
ಆಲಮಟ್ಟಿ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಿ, ನಿರ್ವಹಣೆ ಮಾಡಲಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ-50 ರ ವಿಜಯಪುರದಿಂದ ಆಲಮಟ್ಟಿ ವರೆಗೆ ಸಂಪೂರ್ಣ ಹದಗೆಟ್ಟರೂ ಅದರ ದುರಸ್ತಿಗೆ ಯಾರೂ ಮುಂದಾಗುತ್ತಿಲ್ಲ.
ಸೋಲಾಪುರದಿಂದ ಚಿತ್ರದುರ್ಗದವರೆಗೆ ವ್ಯಾಪ್ತಿಯನ್ನು ಹೊಂದಿರುವ ಈ ರಾಷ್ಟ್ರೀಯ ಹೆದ್ದಾರಿ-50 ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಉತ್ತರ–ದಕ್ಷಿಣ ರಾಜ್ಯಗಳ ಸಂಪರ್ಕ ಸೇತುವೆಯಾಗಿದೆ. ಇಂಥ ಪ್ರಮುಖ ಹೆದ್ದಾರಿಯು ವಿಜಯಪುರದಿಂದ ಆಲಮಟ್ಟಿವರೆಗೆ ಸಂಪೂರ್ಣ ಕುಲಗೆಟ್ಟು ಹೋಗಿದೆ. ಡಾಂಬರು ಕಿತ್ತು ಹೋಗಿ ಅದೆಷ್ಟೋ ವರ್ಷಗಳಾಗಿದೆ. ಇನ್ನು ಅಲ್ಲಲ್ಲಿ ಬೃಹದಾಕಾರದ ಗುಂಡಿಯನ್ನೊಮ್ಮೆ ನೋಡಿದರೆನೇ ಜೀವ ಝಲ್ ಎನ್ನುತ್ತದೆ. ಇನ್ನು ಬೈಕ್, ಸ್ಕೂಟರ್‌ಗಳ ಮೂಲಕ ವೇಗವಾಗಿ ಬಂದು ಅಚಾನಕ್ ಆಗಿ ಬಿದ್ದರಂತೂ ಪ್ರಾಣಪಕ್ಷಿ ಉಳಿಯುವುದೆಂಬ ನಂಬಿಕೆಯಂತೂ ಇಲ್ಲವಾಗಿದೆ.
ಆಗಾಗ ಈ ಭಾಗದಲ್ಲಿ ಹದಗೆಟ್ಟ ಹೆದ್ದಾರಿಯಿಂದಾಗುವ ದುರಂತ ಅಪಘಾತಗಳೇ ಜೀವಂತ ಸಾಕ್ಷಿಗಳಾಗಿವೆ. ಇನ್ನು ಹೆದ್ದಾರಿಯ ಹಲವು ಕಡೆಗಳಲ್ಲಿ ರಸ್ತೆ ತಿರುವು, ರಸ್ತೆ ವಿಭಜಕ, ಅಪಘಾತ ವಲಯ, ಜನದಟ್ಟಣೆಯ ಪ್ರದೇಶ ಮತ್ತಿತರ ಸೂಚನಾ ಫಲಕಗಳೂ ಇಲ್ಲದಂತಾಗಿವೆ. ಹೀಗಾಗಿ ಇಲ್ಲಿ ಆಗಾಗ ಎದುರಾಗುವ ದುರಂತ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ನಿಡಗುಂದಿಯಿಂದ ಬೀರಲದಿನ್ನಿವರೆಗೆ, ನಿಡಗುಂದಿಯಿಂದ ಯಲಗೂರ ಕ್ರಾಸ್ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ನಿಡಗುಂದಿ ಪಟ್ಟಣದಲ್ಲಿ ಹಾಯ್ದು ಹೋಗಿರುವ ರಸ್ತೆಯಂತೂ ಸಂಪೂರ್ಣ ಗುಂಡಿಮಯವಾಗಿದೆ. ನಾನಾ ಕಡೆ ವೇಗ ನಿಯಂತ್ರಕ ತಡೆಗಳನ್ನು ಅಳವಡಿಸಿದರೂ ಅದಕ್ಕೆ ಸಾಕಷ್ಟು ಸೂಚನಾ ಫಲಕಗಳು ಇಲ್ಲ. ಇವು ಕೂಡಾ ಅಪಘಾತಕ್ಕೆ ಕಾರಣವಾಗಿವೆ.
ಹುನಗುಂದದಿಂದ-ವಿಜಯಪುರವರೆಗಿನ ರಾಷ್ಟ್ರೀಯ ಹೆದ್ದಾರಿ-50 ರ ದುರಸ್ತಿ ಕಾರ್ಯ ಕಳೆದ ಆಗಸ್ಟ್‌ನಲ್ಲಿ ಆರಂಭಗೊಂಡಿದೆ ಎನ್ನಲಾಗುತ್ತಿದ್ದು, ಅದು ಇನ್ನೂ ಈ ಭಾಗದಲ್ಲಂತೂ ಬಂದಿಲ್ಲ. ರಸ್ತೆ ದುರಸ್ತಿ ಎಂದು ಆರಂಭಗೊಳ್ಳುತ್ತದೆ ಎಂಬುದಕ್ಕೆ ಯಾವುದೇ ಸ್ಪಷ್ಟತೆಯಿಲ್ಲ. ಅದೆಷ್ಟು ಜನರ ಜೀವ ಬಲಿಯಾಗಬೇಕೋ ಎಂಬುದು ತಿಳಿಯದೇ ಸಾರ್ವಜನಿಕರು ಭಯಭೀತರಾಗಿರುವುದಂತು ಸತ್ಯ.
ಇಂತಹ ಹದಗೆಟ್ಟ ಹೆದ್ದಾರಿಯಲ್ಲಿ ಸಂಚರಿಸಲೂ ಭಾರಿ ಪ್ರಮಾಣ ಟೋಲ್ ಶುಲ್ಕ ಕೂಡಾ ನೀಡಬೇಕಿದೆ. ಹೆದ್ದಾರಿ ಹದಗೆಟ್ಟಿದ್ದಕ್ಕೆ ಗೊಳಸಂಗಿ ಬಳಿ ಒಂದೇ ತಿಂಗಳಲ್ಲಿ ಪ್ರತ್ಯೇಕ ಅಪಘಾತಕ್ಕೆ ಮೂವರು ಬಲಿಯಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-50 ತಗ್ಗು ದಿನ್ನೆಗಳಿಂದ ಕೂಡಿವೆ ಟೋಲ್ ಶುಲ್ಕವನ್ನು ಪಾವತಿಸಲಾಗುತ್ತದೆ. ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಹದಗೆಟ್ಟ ಹೆದ್ದಾರಿಯನ್ನು ದುರಸ್ತಿ ಮಾಡಬೇಕುಪ್ರಹ್ಲಾದ ಕರಿಯಣ್ಣವರ ಮುಖಂಡರು ನಿಡಗುಂದಿ
ಹುನಗುಂದ ಕಡೆಯಿಂದ ವಿಜಯಪುರವರೆಗಿನ ಎನ್ಎಚ್-50 ರ ದುರಸ್ತಿ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಇನ್ನೂ ಕೆಲ ತಿಂಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ-ದತ್ತಾತ್ರೆಯ ನಾಯಕ ವ್ಯವಸ್ಥಾಪಕ ಸಿಬ್ಬಂದಿ ವಿಜಯಪುರ-ಹುನಗುಂದ ಟೋಲ್ ವೇ ಪ್ರೈವೆಟ್ ಲಿ ವಿಜಯಪುರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.