ವಿಜಯಪುರ: ಸರ್ವರ ಒಳಿತಿಗಾಗಿ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣಗುರುಗಳು ಮಾನವ ಜನಾಂಗದ ಗುರು ಆಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣಗುರುಗಳು ಸಮಾಜದಲ್ಲಿನ ಮೂಢನಂಬಿಕೆ, ಅಸಮಾನತೆ ನಿವಾರಿಸಲು ಹಾಗೂ ಸಮಾಜ ಸುಧಾರಣೆಗಾಗಿ ಶ್ರಮಿಸಿದ್ದಾರೆ ಎಂದರು.
ಮೌಢ್ಯತೆ, ಶೋಷಣೆಗಳಿಂದ ತುಂಬಿದ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಬ್ರಹ್ಮಶ್ರೀ ಅವರ ಆದರ್ಶ-ವಿಚಾರಗಳ ಬಗ್ಗೆ ಅರಿವು ಹೊಂದಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.
ನಾರಾಯಣ ಗುರುಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು, ಎಲ್ಲರಿಗೂ ಆದರ್ಶಪ್ರಾಯರಾದ ಸಮಾಜ ಸುಧಾರಕರಾಗಿದ್ದಾರೆ ಎಂದು ಹೇಳಿದರು.
ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹನೀಯರ ಆದರ್ಶ ಜೀವನ ಚರಿತೆಯನು ನಾವು ಅರಿಯಬೇಕಾಗಿದೆ. ಬ್ರಹ್ಮಶ್ರೀ ನಾರಾಯಣ ಗುರಗಳವರ ತತ್ವಾದರ್ಶಗಳು, ಚಿಂತನೆಗಳನ್ನು ಮುಂದಿನ ಯುವ ಪೀಳಿಗೆಗೆ ತಲುಪಿಸಬೇಕಾಗಿದೆ. ಅವರ ತತ್ವಾದರ್ಶದಲ್ಲಿ ನಡೆದು ಸಶಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಅವರು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಡಾ.ಎಂ.ಎಸ್.ಮಾಗಣಗೇರಿ, ಬ್ರಹ್ಮಶ್ರೀ ನಾರಾಯಣಗುರುಗಳು ಅಸಮಾನತೆ ಹಾಗೂ ಶೋಷಣೆ ವಿರುದ್ಧ ಹೋರಾಡಿ, ಎಲ್ಲರೂ ಪರಸ್ಪರ ಗೌರವಿಸುವಂತಹ ಸಮ ಸಮಾಜದ ನಿರ್ಮಾಣಕ್ಕೆ ಒತ್ತು ನೀಡಿದವರು ಎಂದು ಹೇಳಿದರು.
ಬ್ರಹ್ಮಶ್ರೀ ನಾರಾಯಣಗುರುಗಳು ಅದ್ದೂರಿ ವಿವಾಹ, ಮಹಿಳೆಯರ ಶೋಷಣೆ, ಸಮಾಜದಲ್ಲಿನ ಮೌಡ್ಯತೆಗಳಂತಹ ಅನಿಷ್ಠ ಪದ್ಧತಿ ವಿರೋಧಿಸಿ ಅವುಗಳನ್ನು ತೊಡೆದು ಹಾಕಲು ಶಿಕ್ಷಣದಿಂದಲೇ ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಕಾಂತ ಕುಂಬಾರ, ಡಿವೈಎಸ್‍ಪಿ ಎಂ.ಎ.ಉಪಾಸೆ, ಬಸವರಾಜ ಈಳಿಗೇರ ಉಪಸ್ಥಿತರಿದ್ದರು.
ಬ್ರಹ್ಮಶ್ರೀ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಅಸಮಾನತೆ, ಶೋಷಣೆ ವಿರುದ್ಧ ಹೋರಾಡಿದ ಶ್ರೀಗಳು ಅದ್ದೂರಿ ವಿವಾಹ, ಮಹಿಳೆಯರ ಶೋಷಣೆಗೆ ವಿರೋಧ
‘ಒಂದೇ ಜಾತಿ ಒಂದೇ ಮತ ಒಂದೇ ದೇವರು’ ಎಂದು ಇಡೀ ಮನುಕುಲಕ್ಕೇ ಸಾರಿದ ಸಂತಶ್ರೇಷ್ಠ ನಾರಾಯಣಗುರುಗಳ ಸಂದೇಶವು ಅತ್ಯಂತ ಪ್ರಸ್ತುತವಾಗಿದೆ- ಸೋಮಲಿಂಗ ಗೆಣ್ಣೂರುಹೆಚ್ಚುವರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.