹಿತಿ, ನಾಟಕ ರಚನೆಕಾರ ಅಶೋಕ ಮಣಿ ಅವರನ್ನು ಮುದ್ದೇಬಿಹಾಳ ತಾಲ್ಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ತಿಳಿಸಿದರು.
ಸಮ್ಮೇಳನದ ಅಧ್ಯಕ್ಷರ ಆಯ್ಕೆ ಬಳಿಕ ಅವರ ನಿವಾಸಕ್ಕೆ ತೆರಳಿ ಅಧಿಕೃತ ಆಹ್ವಾನ ನೀಡಿದ ಬಳಿಕ ಮಾತನಾಡಿದರು. ಸಾಹಿತ್ಯ,ಸಂಘಟನೆ ಸೇರಿದಂತೆ ಬಹುಮುಖ ಪ್ರತಿಭೆಯುಳ್ಳ ಮಣಿಯವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.ಇದಕ್ಕೆ ಸರ್ವರ ಸಹಮತ ಇದೆ ಎಂದರು.
ಕಸಾಪ ಗೌರವ ಕಾರ್ಯದರ್ಶಿ ವೈ.ಎಚ್.ವಿಜಯಕರ್, ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಮಾತನಾಡಿ, ಸಾಹಿತ್ಯ ಕೃಷಿ ಮಾಡಿರುವ ಮಣಿಯವರು ಸಮ್ಮೇಳನದ ಅಧ್ಯಕ್ಷರಾಗಿರುವುದು ಸೂಕ್ತ ವ್ಯಕ್ತಿಗೆ ಗೌರವ ದಕ್ಕಿದೆ ಎಂಬ ಆತ್ಮತೃಪ್ತಿ ಪದಾಧಿಕಾರಿಗಳಿಗೆ ಇದೆ ಎಂದರು.
ಸಭೆಯನ್ನುದ್ದೇಶಿಸಿ ಮುಖಂಡ ಪ್ರಭು ಕಡಿ , ಸಿದ್ಧನಗೌಡ ಬಿಜ್ಜೂರ ಮತ್ತಿತರರು ಮಾತನಾಡಿದರು.
‘ನಮ್ಮದು ಶಿಕ್ಷಕರ ಕುಟುಂಬ. ನಮ್ಮ ಅಜ್ಜ ದಿ.ದಶರಥಪ್ಪ ಮಣಿ ಮಾಸ್ತರರು ಪ್ರಕಾಂಡ ಹಳೆಗನ್ನಡದ ಪಂಡಿತರು.ಹಲಸಂಗಿಯ ಮಧುರ ಚೆನ್ನರು ಹಾಗೂ ವರಕವಿ ದ.ರಾ.ಬೇಂದ್ರೆ ಅವರ ಒಡನಾಡಿಗಳು. ಅವರ ಜೊತೆಗೂಡಿ ಪಾಂಡಿಚೇರಿ ಅರವಿಂದರ ಆಶ್ರಮಕ್ಕೆ ಭೆಟ್ಟಿಕೊಟ್ಟು ಬಂದಿದ್ದರು. ನನ್ನ ಸಾಹಿತ್ಯ ಕೃಷಿಯನ್ನು ಗಮನಿಸಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆ ಮಾಡಿರುವುದು ಹರ್ಷವನ್ನುಂಟು ಮಾಡಿದೆ. ಕನ್ನಡ ಸಾಹಿತ್ಯದ ಸಾಂಸ್ಕೃತಿಕ ತವರು ಮುದ್ದೇಬಿಹಾಳದಲ್ಲಿ ಮತ್ತೊಮ್ಮೆ ಆ ವೈಭವವನ್ನು ಮರುಕಳಿಸುವ ಕೆಲಸ ಎಲ್ಲ ಕನ್ನಡ ಮನಸ್ಸುಗಳು ಮಾಡಲಿ’ ಎಂದು ಸಾಹಿತಿ ಅಶೋಕ ಮಣಿ ಪ್ರತಿಕ್ರಿಯಿಸಿದರು.
ಪ್ರಮುಖರಾದ ಎಸ್.ಬಿ.ಕನ್ನೂರ, ಅಬ್ದುಲರಹೆಮಾನ ಬಿದರಕುಂದಿ, ಪ್ರಭುರಾಜ ಕಲ್ಬುರ್ಗಿ, ಮಾಣಿಕಚಂದ ದಂಡಾವತಿ, ಬಾಬು ಗೋಗಿ, ಎಸ್.ಎಸ್.ಕರಡ್ಡಿ, ಚಂದ್ರು ಕಲಾಲ, ಹುಸೇನ ಮುಲ್ಲಾ, ಪ್ರಕಾಶ ನರಗುಂದ, ಎಂ.ಎಂ.ಬೆಳಗಲ್ಲ, ಸಂಗಣ್ಣ ಮೇಲಿನಮನಿ, ಶ್ರೀಶೈಲ ಹೂಗಾರ ಇದ್ದರು.
ಮಣಿ ಕಿರು ಪರಿಚಯ:
ಸಾಹಿತಿ ಅಶೋಕ ಮಣಿ (1958) ಮೂಲತಃ ಹುನಗುಂದ ತಾಲ್ಲೂಕು ಸೂಳೇಭಾವಿ ಗ್ರಾಮದವರು. ಎಂ.ಎ.ಬಿಇಡಿ ಶಿಕ್ಷಣ.ಬಸರಕೋಡದ ಪವಾಡ ಬಸವೇಶ್ವರ ಪ್ರೌಢಶಾಲೆಯಲ್ಲಿ 35 ವರ್ಷ ಸೇವೆ ಸಲ್ಲಿಸಿ ಮುಖ್ಯಶಿಕ್ಷಕರಾಗಿ ಬಡ್ತಿ ಪಡೆದು ನಿವೃತ್ತರಾಗಿದ್ದು ವಿದ್ಯಾನಗರದ ನಿವಾಸಿ. ಜ್ಞಾನದೀಪ ಮುತ್ತು ಅಮೃತಸಿಂಚನ ಪವಾಡಬಸವೇಶ್ವರ ಲೀಲಾಮೃತ ಕವನ ಸಂಕನಗಳು ಸಂಪಾದಿತ ಕೃತಿಗಳು ಬರದ ಸಿರಿ ಜ್ಞಾನ ಸುಧೆ ವಚನ ವಲ್ಲರಿ ಕೋಟೆ ಧ್ವನಿ ಸಂಪಾದಿತ ಕೃತಿಗಳಾಗಿವೆ. ಹಲವು ನಾಟಕಗಳನ್ನು ಬರೆದಿದ್ದು ಕಚ್ಚಿತು ಸರ್ಪ ಅಳಿಯಿತು ದರ್ಪ ತಮ್ಮ ಉಳಿಸಿದ ತಾಳಿ ಮನೆಗಿಲ್ಲದ ಮಗಬಲೆಗೆ ಬೀಳದ ಬಾಲೆ ಇವನೆಂಥ ಮಾವ ? ನಾಟಕಗಳು ಪ್ರಮುಖವಾಗಿವೆ. ಇದಲ್ಲದೇ ಮಕ್ಕಳ ಕವನ ಸೇರಿದಂತೆ ಹಲವು ಪ್ರಕಾರದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವು ಪ್ರಶಸ್ತಿಗಳನ್ನು ಇವರು ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.