
ವಿಜಯಪುರ: ವಿಜಯಪುರ- ಚಿತ್ರದುರ್ಗ ಮತ್ತು ವಿಜಯಪುರ- ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50ರ ದುರಸ್ಥಿಗೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಬರೆದ ಪತ್ರಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಸ್ಪಂದಿಸಿದ್ದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಸೋಲಾಪುರದಿಂದ ಪ್ರಾರಂಭವಾಗಿ ರಾಜ್ಯದ ವಿಜಯಪುರ ಮೂಲಕ ಚಿತ್ರದುರ್ಗ ಮೂಲಕ ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಆಂತರರಾಜ್ಯ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾಗಿರುವ ಈ ರಸ್ತೆ ಹದಗೆಟ್ಟಿದೆ. ವಿಜಯಪುರದಿಂದ ಚಿತ್ರದುರ್ಗದವರೆಗೆ ರಸ್ತೆಯ ಮೇಲ್ಪದರು ಕಿತ್ತು ಹೋಗಿದೆ. ವಿಜಯಪುರ- ಸೋಲಾಪುರ ರಾಷ್ಟ್ರೀಯ ಹೆದ್ದಾರಿಯೂ ಬಹುತೇಕ ಹಾಳಾಗಿದೆ. ಈ ಎರಡೂ ಮಾರ್ಗಗಳಲ್ಲಿ ರಸ್ತೆ ಮಧ್ಯದಲ್ಲಿ ಕುಣಿಗಳು ಉಂಟಾಗಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇದರಿಂದ ವಾಹನಗಳ ಸಂಚಾರ ನಿಧಾನವಾಗಿದ್ದು, ದಿನನಿತ್ಯ ಸಂಚಾರಕ್ಕೆ ಸಾರ್ವಜನಿಕರಿಗೆ ಅಪಾಯ ಎದುರಾಗಿದೆ ಎಂದು ಸುನೀಲಗೌಡ ಪತ್ರದಲ್ಲಿ ಸಚಿವರ ಗಮನಕ್ಕೆ ತಂದಿದ್ದರು.
ಭಾರಿ ವಾಹನಗಳೂ ಈ ರಸ್ತೆಯಲ್ಲಿ ಸಂಚರಿಸುವುದರಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಿಸಲು ಕಾರಣವಾಗಿದೆ. ಅಲ್ಲದೇ, ಅತೀ ಹೆಚ್ಚು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಮಾರ್ಗವೂ ಒಂದಾಗಿದೆ. ಪ್ರತಿನಿತ್ಯ ಈ ಎರಡೂ ಮಾರ್ಗಗಳಲ್ಲಿ ಸುಮಾರು 27 ಸಾವಿರ ವಾಹನಗಳು ಸಂಚರಿಸುತ್ತವೆ. ದಿನೇ ದಿನೇ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ ಎಂದು ಪಾಟೀಲ ತಿಳಿಸಿದ್ದರು.
ವಿಜಯಪುರದಿಂದ ಬೆಂಗಳೂರು ಮಾರ್ಗದಲ್ಲಿ ಹುನಗುಂದ, ಕುಷ್ಟಗಿ ಹಾಗೂ ಹೊಸಪೇಟೆಗಳಿಗೆ ಬೇರೆ ಹೆದ್ದಾರಿಗಳು ಸಂಪರ್ಕಿಸುವುದರಿಂದ ಆ ಮಾರ್ಗದ ವಾಹನಗಳೂ ಇದೇ ರಸ್ತೆಗೆ ಸೇರಿ ವಾಹನ ದಟ್ಟಣೆ ಇನ್ನೂ ಹೆಚ್ಚಾಗುತ್ತಿದೆ ಎಂದು ಅವರು ಅಂಕಿ-ಅಂಶ ಸಮೇತ ಪತ್ರದಲ್ಲಿ ಪ್ರಸ್ತಾಪಿಸಿದ್ದರು.
ಅಷ್ಟೇ ಅಲ್ಲ, ಅತೀ ಹೆಚ್ಚು ಟೋಲ್ ಸಂಗ್ರಹವಾಗುವ ಮಾರ್ಗಗಳಲ್ಲಿ ಇದೂ ಒಂದಾಗಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಪ್ರತಿದಿನ ಸರಾಸರಿ ಸುಮಾರು ₹ 30 ಲಕ್ಷ ಟೋಲ್ ಸಂಗ್ರಹಿಸಲಾಗುತ್ತಿದೆ. ಇಷ್ಟೋಂದು ಟೋಲ್ ಹಣ ಸಂಗ್ರಹವಾಗುತ್ತಿದ್ದರೂ ರಸ್ತೆ ಮಾತ್ರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾನದಂಡಕ್ಕೆ ಅನುಗುಣವಾಗಿರದೇ ಕಳಪೆಯಾಗಿದೆ. ಆದ್ದರಿಂದ ಈ ರಸ್ತೆಯನ್ನು ನಿರ್ದಿಷ್ಠ ಮಾನದಂಡಗಳಿಗೆ ಅನುಗುಣವಾಗಿ ದುರಸ್ತಿ ಮಾಡಿ ಮೂಲ ಸೌಲಭ್ಯ ಒದಗಿಸಬೇಕು. ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಿ ಹೆದ್ದಾರಿಯಲ್ಲಿ ಹೊಸದಾಗಿ ಮೇಲ್ಪದರು ಹಾಕಬೇಕು. ಅಗತ್ಯವಿರುವ ಕಡೆ ಹೆದ್ದಾರಿಯನ್ನು ಅಗಲೀಕರಣ ಮಾಡಬೇಕು ಎಂದು ತಮ್ಮ ಪತ್ರದಲ್ಲಿ ಮಾಹಿತಿ ನೀಡಿದ್ದರು.
ಕೇಂದ್ರ ಸಚಿವರು ಮುತುವರ್ಜಿ ವಹಿಸಿ, ಈ ರಸ್ತೆ ದುರಸ್ಥಿ ಮಾಡಿಸಿದರೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರಿಗೆ ಸಂಚಾರಕ್ಕೆ ಅನುಕೂಲ ಒದಗಿಸಬೇಕು. ಇದರಿಂದ ಈ ಮಾರ್ಗದಲ್ಲಿ ಬರುವ ಬಹಳಷ್ಟು ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳೇಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.