ADVERTISEMENT

ಆಲಮಟ್ಟಿ: ಅರಣ್ಯ ಕಾರ್ಮಿಕರ ವೇತನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಆರು ತಿಂಗಳಿಂದ ಬಾರದ ವೇತನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 13:55 IST
Last Updated 12 ಡಿಸೆಂಬರ್ 2023, 13:55 IST
ಆಲಮಟ್ಟಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಉದ್ಯಾನದ ಅರಣ್ಯ ಇಲಾಖೆಯ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು
ಆಲಮಟ್ಟಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಉದ್ಯಾನದ ಅರಣ್ಯ ಇಲಾಖೆಯ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು   

ಆಲಮಟ್ಟಿ: ಆಲಮಟ್ಟಿಯ ವಿವಿಧ ಉದ್ಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ದಿನಗೂಲಿ ಕಾರ್ಮಿಕರಿಗೆ ಆರು ತಿಂಗಳಿನಿಂದ ವೇತನ ಪಾವತಿ ಮಾಡದಿರುವುದನ್ನು ಖಂಡಿಸಿ ಅರಣ್ಯ ದಿನಗೂಲಿಗಳು ಮಂಗಳವಾರ ಪ್ರತಿಭಟಿಸಿದರು.

ರಾಕ್ ಉದ್ಯಾನದಿಂದ ಮುಖ್ಯ ಎಂಜಿನಿಯರ್ ಕಚೇರಿಯವರೆಗೆ 100ಕ್ಕೂ ಹೆಚ್ಚು ಕಾರ್ಮಿಕರು ಮೆರವಣಿಗೆ ನಡೆಸಿ ವೇತನ ವಿಳಂಬ ಧೋರಣೆ ಖಂಡಿಸಿದರು.

ಮುಖ್ಯ ಎಂಜಿನಿಯರ್ ಕಚೇರಿ ಎದುರು ಸಂಜೆಯವರೆಗೂ ಪ್ರತಿಭಟನೆ ನಡೆಸಿದ ನೂರಾರು ಕಾರ್ಮಿಕರು, ಕಳೆದ 20 ವರ್ಷಗಳಿಂದ ಇಲ್ಲಿ ಕನಿಷ್ಠ ಕೂಲಿಗಾಗಿ ದುಡಿಯುತ್ತಿದ್ದೇವೆ, ನಿತ್ಯದ ವೇತನ ಕೇವಲ ₹500. ಕಳೆದ ಆರು ತಿಂಗಳಿಂದ ವೇತನ ನೀಡಿಲ್ಲ, ಇದರಿಂದ ನಿತ್ಯ ಜೀವನ ನಡೆಸುವುದು ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು.

ADVERTISEMENT

ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಸಿದರೂ ಅವರ ಸಮಸ್ಯೆಯನ್ನೂ ಆಲಿಸುವವರು ಯಾರೂ ಇರಲಿಲ್ಲ.

ಎಐಯುಟಿಯುಸಿ ಸಂಘಟನೆಯ ಜಿಲ್ಲಾ ಮುಖಂಡ ಎಚ್.ಟಿ. ಮಲ್ಲಿಕಾರ್ಜುನ ಆಗಮಿಸಿ, ಕಾರ್ಮಿಕರ ಸಮಸ್ಯೆಯ ಬಗ್ಗೆ ಮುಖ್ಯ ಎಂಜಿನಿಯರ್ ಎಚ್.ಸಿ. ಶ್ರೀನಿವಾಸ ಜತೆ ಚರ್ಚಿಸಿದರು.

ವೇತನ ನೀಡಲು ಭರವಸೆ: ಮುಖ್ಯ ಎಂಜಿನಿಯರ್ ಎಚ್.ಸಿ.ಶ್ರೀನಿವಾಸ ಹಾಗೂ ಪ್ರಧಾನ ಮುಖ್ಯ ಲೆಕ್ಕಾಧಿಕಾರಿ ವರದರಾಜು, ವಾರದೊಳಗೆ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅರಣ್ಯ ದಿನಗೂಲಿ ಕಾರ್ಮಿಕರಾದ ಲಕ್ಷ್ಮಣ ಬ್ಯಾಲ್ಯಾಳ, ಯಮನಪ್ಪ ತುಬಾಕಿ, ದ್ಯಾಮಣ್ಣ ಬಿರಾದಾರ, ಮಹೇಶ ತೆಲಗಿ, ಸತೀಶ ಮುಕಾರ್ತಿಹಾಳ, ರಮೇಶ ಅಸ್ಕಿ, ನಿಜವ್ವ ಗಾಂಜಿ, ಯಲ್ಲವ್ವ ಗುರುವರ ಪಾಲ್ಗೊಂಡಿದ್ದರು.

ಉದ್ಯಾನ ಬಂದ್

ಪ್ರವಾಸಿಗರ ಪರದಾಟ ದಿನಗೂಲಿ ಕಾರ್ಮಿಕರ ಪ್ರತಿಭಟನೆಯ ಕಾರಣ ಆಲಮಟ್ಟಿಯ ರಾಕ್ ಉದ್ಯಾನ ಕೃಷ್ಣಾ ಉದ್ಯಾನ ಲವಕುಶ ಉದ್ಯಾನ ಸಂಪೂರ್ಣ ಬಂದ್ ಮಾಡಲಾಗಿತ್ತು. ಕಾರ್ಮಿಕರು ಇಲ್ಲದ್ದರಿಂದ ಉದ್ಯಾನ ಬಂದ್ ಮಾಡಲು ಕೆಬಿಜೆಎನ್ ಎಲ್ ಅರಣ್ಯ ವಿಭಾಗ ನಿರ್ಧರಿಸಿತು. ಹಾಗಾಗಿ ಭೇಟಿಗೆ ಬಂದಿದ್ದ ಪ್ರವಾಸಿಗರು ಪರದಾಡಬೇಕಾಯಿತು. ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಮಕ್ಕಳಿಗೂ ನಿರಾಸೆಯಾಯಿತು. ಮಧ್ಯಾಹ್ನ 3 ಗಂಟೆಯ ನಂತರ ಉದ್ಯಾನ ಭೇಟಿ ಆರಂಭಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.