ADVERTISEMENT

ವಿಜಯಪುರ: ‘ಗುಮ್ಮಟನಗರಿ’ಯಲ್ಲಿ ಮೊಹರಂ ಸಂಭ್ರಮ

ಭಕ್ತರಿಂದ ಹುಲಿವೇಷ ಕುಣಿತ; ಪಂಜಾ ದೇವರಿಗೆ ಲೋಬಾನ, ‘ಚೋಂಗೆ’ ನೈವೇದ್ಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 4:39 IST
Last Updated 7 ಜುಲೈ 2025, 4:39 IST
ವಿಜಯಪುರ ನಗರ ಆಜಾದ್‌ ರಸ್ತೆಯಲ್ಲಿ ಭಾನುವಾರ ಪಂಜಾಗಳ ಭವ್ಯ ಮೆರವಣಿಗೆ ನಡೆಯಿತು –ಪ್ರಜಾವಾಣಿ ಚಿತ್ರ
ವಿಜಯಪುರ ನಗರ ಆಜಾದ್‌ ರಸ್ತೆಯಲ್ಲಿ ಭಾನುವಾರ ಪಂಜಾಗಳ ಭವ್ಯ ಮೆರವಣಿಗೆ ನಡೆಯಿತು –ಪ್ರಜಾವಾಣಿ ಚಿತ್ರ   

ವಿಜಯಪುರ: ತ್ಯಾಗ, ಬಲಿದಾನ, ಭಾವೈಕ್ಯದ ಪ್ರತೀಕವಾಗಿರುವ ಮೊಹರಂ ಅನ್ನು ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಿಂದೂ-ಮುಸ್ಲಿಮರು ಸೇರಿ ಭಾನುವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಜಿಲ್ಲೆಯಾದ್ಯಂತ ಪ್ರತಿಷ್ಠಾಪಿಸಲಾಗಿದ್ದ ಪವಿತ್ರ ಪಂಜಾ ದೇವರಿಗೆ ಹಿಂದೂ -ಮುಸ್ಲಿಂ ಭಕ್ತರು ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು.

ವಿಜಯಪುರ ನಗರದ ಜಾಮೀಯಾ ಮಸೀದಿ, ತಾಜ್ ಬಾವಡಿ, ಹಕೀಂ ವೃತ್ತ, ಆಸಾರ ಗಲ್ಲಿ, ಶಹಾಪುರ ದರ್ವಾಜಾ, ಹುತಾತ್ಮ ವೃತ್ತ ಮೊದಲಾದ ಭಾಗಗಳಲ್ಲಿ ಪವಿತ್ರ ಪಂಜಾಗಳಿಗೆ ಭಕ್ತಿ ಸಮರ್ಪಿಸಲಾಯಿತು.

ADVERTISEMENT

ನಗರದಲ್ಲಿ ಪಂಜಾಗಳನ್ನು ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಹಿಂದೂ -ಮುಸ್ಲಿಮರು ಭಕ್ತಿಯಿಂದ ತೆರಳಿ ಸಕ್ಕರೆ, ಊದುಬತ್ತಿ, ಲೋಬಾನ ಹಾಗೂ ವಿವಿಧ ತರಹದ ಸಿಹಿ ಪದಾರ್ಥಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿಸಿ ಭಕ್ತಿಯ ಕಾಣಿಕೆಗಳನ್ನು ಸಮರ್ಪಿಸಿದರು.

ಕೆಲವರು ಅಲ್ಲಾ ದೇವರು ಮತ್ತು ಬೀಬಿ ಫಾತಿಮಾರ ಹೆಸರಿನಲ್ಲಿ ಹಾಡಿದ ಹಾಡುಗಳಿಗೆ ಜನರು ಭಾವುಕರಾದರು. ಹರಕೆ ಹೊತ್ತ ಹಿಂದೂ -ಮುಸ್ಲಿಮರು ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಹಾಕಿ ನರ್ತಿಸಿದರು.

ಮಹಿಳೆಯರು ದೇವರನ್ನು ಪ್ರತಿಷ್ಠಾಪಿಸಿದ ಸ್ಥಳಗಳಿಗೆ ಹೋಗಿ ಎಡೆ ನೀಡಿದರು. ಹಿಂದೂಗಳು ಕೂಡ ಕಾಯಿ, ಕರ್ಪೂರ, ಊದುಬತ್ತಿ, ಎಣ್ಣೆದೀಪ ಹಾಗೂ ಸಕ್ಕರೆ ಎಡೆ ಅರ್ಪಿಸಿದರು. ಗುರುಗಳು ನವಿಲುಗರಿಯನ್ನು ತಲೆ ಮೇಲೆ ನೇವರಿಸಿ ಆಶೀರ್ವಾದ ನೀಡಿದರು. ವಿಶೇಷವಾದ ‘ಚೋಂಗೆ’ ಸಿದ್ಧಪಡಿಸಿ ಹಂಚಿದರು.

ಪ್ರವಾದಿ ಮಹಮ್ಮದ್‌ ಅವರ ಮೊಮ್ಮಕ್ಕಳಾದ ಹಸನ್‌ ಹಾಗೂ ಹುಸೇನರು ಧರ್ಮದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಪ್ರತೀಕವಾಗಿ ಮೊಹರಂ ಆಚರಿಸಲಾಗುತ್ತಿರುವುದರಿಂದ ನಗರದ ಇರಾನಿ ಮೊಹಲ್ಲಾದಲ್ಲಿ ಇರಾನಿಗರು ಕಪ್ಪು ಬಟ್ಟೆ ತೊಟ್ಟು ಶೋಕ ವ್ಯಕ್ತಪಡಿಸಿದರು. ಜುಲೂಸ್‌ನಲ್ಲಿ ಇರಾನಿ ಯುವಕರು ಬ್ಲೇಡ್‌ಗಳನ್ನು ಬೆರಳ ತುದಿಯಲ್ಲಿ ಹಿಡಿದು ಎದೆಗೆ ಬಡಿದುಕೊಳ್ಳುತ್ತ ರಕ್ತ ಸುರಿಸಿದರು.

ಪವಿತ್ರ ಪಂಜಾಗಳಿಗೆ ಭಕ್ತಿ ಸಮರ್ಪಣೆ ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಹಾಕಿ ಕುಣಿದ ಯುವಕರು ಜುಲೂಸ್‌ನಲ್ಲಿ ಇರಾನಿ ಯುವಕರಿಂದ ರಕ್ತ ಸಮರ್ಪಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.