ADVERTISEMENT

‘ದೇಶದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಅವಶ್ಯಕ’

ಫಾಲ್ಕಾನ್ ನ್ಯೂ ಇರಾ ವಿಜ್ಞಾನ ಪಿಯು ಕಾಲೇಜು, ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 4:52 IST
Last Updated 8 ಜುಲೈ 2025, 4:52 IST
ಸಿಂದಗಿ ಪಟ್ಟಣದ ಅಂಜುಮನ್ ಕಾಲೇಜು ಆವರಣದಲ್ಲಿ ಸೋಮವಾರ ಫಾಲ್ಕಾನ್ ನ್ಯೂ ಇರಾ ವಿಜ್ಞಾನ ಪಿಯು ಕಾಲೇಜಿನ ಟಾಪರ್ಸ್ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಿಂದಗಿ ಪಟ್ಟಣದ ಅಂಜುಮನ್ ಕಾಲೇಜು ಆವರಣದಲ್ಲಿ ಸೋಮವಾರ ಫಾಲ್ಕಾನ್ ನ್ಯೂ ಇರಾ ವಿಜ್ಞಾನ ಪಿಯು ಕಾಲೇಜಿನ ಟಾಪರ್ಸ್ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.   

ಸಿಂದಗಿ: ದೇಶದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಅವಶ್ಯಕವಾಗಿದೆ. ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ (ಎನ್ಇಪಿ) ಪರಿಕಲ್ಪನೆ ಜಾರಿಗೆ ತಂದಿದ್ದರೂ. ಕೆಲವು ರಾಜ್ಯಗಳು ಒಪ್ಪದ ಕಾರಣ ಅನುಷ್ಠಾನಗೊಳ್ಳಲಿಲ್ಲ. ಈ ಶಿಕ್ಷಣ ನೀತಿ ಅನುಷ್ಠಾನಗೊಂಡಿದ್ದರೆ ಗುಣಮಟ್ಟದ ಶಿಕ್ಷಣ ದೊರಕಬಹುದಿತ್ತು ಎಂದು ಇಲ್ಲಿಯ ಸಿ.ಎಂ. ಮನಗೂಳಿ ಪದವಿ ಕಾಲೇಜಿನ ಪ್ರಾಧ್ಯಾಪಕ ಅರವಿಂದ ಮನಗೂಳಿ ಅಭಿಪ್ರಾಯಪಟ್ಟರು.

ಪಟ್ಟಣದ ಅಂಜುಮನ್ ಕಾಲೇಜು ಆವರಣದಲ್ಲಿ ಸೋಮವಾರ ಫಾಲ್ಕಾನ್ ನ್ಯೂ ಇರಾ ವಿಜ್ಞಾನ ಪಿಯು ಕಾಲೇಜು, ನ್ಯೂ ಇರಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪಿಯು ಮತ್ತು ಎಸ್.ಎಸ್.ಎಲ್.ಸಿ ಟಾಪರ್ಸ್‌ಗಳಿಗೆ ಗೌರವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಶಿಕ್ಷಣ ಪದ್ಧತಿಯಿಂದ ವಿದ್ಯಾರ್ಥಿಗಳು ಶಿಕ್ಷಣವಂತರಾಗುತ್ತಿದ್ದಾರೆ. ಆದರೆ ಸಂಸ್ಕಾರವಂತರಾಗುತ್ತಿಲ್ಲ. ಭಾರತೀಯ ಪ್ರತಿಭೆಗಳು ಭಾರತದಲ್ಲಿ ವಿಜೃಂಭಿಸದೇ ವಿದೇಶಗಳಲ್ಲಿ ವಿಜೃಂಭಿಸುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಸರ್ಕಾರ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾನವ ಸಂಪನ್ಮೂಲ ಒದಗಿಸುತ್ತಿಲ್ಲ. ಶಾಲೆ-ಕಾಲೇಜುಗಳಲ್ಲಿ ಶಿಕ್ಷಕ ಹುದ್ದೆ ಭರ್ತಿಗೆ ಅವಕಾಶ ನೀಡುತ್ತಿಲ್ಲ. ಅರೆಕಾಲಿಕ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷೆ ಮಾಡುವುದು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ ಸರಿಯಲ್ಲ. ಸರ್ಕಾರಿ ಶಾಲೆ-ಕಾಲೇಜುಗಳಿಗೆ ಇಲ್ಲದ ಹೊರೆಯೆಲ್ಲ ಖಾಸಗಿ ಸಂಸ್ಥೆಗಳ ಮೇಲೆ ಹಾಕಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ‘ಮುಸ್ಲಿಮರಲ್ಲಿ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಶಿಕ್ಷಣವಂತರಾಗದಿದ್ದರೆ ಮುಸ್ಲಿಂ ಸಮುದಾಯ ಉದ್ಧಾರ ಆಗುವದಿಲ್ಲ. ಅಂತೆಯೇ ದೇಶದಲ್ಲಿ ನೂರು ವರ್ಷದ ಸಂಘಟನೆಯೊಂದು ಮುಸ್ಲಿಮರ ವಿರುದ್ಧ ಅವಹೇಳನ ನಿಲ್ಲಿಸುತ್ತಿಲ್ಲ. ಕೋಮುವಾದ ಎಂಬ ರೋಗ ದೇಶದಿಂದ ತೊಲಗದಿದ್ದರೆ ದೇಶದ ಆರೋಗ್ಯ, ಸಾಮರಸ್ಯ ಹಾಳಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ವಿಜ್ಞಾನ ಪಿಯು ವಿದ್ಯಾರ್ಥಿನಿ ಶಾರ್ವಾಣಿ ಹಿರೇಮಠ ಒಳಗೊಂಡಂತೆ 10 ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಇಂಗ್ಲಿಷ್‌ ಮಾಧ್ಯಮ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಮುಸ್ಕಾನ್ ನಾಟೀಕಾರ ಒಳಗೊಂಡು 14 ಪ್ರತಿಭಾವಂತ ವಿದ್ಯಾರ್ಥಿಗಳನ್ನು ರಾಂಪುರ ಪಿ.ಎ ಆರೂಢಮಠದ ನಿತ್ಯಾನಂದ ಮಹಾರಾಜರು ಗೌರವಿಸಿದರು.

ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಎ.ಎ.ದುದನಿ, ನ್ಯೂ ಇರಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಧ್ಯಕ್ಷ ಮಹಿಬೂಬ ಹಸರಗುಂಡಗಿ, ಆಡಳಿತ ಮಂಡಳಿಯ ನಿರ್ದೇಶಕರಾದ ಎ.ಎ.ಮುಲ್ಲಾ, ಝಡ್.ಐ.ಅಂಗಡಿ, ಆಲಮೇಲ ಅಂಜುಮನ್ ಸಂಸ್ಥೆಯ ರಾಜಅಹ್ಮದ ಬೆಣ್ಣೆಶಿರೂರ, ಪ್ರಾಚಾರ್ಯೆ ಮುಬೀನಾ ಸುಲ್ತಾನ್, ಮುಖ್ಯ ಶಿಕ್ಷಕಿ ಲೀಲಾ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.