
ವಿಜಯಪುರ: ಜಿಲ್ಲೆಯಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಮತ್ತು ವಿದ್ಯುತ್ ಉಪಕೇಂದ್ರಗಳ ನಿರ್ಮಾಣಕ್ಕಾಗಿ ನಬಾರ್ಡ್‌ನಿಂದ ₹124.50 ಕೋಟಿ ಅನುದಾನ ಮಂಜೂರಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕನ್ನೂರ-ಮಡಸನಾಳ ರಸ್ತೆ, ಬಿಳೂರ-ನಾವದಗಿ-ಸಾಲವಾಡಗಿ ರಸ್ತೆ, ಚಡಚಣದಿಂದ - ಕರ್ನಾಟಕದ ಗಡಿಯವರೆಗೆ ರಸ್ತೆ, ಬೋಳೆವಾಡ- ಕ್ಯಾತನಕಲ್- ಗಡಿಸೋಮನಾಳ - ಕೊಡಗಾನೂರ- ಸಾವಳಗಿ ರಸ್ತೆ, ಹಾಗೂ ಚಡಚಣ-ನೀವರಗಿ-ಗೋವಿಂದಪುರ ರೋಡ್ ಮತ್ತು ರೇವತಗಾಂವ ನಂದೂರನಿಂದ ಮಹಾರಾಷ್ಟ್ರದ ಗಡಿಯಯವರೆಗೆ ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿದೆ ಎಂದರು.
ಇಂಡಿ ತಾಲೂಕಿನ ನಾದ ಗ್ರಾಮದಲ್ಲಿ 33/11 ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಉಪ ಕೇಂದ್ರ, ಕನಮಡಿಯಲ್ಲಿ 110/11 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ, ಕಣಕಾಳದಲ್ಲಿ 110/11 ಕೆವಿ ಸಾಮರ್ಥ್ಯ ವಿದ್ಯುತ್ ಉಪಕೇಂದ್ರ ಸ್ಥಾಪನೆಗೂ ಅನುದಾನ ಮಂಜೂರಾಗಿದೆ ಎಂದು ವಿವರಿಸಿದರು.
ಇನ್ನು ಇಂಡಿಯಲ್ಲಿರುವ ಜಿಟಿಟಿಸಿ ಕೇಂದ್ರಕ್ಕೆ ವಿವಿಧ ಸೌಲಭ್ಯ ಕಲ್ಪಿಸಲು ₹70 ಕೋಟಿ ಅನುದಾನ ಹಾಗೂ ತೊರವಿಯಲ್ಲಿ ಎಪಿಎಂಸಿ ಸಬ್ ಯಾರ್ಡ್ ಗೆ ಸಂಬಂಧಿಸಿದಂತೆ ₹23 ಕೋಟಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹127.7 ಕೋಟಿ ಅನುದಾನ ನಬಾರ್ಡ್ ಹಂತದಲ್ಲಿ ಪ್ರಸ್ತಾವನೆಯಲ್ಲಿದ್ದು ಶೀಘ್ರವೇ ಬಿಡುಗಡೆಯಾಗಲಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಿಸಲಾದ ವಿವಿಧ ಕಾಮಗಾರಿಗಳು ಇಂದಿಗೂ ಆಗಿಲ್ಲ. ₹300 ಕೋಟಿ ವೆಚ್ಚದಲ್ಲಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಬೊಮ್ಮಾಯಿ ನೇತೃತ್ವದ ಸರ್ಕಾರ ಅಡಿಗಲ್ಲು ಹಾಕಿತ್ತು, ಆದರೆ ಈ ಸರ್ಕಾರ ಬಂದು ಎರಡುವರೆ ವರ್ಷವಾದರೂ ಇದುವರೆಗೂ ಮೊದಲನೇ ಹಂತದ ಕಾಮಗಾರಿಯೂ ಆಗಿಲ್ಲ ಎಂದರು.
ಸಚಿವ ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದಾಗ ಚಡಚಣ ಏತ ನೀರಾವರಿ ಯೋಜನೆ ಮಂಜೂರು ಮಾಡಲಾಗಿತ್ತು. ಅದರಿಂದ 7 ಹಳ್ಳಿಗಳೂ ನೀರಾವರಿಗೆ ಒಳಪಡುತ್ತಿದ್ದವು. ಈ ಯೋಜನೆಯಿಂದ 22000 ಹೆಕ್ಟರ್ ಜಮೀನು ನೀರಾವರಿಯಾಗುತ್ತಿತ್ತು, ಆದರೆ ಇದು ವರೆಗೂ ಒಂದೇ ಒಂದು ಹಳ್ಳಿಗೂ ನೀರು ತಲುಪಿಲ್ಲ, ಯಾರ ಯಾರ ಪಾಲಿಗೆ ದುಡ್ಡು ಬರೆಬೇಕಿತ್ತೋ ಅವರೆಲ್ಲ ತಮ್ಮ ತಮ್ಮ ಪಾಲಿನ ದುಡ್ಡು ತೆಗೆದುಕೊಂಡು ಕೆಲಸ ಮಾಡದೇ ಬಿಟ್ಟಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಇನ್ನು ಈ ಕಾಮಗಾರಿ ಶೀಘ್ರದಲ್ಲಿಯೇ ಮಾಡದಿದ್ದರೆ ತಹಶೀಲ್ದಾರ್ ಕಚೇರಿ ಎದುರು ನಾನೇ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್‌ನಿಂದ ದಲಿತರು ಸಿಎಂ ಆಗುವುದಿಲ್ಲ: ದಲಿತ ಮುಖ್ಯಮಂತ್ರಿ ಕೂಗನ್ನು ಪ್ರಬಲವಾಗಿ ಪ್ರತಿಪಾದಿಸುತ್ತಲೇ ಬಂದಿರುವ ಸಂಸದ ರಮೇಶ ಜಿಗಜಿಣಗಿ ಇಂದು ಸಹ ದಲಿತ ಮುಖ್ಯಮಂತ್ರಿ ವಿಷಯವಾಗಿ ಪ್ರತಿಪಾದನೆ ಮಾಡಿದ್ದು, ಕಾಂಗ್ರೆಸ್ ಪಕ್ಷದಿಂದ ಯಾವತ್ತೂ ದಲಿತರು ಸಿಎಂ ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ಪಕ್ಷದವರು ಡಾ.ಅಂಬೇಡ್ಕರ್ ಅವರ ಸಮಾಧಿಗಾಗಿ ಸ್ಥಳವನ್ನೇ ನೀಡಲಿಲ್ಲ, ಅಂಬೇಡ್ಕರ್ ಅವರನ್ನೇ ಬಿಡದ ಅವರು ಮಲ್ಲಿಕಾರ್ಜುನ್ ಖರ್ಗೆ, ಜಿ.ಪರಮೇಶ್ವರ ಅವರನ್ನು ಸಿಎಂ ಮಾಡುತ್ತಾರಾ? ಎಂದು ಜಿಗಜಿಣಗಿ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.