
ನಾಲತವಾಡ: ಸಮೀಪದ ಇಂಗಳಗಿ-ಟಕ್ಕಳಕಿ ನದಿ ದಡದಲ್ಲಿ ವಲಸೆ ಬಂದು ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ಆಂಧ್ರ ಮೂಲದ ಕುಟುಂಬಗಳ ಮೇಲೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಆರು ಬೋಟ್ , ಮೀನಿನ ಬಲೆ ಹಾಗೂ ಎಂಜಿನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಮೀನುಗಾರಿಕೆ ಇಲಾಖೆಯ ಪರವಾನಗಿ ಪಡೆಯದೇ ರಾತ್ರಿ ಟ ಬಲೆ ಬೀಸಿ ಚಿಕ್ಕ, ಬಿಳಚ ಮೀನುಗಳನ್ನೇ ಗುರಿಯಾಗಿಸಿಕೊಂಡು ಮೀನುಗಾರಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗೀಯ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಲ್.ಕುಮಾರ ಹಾಗೂ ತಾಲ್ಲೂಕು ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ ಅವರು ಮುದ್ದೇಬಿಹಾಳ ತಾಲ್ಲೂಕಿನ ತಂಡದೊಂದಿಗೆ ದಾಳಿ ನಡೆಸಿ, ಅಕ್ರಮ ಮೀನುಗಾರಿಕೆಗೆ ಬಳಸುತ್ತಿದ್ದ 75ಕ್ಕೂ ಹೆಚ್ಚು ಬಲೆಗಳ ಗಂಟುಗಳು, 6 ಬೋಟ್ ಹಾಗೂ ಎಂಜಿನ್‌ಗಳನ್ನು ವಶಪಡಿಸಿಕೊಂಡು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ನಂತರ ಮಾತನಾಡಿದ ಅಧಿಕಾರಿಗಳು, ಬಾಗಲಕೋಟೆ ಬಳಿ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ಆಂಧ್ರ ಮೂಲದ ಮೀನುಗಾರರು ಕಳೆದ ಹದಿನೈದು ದಿನಗಳಿಂದ ಈ ಭಾಗದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಬಗ್ಗೆ ಮಾಹಿತಿ ಬಂದಿತ್ತು. ಹೀಗಾಗಿ ದಾಳಿ ಮಾಡಿದ್ದು, ತಕ್ಷಣವೇ ಜಾಗ ಖಾಲಿ ಮಾಡದಿದ್ದಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ ಎಂದರು.
ಮೀನುಗಾರಿಕೆ ಇಲಾಖೆ ನಿರ್ದೇಶಕ ಎಸ್.ಎಲ್ ಸುರಗಿಹಳ್ಳಿ, ಪಿಎಸ್‌ಐ ಆರ್.ಎಸ್. ಭಂಗಿ, ಎಎಸ್‌ಐ ಎ.ವೈ ಸಾಲಿ, ಪೊಲೀಸ್ ಸಿಬ್ಬಂದಿ ಬಸವರಾಜ ಚಿಂಚೊಳ್ಳಿ, ಎಚ್.ಹೆಬ್ಬುಲಿ ದಾಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.