ADVERTISEMENT

ಉತ್ತಮ ಆಡಳಿತಗಾರ ಕೆಂಪೇಗೌಡ: ಗೆಣ್ಣೂರ

ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡ ಜಯಂತಿ 

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 16:20 IST
Last Updated 27 ಜೂನ್ 2025, 16:20 IST

ವಿಜಯಪುರ: ‘ಉದ್ಯಾನ, ಮಾರುಕಟ್ಟೆ ಅದ್ಭುತ ನಗರ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರು ಆಧುನಿಕ ನಗರ ನಿರ್ಮಾತೃಗಳಿಗೆ ಮಾದರಿಯಾಗಿದ್ದಾರೆ. ಕೆಂಪೇಗೌಡರು ನಿರ್ಮಾಣ ಮಾಡಿದ ಬೆಂಗಳೂರು ಈಗಲೂ ತನ್ನ ಪ್ರಖ್ಯಾತಿ ಉಳಿಸಿಕೊಂಡಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದರು.

‘ಬೆಂಗಳೂರು ಲಕ್ಷಾಂತರ ಜನರು ತಮ್ಮ ಬದುಕು ಕಟ್ಟಿಕೊಳ್ಳಲು ಆಸರೆಯ ತಾಣವಾಗಿದೆ. ಇಡೀ ವಿಶ್ವದಲ್ಲಿಯೇ ಗುರುತಿಸುವಂತಹ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ಕಾರ್ಯ ಸ್ಮರಣೀಯವಾಗಿದೆ’ ಎಂದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ಮಹಾದೇವ ರೆಬಿನಾಳ, ‘ಬೃಹತ್ ನಗರ ನಿರ್ಮಾಣದ ಜೊತೆಗೆ ಪಾರದರ್ಶಕತೆಯುಳ್ಳ ಉತ್ತಮ ಆಡಳಿತಗಾರಾಗಿದ್ದ ಕೆಂಪೇಗೌಡರು ರೈತರಿಗೆ ಹೊರೆಯಾಗದಂತೆ ತೆರಿಗೆ, ಸೈನ್ಯಕ್ಕಾಗಿ ಹಣ ಮೀಸಲಿಟ್ಟಿದ್ದರು. ಸಾಮಾನ್ಯ ಜನರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಕೌಶಲ ಮತ್ತು ಜಾಣ್ಮೆಯಿಂದ ಸ್ವತಂತ್ರ ಸಂಸ್ಥಾನ ನಿರ್ಮಿಸಿ ದಕ್ಷಿಣ ಕರ್ನಾಟಕದಲ್ಲಿ ನಾಡಪ್ರಭು ಎಂದು ಜನಮಾಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ’ ಎಂದು ಹೇಳಿದರು. 

ಕಾಶಿನಾಥ ಭೋಸಲೆ ಸುಗಮ ಸಂಗೀತ ನಡೆಸಿಕೊಟ್ಟರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ್ ಸೌದಾಗರ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಅನಸೂಯಾ ಚಲವಾದಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಿಂಬಾಬಾ ಮುದ್ದೇಬಿಹಾಳ, ಸಂಕೇತಗೌಡ ಗಾಯಕವಾಡ, ವಿದ್ಯಾವತಿ ಅಂಕಲಗಿ, ಸಂಗೀತಾ ಮಠಪತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.