ADVERTISEMENT

ವಿಜಯಪುರ | ನವರಾತ್ರಿ ಉತ್ಸವ; ಮರಳಿನಲ್ಲಿ ಅವತರಿಸಿದ ಆದಿಶಕ್ತಿ

115 ಟನ್ ಮರಳು, 5 ಸಾವಿರ ನಿಂಬೆ ಹಣ್ಣುಗಳ ಬಳಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 7:25 IST
Last Updated 18 ಅಕ್ಟೋಬರ್ 2023, 7:25 IST
ಶಹಾಪೇಟಿಯ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿಯಿಂದ ಮರಳಿನಲ್ಲಿ ನಿರ್ಮಿಸಲಾದ ಆದಿಶಕ್ತಿ ದೇವಿಯ ಭವ್ಯ ಪ್ರತಿಮೆ
ಶಹಾಪೇಟಿಯ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿಯಿಂದ ಮರಳಿನಲ್ಲಿ ನಿರ್ಮಿಸಲಾದ ಆದಿಶಕ್ತಿ ದೇವಿಯ ಭವ್ಯ ಪ್ರತಿಮೆ   

–ಆನಂದ ರಾಠೋಡ

ವಿಜಯಪುರ: ನವರಾತ್ರಿ ಉತ್ಸವ ಎಂದಾಕ್ಷಣ ವಿಜಯಪುರದ ಜನತೆಗೆ ಥಟ್ಟನೆ ನೆನಪಾಗೋದು ಶಹಾಪೇಟಿಯ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿ. ಪ್ರತಿ ವರ್ಷವೂ ವಿಶೇಷತೆ ಮೆರೆದಿರುವ ಈ ಮಂಡಳಿಯು ಈ ಬಾರಿ ಮರಳಿನಲ್ಲಿ ಆದಿಶಕ್ತಿ ದೇವಿಯ ಭವ್ಯ ಪ್ರತಿಮೆ ನಿರ್ಮಿಸಿ ವಿಶೇಷ ಸ್ಪರ್ಶ ನೀಡಿದೆ.

ಖ್ಯಾತ ಮರಳು ಕಲಾವಿದ ಸುದರ್ಶನ ಪಟ್ನಾಯಕ್ ಅವರ ಕೈಚಳಕದಲ್ಲಿ ಆದಿಶಕ್ತಿ ದೇವಿಯ ಭವ್ಯ ಪ್ರತಿಮೆ ಅರಳಿದ್ದು, ಈ ಹಿಂದೆಯೂ ಸಹ ಸುದರ್ಶನ ಅವರು ಇದೇ ಸ್ಥಳದಲ್ಲಿ ಮರಳಿನಲ್ಲಿ ದೇವಿಯ ಸುಂದರ ಪ್ರತಿಮೆಯನ್ನು ಅರಳಿಸಿದ್ದರು. ಆದರೆ ಈ ಬಾರಿ ಮರಳಿನ ಪ್ರತಿಮೆಗೆ ವಿಶೇಷ ಸ್ಪರ್ಶ ನೀಡಿದ್ದಾರೆ.

ADVERTISEMENT

ಭಕ್ತಗಣ ಮಂಟಪವನ್ನು ಪ್ರವೇಶಿಸಿದಾಗ ಒಂದು ರೀತಿ ಸಮುದ್ರ ತೀರದಲ್ಲಿ ಬಂದ ಸುಂದರ ಅನುಭವ ಉಂಟಾಗುತ್ತದೆ. ಸಮುದ್ರ ತಟದಲ್ಲಿ ದೇವಿಯ ಸನ್ನಿಧಿಯಲ್ಲಿ ಕುಳಿತಿದ್ದೇವೆ ಎನ್ನುವ ಭಾವ ಉಂಟಾಗುತ್ತದೆ. ಸುತ್ತಲೂ ಸಮುದ್ರ ಮಾದರಿಯ ವೇದಿಕೆ, ಅಲ್ಲೇ ಸುಂದರವಾದ ಆದಿಶಕ್ತಿ ದೇವಿ ಪ್ರತಿಮೆ ನೋಡುಗರನ್ನು ಮಂತ್ರಮುಗ್ದರನ್ನಾಗಿಸುತ್ತಿದೆ.

ಓಡಿಸ್ಸಾದ ಸುದರ್ಶನ ಪಟ್ನಾಯಕ್ ಹಾಗೂ ಅವರ ತಂಡ ಸುಮಾರು 115 ಟನ್ ಸಮುದ್ರ ಮರಳಿನಲ್ಲಿ ಈ ಸುಂದರ ಪ್ರತಿಮೆಗೆ ಸ್ಪರ್ಶ ನೀಡಿದ್ದು, ದೇವಿಯ ಸುತ್ತಲೂ ನಿಂಬೆಹಣ್ಣಿನ ಅಲಂಕಾರ ಮಾಡಲಾಗಿದೆ. ಸುಮಾರು 5 ಸಾವಿರ ನಿಂಬೆ ಹಣ್ಣುಗಳನ್ನು ಬಳಕೆ ಮಾಡಲಾಗಿದೆ. ಜೊತೆಗೆ ವಿಶ್ವಕಪ್ ಗೆಲ್ಲಲ್ಲು ಪ್ರಾರ್ಥಿಸುತ್ತಿರುವ ರೋಹಿತ್ ಶರ್ಮಾ ಅವರು ನಮಿಸುತ್ತಿರುವ ದೃಶ್ಯ ಎಲ್ಲರನ್ನು ಕೇಂದ್ರಿಕರಿಸುತ್ತದೆ.

ಪ್ರತಿ ವರ್ಷವೂ ಒಂದಿಲ್ಲ ಒಂದು ರೀತಿಯಲ್ಲಿ ನಾಡದೇವಿ ಉತ್ಸವ ಆಚರಿಸುತ್ತಾ ಬಂದಿರುವ ಈ ಸಮಿತಿ. ರಾಜಸ್ಥಾನದ ಭವ್ಯ ಅರಮನೆ, ದೇವಿಯ ಬೃಹತ್ ಮಂದಿರ ಹೀಗೆ ಅನೇಕ ಬಾರಿ ವಿಶೇಷ ಅಲಂಕಾರಕ್ಕೆ ಒತ್ತು ನೀಡುತ್ತಲೇ ಬಂದಿದೆ. ಈ ಬಾರಿಯೂ ಮರಳಿನಲ್ಲಿ ನಿರ್ಮಾಣವಾಗಿರುವ ದೇವಿಯ ಕಲಾಕೃತಿಯನ್ನು ನೋಡಲು ಜಿಲ್ಲೆಯ ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ನಾಡದೇವಿ ಉತ್ಸವದ ಅಂಗವಾಗಿ ಪ್ರತಿವರ್ಷವೂ ಹಿರಿಯರ ಸಹಕಾರ ಮಾರ್ಗದರ್ಶನ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗಿದೆ. ಈ ವರ್ಷವೂ ಮರಳಿನಲ್ಲಿ ದೇವಿಯ ಪ್ರತಿಮೆ ನಿರ್ಮಿಸಲಾಗಿದೆ.
–ರಾಜೇಶ ದೇವಗಿರಿ ಸಂಚಾಲಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.