ADVERTISEMENT

ಕಾಂಗ್ರೆಸ್‌ ಸೇರುವುದಿಲ್ಲ, ಬಿಜೆಪಿಯಲ್ಲೇ ಇರುತ್ತೇನೆ: ರಮೇಶ ಜಿಗಜಿಣಗಿ

ನಾಗಠಾಣ ಕ್ಷೇತ್ರದ ಆಕಾಂಕ್ಷಿಯಲ್ಲ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 10:40 IST
Last Updated 29 ಡಿಸೆಂಬರ್ 2022, 10:40 IST
ರಮೇಶ ಜಿಗಜಿಣಗಿ
ರಮೇಶ ಜಿಗಜಿಣಗಿ   

ವಿಜಯಪುರ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ನಾಗಠಾಣ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಲ್ಲ’ ಎಂದು ಹೇಳುವ ಮೂಲಕ ಸಂಸದ ರಮೇಶ ಜಿಗಜಿಣಗಿ ಅವರು ರಾಜಕೀಯ ಊಹಾಪೂಹಗಳಿಗೆ ತೆರೆ ಎಳೆದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘40 ವರ್ಷ ಸಂಸದ, ಶಾಸಕ, ಸಚಿವನಾಗಿ ಕಾರ್ಯನಿರ್ವಹಿಸಿರುವೆ. ರಾಜಕೀಯವಾಗಿ ಇನ್ನು ಯಾವುದೇ ಆಕಾಂಕ್ಷಿಯಲ್ಲ’ ಎಂದು ಹೇಳುವ ಮೂಲಕ ನಾಗಠಾಣ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಸಚಿವ ಗೋವಿಂದ ಕಾರಜೋಳ ಅವರ ಪುತ್ರರ ಸ್ಪರ್ಧೆಗೆ ಹಾದಿ ಸುಗಮಗೊಳಿಸಿದರು.

‘ವೈಯಕ್ತಿಕವಾಗಿ ರಾಜಕೀಯ ಸಾಕಾಗಿದೆ. ಪಕ್ಷ ಏನು ಹೇಳುತ್ತದೆಯೋ ಹಾಗೆ ಮಾಡುವೆ. ಚುನಾವಣೆಗೆ ಸ್ಪರ್ಧಿಸು ಅಂದರೆ ಸ್ಪರ್ಧಿಸುವೆ. ಮನೆಯಲ್ಲೇ ಇರು ಅಂದರೆ ಮನೆಯಲ್ಲೇ ಇರುವೆ’ ಎಂದು ಹೇಳಿದರು.

ADVERTISEMENT

‘ನನಗೆ ಇನ್ನೂ ವಯಸ್ಸಾಗಿಲ್ಲ. ಹೀಗಾಗಿ ಬಿಜೆಪಿಯ 75 ವರ್ಷ ವಯೋಮಿತಿ ನನಗೆ ಅನ್ವಯಿಸುವುದಿಲ್ಲ. ರಾಜಕೀಯದಿಂದ ನಿವೃತ್ತಿ ಮಾತಿಲ್ಲ’ ಎಂದರು.

‘ನಾಗಠಾಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಸಿಗದಿದ್ದರೆ ಕಾಂಗ್ರೆಸ್‌ಗೆ ಸೇರುತ್ತೇನೆ ಎಂಬುದು ಕೇವಲ ಊಹಾಪೂಹ. ಆರಂಭದಿಂದಲೂ ನಾನು ಕಾಂಗ್ರೆಸ್‌ ವಿರೋಧಿ. ಈಗ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಉದ್ಭವಿಸದು’ ಎಂದರು.

‘ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆಯಿಂದ ಬಿಜೆಪಿಗೆ ಯಾವುದೇ ಪರಿಣಾಮ ಬೀರದು. ಪ್ರಾದೇಶಿಕ ಪಕ್ಷಗಳಿಗೆ ಜನರು ಮಹತ್ವ ನೀಡುವುದಿಲ್ಲ’ ಎಂದು ಹೇಳಿದರು.

ಹೊಸ ಹೆದ್ದಾರಿ: ಮಹಾರಾಷ್ಟ್ರ ಗಡಿ ಮುರಂನಿಂದ ಇಂಡಿ, ಅಥರ್ಗಾ, ನಾಗಠಾಣ ಮಾರ್ಗವಾಗಿ ವಿಜಯಪುರವನ್ನು ಸಂಪರ್ಕಿಸುವ 106 ಕಿ.ಮೀರಸ್ತೆಯನ್ನು₹998 ಕೋಟಿ ಮೊತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ 548ಬಿ ಮಂಜೂರಾಗಿದೆ. ಶೀಘ್ರದಲ್ಲೇ ಟೆಂಡರ್‌ ಕರೆದು ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ 561ಎ ಮಹಾರಾಷ್ಟ್ರ ಗಡಿಯಿಂದ ಸಿದ್ಧಾಪುರ–ಅರಕೇರಿ ಮೂಲಕ ವಿಜಯಪುರ ನಗರವನ್ನು ಸಂಪರ್ಕಿಸುವ 12 ಕಿ.ಮೀ. ರಸ್ತೆಯನ್ನು ₹ 90 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಭೂಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ. ಈ ಕಾಮಗಾರಿಯನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ 166ಇ ಮಹಾರಾಷ್ಟ್ರ ಗಡಿಯಿಂದ ಕನಮಡಿ–ಬಿಜ್ಜರಗಿ–ಬಾಬಾನಗರ–ತಿಕೋಟಾ ವರೆಗಿನ 23.60 ಕಿ.ಮೀ.ರಸ್ತೆಯನ್ನು ಅಂದಾಜು ₹196 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಪಡಿಸಲು ಅನುಮೋದನೆ ಸಿಕ್ಕಿದೆ. ಶೀಘ್ರದಲ್ಲೇ ಟೆಂಡರ್‌ ಕರೆದು ಒಂದೂವರೆ ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ಕೇಂದ್ರ ರಸ್ತೆ ನಿಧಿ ಯೋಜನೆಯಡಿ ಜಿಲ್ಲೆಗೆ 14 ಕಾಮಗಾರಿಗಳು ಮಂಜೂರಾಗಿದ್ದು, ಈಗಾಗಲೇ 10 ಕಾಮಗಾರಿಗಳು ಪೂರ್ಣವಾಗಿವೆ. ಹತ್ತಳ್ಳಿ, ಕುಮಟಗಿ ಸೇತುವೆ ನಿರ್ಮಾಣ ಕಾರ್ಯ ತಾಂತ್ರಿಕ ಕಾರಣದಿಂದ ಬಾಕಿ ಇದೆ ಎಂದು ಹೇಳಿದರು.

ಹುಬ್ಬಳ್ಳಿ–ಹುಮನಾಬಾದ್‌ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಶಿರಡೋಣದಿಂದ ಝಳಕಿ ವರೆಗೆ 48 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದರು.

ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಜಯಪುರ ವಿಭಾಗದ ಕಾರ್ಯನಿರ್ವಹಕ ಎಂಜಿನಿಯರ್‌ ವಿಜಯ ಪಾಟೀಲ ಮತ್ತು ವಿವೇಕ ಮಠ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***

ಮಹಾರಾಷ್ಟ್ರ–ಕರ್ನಾಟಕ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬರಲು ಚುನಾವಣಾ ರಾಜಕೀಯ ಕಾರಣವೇ ಹೊರತು ಬೇರೇನೂ ಅಲ್ಲ. –ರಮೇಶ ಜಿಗಜಿಣಗಿ, ಸಂಸದ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.