
ಆಲಮಟ್ಟಿಯಲ್ಲಿ ರೋಗ ಬಾಧೆಯಿಂದ ಒಣಗಿದ ಬೇವಿನ ಮರಗಳು
ಆಲಮಟ್ಟಿ: ಸಸ್ಯಗಳ ಕಾಶಿ ಎಂದೇ ಖ್ಯಾತವಾಗಿರುವ ಆಲಮಟ್ಟಿ ಡ್ಯಾಂಸೈಟ್ ಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿರುವ ಬೇವಿನ ಮರಗಳು ಒಣಗುತ್ತಿದ್ದು, ಎಲೆಗಳೆಲ್ಲಾ ಹಳದಿ ಬಣ್ಣಕ್ಕೆ ತಿರುಗಿವೆ.
ರೋಗ ನಿರೋಧಕ ಶಕ್ತಿ ಹೊಂದಿರುವ ಅನೇಕ ರೋಗಗಳಿಗೆ ಔಷಧಿಯಾಗಿ ಬಳಕೆಯಾಗುವ ಬೇವಿಗೆ ಇಂಥ ಕುತ್ತು ಬಂದಿದೆ. ಸಹಸ್ರಾರು ಬೇರೆ ಬೇರೆ ಜಾತಿಯ ಗಿಡಗಳಿದ್ದರೂ ಕೇವಲ ಬೇವಿನ ಮರಗಳಿಗೆ ಮಾತ್ರ ಈ ರೀತಿಯ ರೋಗ ಕಂಡು ಬಂದಿದ್ದು, ಎಲೆಗಳೆಲ್ಲಾ ಒಣಗಿ ನಿಂತಿವೆ.
ಸದ್ಯ ಆಲಮಟ್ಟಿ ರೇಲ್ವೆ ಸ್ಟೇಷನ್‌ನಿಂದ ಜವಾಹರ ನವೋದಯ ಶಾಲೆಯ ಮಾರ್ಗದ ಉದ್ದಕ್ಕೂ ಎರಡೂ ಬದಿ ಹತ್ತಾರು ಬೇವಿನ ಮರಗಳು ಸಂಪೂರ್ಣ ಒಣಗಿವೆ. ಆಲಮಟ್ಟಿಯಿಂದ ಸೀತಿಮನಿ ಮಾರ್ಗದುದ್ದಕ್ಕೂ (ರೈಲು ಮಾರ್ಗ) ಅಕ್ಕ ಪಕ್ಕ ಹಚ್ಚಿರುವ ಬೇವಿನ ಗಿಡಗಳೆಲ್ಲವೂ ಒಣಗಿವೆ.
ಸಾಲಾಗಿರುವ ಈ ಬೇವಿನ ಮರಗಳು ಒಣಗಿದ್ದು, ಈ ರೋಗ ಇನ್ನೀತರ ಅಕ್ಕ ಪಕ್ಕದ ಬೇವಿನ ಮರಗಳಿಗೆ ಕ್ರಮೇಣ ವಿಸ್ತಾರಗೊಳ್ಳುತ್ತಿದೆ. ಚಿಕ್ಕ, ಚಿಕ್ಕ ಬೇವಿನ ಗಿಡಗಳು ಸೇರಿ, 20 ವರ್ಷ ಹಳೆಯದಾದ ದೊಡ್ಡ ದೊಡ್ಡ ಮರಗಳಿಗೂ ಈ ರೋಗದ ಬಾಧೆ ತಗುಲಿದೆ.
ಆಲಮಟ್ಟಿಯಲ್ಲಿ 100ಕ್ಕೂ ಹೆಚ್ಚು ಮರಗಳಿಗೆ ಈ ರೀತಿಯ ರೋಗ ತಗುಲಿದ್ದು, ಇನ್ನುಳಿದ ಬೇವಿನ ಮರಗಳು ಹಚ್ಚು ಹಸರಾಗಿವೆ. ಅವಕ್ಕೂ ಈ ರೋಗ ತಗಲುವ ಸಾಧ್ಯತೆಯಿದೆ.
ಮರಗಳ ರಕ್ಷಣೆಗೆ ಆಗ್ರಹ: ‘ರೋಗದ ಬಗ್ಗೆ ತಜ್ಞರಿಂದ ಪರಿಶೀಲನೆ ನಡೆಸಿ, ಅದಕ್ಕೆ ಕಾರಣ ಏನು? ಎಂಬುದನ್ನು ತಿಳಿದು, ಈಗ ರೋಗ ತಗುಲಿರುವ ಗಿಡಗಳಿಗೆ ಸೂಕ್ತ ರಾಸಾಯನಿಕ ಸಿಂಪಡಣೆ ಮಾಡಿ, ಗಿಡ ರಕ್ಷಿಸಬೇಕು. ಜತೆಗೆ ಇನ್ನುಳಿದ ಗಿಡಗಳಿಗೂ ಈ ರೋಗ ತಗುಲದಂತೆ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯು ತಕ್ಷಣ ಕ್ರಮ ಕೈಗೊಳ್ಳಬೇಕು‘ ಎಂದು ಕರವೇ ಆಲಮಟ್ಟಿ ಘಟಕದ ಅಧ್ಯಕ್ಷ ಫತ್ತೇಸಾಬ್ ಚಾಂದ್, ಉಪಾಧ್ಯಕ್ಷ ಚಂದ್ರಶೇಖರ ಹೆರಕಲ್ಲ ಮತ್ತೀತರರು ಆಗ್ರಹಿಸಿದ್ದಾರೆ.
ಟೀ ಮಾಸ್ಕ್ಯುಟೋ ಬಗ್ ಕಾಯಿಲೆ: ‘ಆಲಮಟ್ಟಿ ಹಾಗೂ ಸುತ್ತಮುತ್ತ ಬೇವಿನ ಗಿಡಗಳು ಒಣಗುತ್ತಿರುವುದಕ್ಕೆ ’ಟೀ ಮಾಸ್ಕ್ಯುಟೋ ಬಗ್' ಎಂಬ ಕಾಯಿಲೆ ಕಾರಣ. ಈ ಕೀಟಗಳು ಕೇವಲ ಬೇವಿನ ಗಿಡಗಳನ್ನು ಗುರಿಯನ್ನಾಗಿಸಿ, ಆ ಗಿಡಗಳ ಟೊಂಗೆ, ಕಾಂಡಗಳಲ್ಲಿನ ರಸವನ್ನು ಹೀರುತ್ತವೆ. ಕೀಟಗಳು ಸಸ್ಯ ಅಂಗಾಂಶಗಳನ್ನು ಕೊಲ್ಲುವ ಕಿಣ್ವಗಳನ್ನು ಚುಚ್ಚುತ್ತವೆ, ಇದರಿಂದಾಗಿ ಅವು ಕಂದು ಬಣ್ಣಕ್ಕೆ ತಿರುಗಿ ಸುಟ್ಟು ಹೋದಂತೆ ಕಾಣುತ್ತವೆ’ ಎಂದು ಆಲಮಟ್ಟಿ ಅರಣ್ಯ ಇಲಾಖೆಯ ಆರ್.ಎಫ್.ಓ. ಮಹೇಶ ಪಾಟೀಲ ಹೇಳಿದರು.
’ರೋಗ ತಗುಲಿದ ಮರಗಳನ್ನು ಪರಿಶೀಲಿಸಲಾಗಿದೆ. ಬೇರುಗಳಿಗೆ ಯಾವುದೇ ಹಾನಿಯಾಗಿಲ್ಲ, ಟೊಂಗೆ ಹಾಗೂ ಎಲೆಗಳಿಗೆ ಹಾನಿಯಾಗಿದೆ. ಈಗಾಗಲೇ ತಜ್ಞರನ್ನು ಸಂಪರ್ಕಿಸಲಾಗಿದ್ದು, ಅವರು ಶಿಫಾರಸು ಮಾಡುವ ರಾಸಾಯನಿಕವನ್ನು ಸಿಂಪಡಿಸಲಾಗುವುದು’ ಎಂದು ಅವರು ತಿಳಿಸಿದರು. ರೋಗ ಬಾಧೆಯುಳ್ಳ ಎಲ್ಲಾ ಮರಗಳನ್ನು ರಕ್ಷಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.