ADVERTISEMENT

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಸನ್ನಿಹಿತ: ಯತ್ನಾಳ

35 ವಾರ್ಡ್‌ಗೆ ಸೀಮಿತ, ಪ್ರತಿ ವಾರ್ಡ್‌ಗೆ 8 ರಿಂದ 10 ಸಾವಿರ ಮತದಾರರ ನಿಗದಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 12:55 IST
Last Updated 16 ಜುಲೈ 2022, 12:55 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ವಾರ್ಡ್‌ ಪುನರ್ವಿಂಗಡಣೆ, ಮತದಾರರ ಪಟ್ಟಿ ತಯಾರಿ ಸೇರಿದಂತೆ ಅಗತ್ಯ ಸಿದ್ದತೆ ಪೂರ್ಣಗೊಂಡಿದ್ದು, ವಿಧಾನಸಭಾ ಚುನಾವಣೆಗೂ ಮುನ್ನವೇ ಪಾಲಿಕೆಗೆ ಚುನಾವಣೆ ನಡೆಯಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸುಳಿವು ನೀಡಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಇರುವ 35 ವಾರ್ಡ್‌ಗಳೇ ಇರಲಿದ್ದು, ಪ್ರತಿ ವಾರ್ಡ್‌ಗೆ 8 ರಿಂದ 10 ಸಾವಿರ ಮತದಾರರನ್ನು ನಿಗದಿಪಡಿಸಲಾಗುತ್ತಿದೆ ಎಂದರು.

ವಿಜಯಪುರ ನಗರದಲ್ಲಿ ರಸ್ತೆ, ಚರಂಡಿ, ಉದ್ಯಾನ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯ ನಡೆದಿದೆ. ಉಳಿದಿರುವ ರಸ್ತೆಗಳನ್ನು ಮುಂದಿನ ಆರು ತಿಂಗಳ ಒಳಗಾಗಿ ನಿರ್ಮಿಸಲಾಗುವುದು ಎಂದರು.

ADVERTISEMENT

ಮಾಸ್ಟರ್ ಪ್ಲ್ಯಾನ್‌ ಅನುಷ್ಠಾನಕ್ಕೆ ₹ 500 ಕೋಟಿ ಅನುದಾನ ಬೇಕು. ಈ ಕಾರಣಕ್ಕೆ ಮಾಸ್ಟರ್‌ ಪ್ಲ್ಯಾನ್‌ ಕೈಬಿಟ್ಟು ಯಾವುದೇ ಅಂಗಡಿ, ಮನೆಗಳನ್ನು ಒಡೆಯದೇ, ಯಾರಿಗೂ ತೊಂದರೆ ನೀಡದೇ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.

‌24X7 ಕುಡಿಯುವ ನೀರು ಪೂರೈಕೆ ಯೋಜನೆ ಶೀಘ್ರ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಗಾಂಧಿ ಚೌಕಿಯಲ್ಲಿ ಫ್ಲೈಓವರ್‌ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸ್ಟೇಷನ್‌ ರಸ್ತೆ ಹಾಗೂ ಸ್ಟೇಷನರ್‌ ರೋಡ್‌ ಹಿಂಭಾಗದ ರಸ್ತೆಗಳನ್ನು ಸಿಸಿ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಿದರು.

ನಗರದ ಎಲ್ಲ ಬೀದಿ ದೀಪಗಳನ್ನು ತೆಗೆದು 27 ಸಾವಿರ ಎಲ್‌ಇಡಿ ಬಲ್ಬ್‌ ಅಳವಡಿಸಲಾಗುವುದು. ರಸ್ತೆ ವಿಭಜಕಗಳ ನಡುವೆ ಗಿಡಗಳನ್ನು ನೆಟ್ಟು ಹಸಿರಿಕರಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

₹250 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಟೆಂಡರ್‌ ಆಗಿದ್ದು, ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ರಾಘವ ಅಣ್ಣೀಗೇರಿ, ಸಂಗು ಸಜ್ಜನ, ಪರಶುರಾಮ ರಜಪೂತ, ಎಂ.ಎಸ್‌.ರುದ್ರಗೌಡ, ಸದಾನಂದ ಗುಡ್ಡೋಡಗಿ, ಪ್ರೇಮಾನಂದ ಬಿರಾದಾರ, ಸಾಯಬಣ್ಣ , ಚಂದ್ರು ಚೌದರಿ, ರಾಜಶೇಖರ ಕುರಿ, ರಾಜೇಶ ದೇವಗಿರಿ, ರಾಹುಲ್‌ ಜಾಧವ್‌, ಲಕ್ಷ್ಮಿ ಕನ್ನೊಳ್ಳಿ, ಬಸಯ್ಯ ಹಿರೇಮಠ, ಸಂತೋಷ ಸಬರದ, ಛಾಯಾ ಮಸಿಯವರ, ಅಶೋಕ ಬೆಲ್ಲದ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***

‘ಬ್ಲ್ಯಾಕ್‌ ಮೇಲ್‌ ದಂಧೆ’

ವಿಜಯಪುರ:ಚುನಾವಣೆ ಸಮೀಪಿಸಿದಾಗ ಕೆಲವರು ವಿಜಯಪುರದಿಂದ ಸ್ಪರ್ಧಿಸುತ್ತೇನೆ, ಬಬಲೇಶ್ವರದಿಂದ ನಿಲ್ಲುತ್ತೇನೆ ಎಂದು ಬ್ಲ್ಯಾಕ್‌ ಮೇಲ್‌ ದಂಧೆ ಮಾಡುವವರು ಇದ್ದಾರೆ. ಅದಕ್ಕೆ ಕಿಮ್ಮತ್ತಿಲ್ಲ ಎಂದುಶಾಸಕ ಶಿವಾನಂದ ಪಾಟೀಲ ಅವರಿಗೆ ಯತ್ನಾಳ ತಿರುಗೇಟು ನೀಡಿದರು.

ಆಹ್ವಾನವಿಲ್ಲ:ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಸಭೆಗೆ ನನಗೆ ಆಹ್ವಾನ ನೀಡಿಲ್ಲ. ಹೀಗಾಗಿ ಹೋಗಿಲ್ಲ. ‘ಕರೆಯದೇ ಬರುವರನ್ನು ಕರೆದು ಕೆರದಲ್ಲಿ ಹೊಡಿ ಎಂದ ಸರ್ವಜ್ಞ‘ ಎಂಬ ಮಾತಿದೆ. ಹೀಗಾಗಿ ಅಲ್ಲಿಗೆ ಹೋಗಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

***

ಮೂರ್ತಿ ಮೆರವಣಿಗೆ ಇಂದು

ವಿಜಯಪುರ: ದೇಶ, ಧರ್ಮದ ರಕ್ಷಣೆಗಾಗಿ ಜೀವನವನ್ನೇ ಸಮರ್ಪಣೆ ಮಾಡಿದ ನಾಯಕರು, ಸಾಧು–ಸಂತರ ಹೆಸರನ್ನು ನಗರದ 31 ರಸ್ತೆಗಳಿಗೆ ನಾಮಕರಣ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ, ಪ್ರಮುಖ ವೃತ್ತಗಳಲ್ಲಿ 26 ಮೂರ್ತಿಗಳ ಪ್ರತಿಷ್ಠಾಪನೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಯತ್ನಾಳ ತಿಳಿಸಿದರು.

ಈ ಮೂರ್ತಿಗಳ ಭವ್ಯ ಮೆರವಣಿಗೆ ಜುಲೈ 17ರಂದು ಮಧ್ಯಾಹ್ನ 3ಕ್ಕೆ ನಗರದಲ್ಲಿ ನಡೆಯಲಿದೆ. ಬಳಿಕ ಸಂಜೆ 7ಕ್ಕೆ ಸಿದ್ದೇಶ್ವರ ಗುಡಿಯ ಮುಂದೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ಮುಂದಿನ ಆಗಸ್ಟ್‌ ಅಥವಾ ಸೆಪ್ಟೆಂಬರ್‌ಗೆ ಈ ಮೂರ್ತಿಗಳ ಅನಾವರಣ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ಮೋದಿ ಅಥವಾ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.