ನಾಲತವಾಡ: ಕಟ್ಟಕಡೆಯ ಹಳ್ಳಿಗಳಿಗೂ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿ ದಿನ ಬೊಬ್ಬಿಡುತ್ತಿವೆ. ಆದರೆ ಇಲ್ಲಿಗೆ ಸಮೀಪದ ಆರೇಶಂಕರ ಗ್ರಾಮ ಮೂಲ ಸೌಕರ್ಯಗಳಿದ್ದರೂ ಸರಿಯಾದ ನಿರ್ವಹಣೆಯಿಲ್ಲದೆ ಹಿನ್ನಡೆಯಾಗುತ್ತಿರುವುದು ದುರಷ್ಟರಕರ.
ನಾಲತವಾಡ ಹೋಬಳಿಯ ನಾಗಬೆನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೇಶಂಕರ ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿ ದೀಪ, ಶೌಚಾಲಯ ನಿರ್ಮಾಣ ಮತ್ತು ಗ್ರಾಮಗಳ ನಿರ್ವಹಣೆ ಸೇರಿದಂತೆ ಬಹುತೇಕ ಯಾವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವ ಹಿನ್ನೆಲೆಯಲ್ಲಿ ಪಂಚಾಯತಿ ಯಿಂದ ಕೇವಲ 2ಕಿ.ಮೀ ಸಮೀಪದ ಗ್ರಾಮದಲ್ಲಿ ಅಭಿವೃದ್ಧಿ ಎಂಬುವುದು ಮರೀಚಿಕೆಯಾಗಿದೆ.
ಗ್ರಾಮದಲ್ಲಿ ಈಗಾಗಲೇ ಹಲವು ವರ್ಷಗಳಿಂದ ನಿರ್ಮಾಣವಾದ ಶುದ್ಧ ಕುಡಿಯುವ ನೀರಿನ (ಆರ್‌ಒ) ಘಟಕಗಳು ನಿರ್ವಹಣೆ ಇಲ್ಲದೆ ಶುದ್ಧ ನೀರು ಎಂಬುದು ಮರೀಚಿಕೆಯಾಗಿದೆ. ಕೂಗಳತೆ ದೂರದಲ್ಲಿ ಕೃಷ್ಣಾ ನದಿ ಇದ್ದರೂ, ಫ್ಲೋರೈಡ್ ಅಂಶ ಇರುವ ಕೊಳವೆಬಾವಿ ನೀರನ್ನು ಗ್ರಾಮದೆಲ್ಲೆಡೆ ನಿರ್ಮಿಸಿರುವ ಗುಮ್ಮಿಗಳಿಗೆ ತುಂಬಿಸಲಾಗುತ್ತದೆ. ಇದೇ ನೀರನ್ನು ಜನ ಜಾನುವಾರು ಕುಡಿಯಲು ಬಳಸುತ್ತಿದ್ದಾರೆ. ಜಲಜೀವನ್ ಮಿಶನ್ ಯೋಜನೆ ಅಡಿಯಲ್ಲಿ ಗ್ರಾಮದ ಎಲ್ಲ ಮನೆಗಳಿಗೆ ನಲ್ಲಿ, ಮೀಟರ್‌ಗಳನ್ನು ಅಳವಡಿಸಲಾಗಿದೆ.
ಕಾಮಗಾರಿ ಪೂರ್ಣಗೊಂಡು ನಲ್ಲಿಗಳಿಗೆ ನೀರು ಬರುವ ಪೂರ್ವದಲ್ಲೇ ಮೀಟರ್ ಸಹಿತ ನಳಗಳು, ಪೈಪ್ ಲೈನ್ ಒಡೆದು ಹೋಗಿವೆ.ಜೆಜೆಎಂ ಕಾಮಗಾರಿಯೇ ಕಳಪೆ ಮಟ್ಟದ್ದಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ. ಗ್ರಾಮದ ಎಲ್ಲರಿಗೂ ಬಯಲು ಶೌಚವೇ ನಿತ್ಯ ಮುಕ್ತಿ.
ಅರ್ಧಕ್ಕೆ ಶಾಲೆ ಬಿಡುತ್ತಾರೆ: ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. 95ಕ್ಕೂ ಅಧಿಕ ವಿದ್ಯಾರ್ಥಿಗಳು ಒಂದರಿಂದ ಐದನೇ ತರಗತಿ ಕಲಿಯುತ್ತಿದ್ದಾರೆ. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪದವೀಧರ ಶಿಕ್ಷಕರಿದ್ದು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.
6ನೇ ತರಗತಿಗೆ ನಾಲತವಾಡ ಪಟ್ಟಣ, ವೀರೇಶ ನಗರಕ್ಕೆ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ನಡೆದೇ ಹೋಗುತ್ತಾರೆ. ಆರೇಶಂಕರ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲದ ಕಾರಣ ಪ್ರಾಪ್ತ (ಋತುಮತಿ) ಆದ ವಿದ್ಯಾರ್ಥಿನಿಯರು ಅರ್ಧಕ್ಕೆ ಶಾಲೆ ಬಿಡುತ್ತಿದ್ದಾರೆ. ಶಾಲೆ ಪ್ರಾರಂಭವಾಗುವ ಹಾಗೂ ಬಿಡುವ ವೇಳೆಗೆ ಬಸ್ ಓಡಿದರೆ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ.
ನಾಲೆಗಳಿವೆ ನೀರಿಲ್ಲ: ಕೃಷಿ ಪ್ರಧಾನ ಗ್ರಾಮವಾದ ಈ ಗ್ರಾಮದ ಸುತ್ತಮುತ್ತ ಮುಳವಾಡ ಏತ ನೀರಾವರಿ ಯೋಜನೆಯ ಹಾಗೂ ಆಲಮಟ್ಟಿ ನಾಲೆಗಳ ನೀರು ಬರುತ್ತದೆ ಎಂದು ಹಲವು ವರ್ಷಗಳ ಹಿಂದೆಯೇ ನಾಳೆಗಳನ್ನು ತೋಡಲಾಗಿದೆ,ನಾಲೆಗಳಿಗೆ ನೀರು ಬಾರದೇ ಮುಳ್ಳು ಕಂಟಿ ಬೆಳೆದಿವೆ.
ನಿಸರ್ಗದ ಮಡಿಲಲ್ಲಿ ಸುಂದರವಾದ ಆರೇಶಂಕರ ಶಾಲೆ
ಗ್ರಾಮದ ಕೆಲವೇ ಮನೆಗಳಿಗೆ ನಲ್ಲಿ ನೀರು ಬರುತ್ತಿದೆ. ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಬರುವಂತಾಗಬೇಕುಮಣಿಕಂಠ ಅಮರಾವದಗಿ ಯುವ ಮುಖಂಡ ಆರೇಶಂಕರ
ರೈತಾಪಿಗಳ ಗ್ರಾಮ ಆರೇಶಂಕರ ಆಗಿದ್ದು ನಾಲೆಗಳಿಗೆ ನೀರು ಬರಬೇಕು ಗ್ರಾಮೀಣ ಪಶು ಚಿಕಿತ್ಸಾಲಯ ಆಗಬೇಕು. ವಿದ್ಯಾರ್ಥಿಗಳಿಗೆ ನಿತ್ಯ ಬಸ್ ಸೌಕರ್ಯ ಕಲ್ಪಿಸಬೇಕುಕೆಂಚಪ್ಪಣ್ಣ ಬಿರಾದಾರ ಮುಖಂಡ
ಆರೇಶಂಕರ ಗ್ರಾಮವು ವಿಜಯಪುರ ಜಿಲ್ಲೆಯ ಗಡಿ ಗ್ರಾಮವಾಗಿದೆ. ಕೂಗಳತೆ ದೂರದಲ್ಲೇ ಯಾದಗಿರಿ ಜಿಲ್ಲೆಯಿದ್ದು ಈ ಗ್ರಾಮಕ್ಕೆ ಬಸ್ ಸೌಕರ್ಯವೆ ಇಲ್ಲ. ಜನ ಪ್ರತಿಭಟನೆ ನಡೆಸಿದಾಗ ಚುನಾವಣೆ ಸಮೀಪಿಸುತ್ತಿದ್ದಂತೆ ಬಸ್ ಬರುತ್ತವೆ ಇಲ್ಲದಿದ್ದರೆ ಬಸ್ ಬರುವುದೇ ಇಲ್ಲ. ಕಳೆದ ಜನ ಸಂಪರ್ಕ ಸಭೆಯಲ್ಲಿ ಗ್ರಾಮದ ಜನತೆಯ ಅಹವಾಲು ಸ್ವೀಕರಿಸಿ ಬಸ್ ನಾಲತವಾಡ ನಾರಾಯಣಪೂರ ವಾಯಾ ಆರೇಶಂಕರ ಮಾರ್ಗವಾಗಿ ಓಡಿ ಎರಡೇ ದಿನಕ್ಕೆ ಬಂದ್ ಆಯಿತು. ಕಾರಣ ರಸ್ತೆಯುದ್ದಕ್ಕೂ ಮುಳ್ಳು ಕಂಟಿ ಬೆಳೆದು ನಿಂತ ಹಿನ್ನೆಲೆಯಲ್ಲಿ ಬಸ್ ಬಂದ್ ಮಾಡಲಾಗಿದೆ ಎಂದು ಘಟಕ ವ್ಯವಸ್ಥಾಪಕರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.