ADVERTISEMENT

‘ಬಮ್ಮಣ್ಣಿ’ಯ ಪುರಿ, ಲಸ್ಸಿ ಫೇಮಸ್

ಶಾಂತೂ ಹಿರೇಮಠ
Published 22 ಜೂನ್ 2019, 12:35 IST
Last Updated 22 ಜೂನ್ 2019, 12:35 IST
ಸುರೇಖಾ ಬಮ್ಮಣ್ಣಿ
ಸುರೇಖಾ ಬಮ್ಮಣ್ಣಿ   

ಸಿಂದಗಿ: ಪಟ್ಟಣದ ಹೋಟೆಲ್ ಉದ್ದಿಮೆಗಳಲ್ಲಿ ಬಮ್ಮಣ್ಣಿ ಹೋಟೆಲ್ 45 ವರ್ಷಗಳ ಹಿನ್ನೆಲೆ ಹೊಂದಿದೆ. ಹಳೆಯ ಬಜಾರದಲ್ಲಿರುವ ಹೊಸ ಕಟ್ಟಡದಲ್ಲಿ ಈ ಹೋಟೆಲ್ ಇದೆ. ಇದು ಕೆಲವು ವಿಶೇಷತೆಗಳನ್ನು ಹೊಂದಿದೆ. ಪುರಿ, ಬಾಜಿ ಗಿರಾಕಿ ಬಹಳ. ಅದರಲ್ಲೂ ಮಹಾರಾಷ್ಟ್ರ ಲಸ್ಸಿ ಇಡೀ ಪಟ್ಟಣದಾದ್ಯಂತ ಮನೆ, ಮನೆಗೂ ಫೇಮಸ್ ಆಗಿದೆ.

‘ಈ ಸಲದ ಭಾರೀ ಬಿಸಿಲಲ್ಲಿ ನಮ್ಮ ಲಸ್ಸಿಗೆ ತುಂಬಾ ಬೇಡಿಕೆ ಇತ್ತು. ಅಂಗಡಿಯಲ್ಲಿ ಕುಡಿಯುವವರಿಗಿಂತ ಮನೆಗಳಿಗೆ ಪಾರ್ಸೆಲ್ ತರಿಸುವವರೇ ಹೆಚ್ಚಾಗಿದ್ದಾರೆ. ಸಭೆ ಸಮಾರಂಭಗಳು, ಮದುವೆ, ನಿಶ್ಚಿತಾರ್ಥ, ಜನ್ಮದಿನ ಕಾರ್ಯಕ್ರಮಗಳಿಗೆ ಮುಂಗಡ ಬುಕ್ಕಿಂಗ್ ಇರುತ್ತದೆ, ಈಗಲೂ ಇದೆ. ಪಾರ್ಸೆಲ್ ತರಿಸುವವರಿಗೆ ವ್ಯವಸ್ಥಿತವಾಗಿ ಗ್ಲಾಸ್‌ನಲ್ಲಿ ಹಾಕಿ ,ಮೇಲೆ ಮುಚ್ಚಳ ಮುಚ್ಚಿ ಕೊಡಲಾಗುವುದು’ ಎಂದು ಸುರೇಖಾ ಬಮ್ಮಣ್ಣಿ ತಮ್ಮ ವ್ಯಾಪಾರದ ಬಗ್ಗೆ ಮಾಹಿತಿ ನೀಡಿದರು.

‘ಸೀಜನ್‌ನಲ್ಲಿ ಇದರ ಜತೆ ಪುರಿ, ಕಡ್ಲೆ ಹಿಟ್ಟಿನ ಚಟ್ನಿಗೂ ಬೇಡಿಕೆ ಜಾಸ್ತಿ. ಹೀಗಾಗಿ ದಿನಕ್ಕೆ ₹10-15 ಸಾವಿರ ವ್ಯಾಪಾರ ನಡೆಯುತ್ತಿತ್ತು. ಈಗ ₹5-6 ಸಾವಿರ ವ್ಯಾಪಾರ ಆಗುತ್ತದೆ. ಪುರಿ ವ್ಯಾಪಾರ ಯಾವತ್ತೂ ಜೋರಾಗಿಯೇ ಇರುತ್ತದೆ. ದಿನಕ್ಕೆ ಲಸ್ಸಿಗಾಗಿ 25 ಲೀಟರ್ ಹಾಲು ಖರ್ಚಾಗುತ್ತದೆ. ಮದುವೆ ಸೀಸನ್‌ನಲ್ಲಿ ಮಸಾಲಾ ರೈಸ್, ಚುರಮುರಿ ಮಿಸಳಕ್ಕೆ ಹೆಚ್ಚು ಬೇಡಿಕೆ. ನಮ್ಮಲ್ಲಿ ಎಲ್ಲ ರೀತಿಯ ತಿಂಡಿ ಮಾಡುತ್ತಿದ್ದರೂ, ಪುರಿ, ಮಸಾಲಾ ರೈಸ್ ಮತ್ತು ಲಸ್ಸಿಗೆ ಜನರ ಮೆಚ್ಚುಗೆ ಕೇಳಿ ಬರುತ್ತದೆ’ ಎಂದು ಖುಷಿಯಿಂದಲೇ ಹೇಳಿದರು.

ADVERTISEMENT

‘ಊಟದ ಆರ್ಡರ್ ಕೂಡ ಬರುತ್ತವೆ. ಶಿಕ್ಷಣ ಇಲಾಖೆಯ ಯಾವುದೇ ಸಭೆ ನಡೆದರೂ ನಮಗೇ ಆರ್ಡರ್ ಕೊಡುತ್ತಾರೆ. ನಮಗೆ ಹೋಟೆಲ್ ವೊಂದೇ ಆಸರೆ. ಹೀಗಾಗಿ ನಾನು ಮತ್ತು ಪತಿ ಇಬ್ಬರೂ ದುಡಿಯುತ್ತೇವೆ. ಆದರೆ, ಆಹಾರ ಸಿದ್ಧಪಡಿಸುವುದು ನಾನೆ’ ಎಂದು ಹೇಳುವಾಗ ಅವರಲ್ಲಿ ಹೆಮ್ಮೆಯ ಭಾವ.

‘ನಾನು ಮಹಾರಾಷ್ಟ್ರ ಮೂಲದಿಂದ ಬಂದಿದ್ದರಿಂದ ನನ್ನಲ್ಲಿ ಸ್ವಾಭಾವಿಕವಾಗಿ ಧೈರ್ಯ, ಗಟ್ಟಿಗತನ ಬೆಳೆದು ಬಂದಿದೆ. ಹೋಟೆಲ್ ಉದ್ಯಮ ಮೊದಲಿನಿಂದಲೂ ನನಗಿಷ್ಟವಾದ ರಂಗ’ ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.

‘ನನ್ನ ಮಗನ ಜನ್ಮದಿನ ಕಾರ್ಯಕ್ರಮಕ್ಕೆ ನೂರಾರು ಜನರಿಗೆ ಇದೇ ಹೋಟೆಲ್‌ನ ಇಡ್ಲಿ, ವಡಾ, ಸಾಂಬಾರ ಆರ್ಡರ್ ಕೊಟ್ಟಿದ್ದೆ. ತಿಂಡಿ ತುಂಬಾ ಚೆನ್ನಾಗಿ ಮಾಡಿದ್ದರು. ಅತಿಥಿಗಳೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದೂ ಉಂಟು’ ಎಂದು ಪ್ರಾಧ್ಯಾಪಕ ಸಿದ್ಧಲಿಂಗ ಕಿಣಗಿ ಹೇಳುತ್ತಾರೆ.

‘ಬಮ್ಮಣ್ಣಿ ಲಸ್ಸಿ ತುಂಬಾ ಸ್ವಾದಿಷ್ಟವಾದುದು. ನನಗೆ ಸಕ್ಕರೆ ಕಾಯಿಲೆ ಇದ್ದರೂ ಲಸ್ಸಿ ಕುಡಿಯುತ್ತೇನೆ. ಒಮ್ಮೆ ಕುಡಿದರೆ ಮತ್ತೆ, ಮತ್ತೆ ಕುಡಿಯಬೇಕು ಎನಿಸುತ್ತದೆ’ ಎಂದು ಸಿದ್ದು ಪಾಟೀಲ ಲಸ್ಸಿ ಬಗ್ಗೆ ಕೊಂಡಾಡಿದರು.

ಸಂಪರ್ಕ: 94821 13319

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.