ADVERTISEMENT

ವಿಜಯಪುರ ಪಾಲಿಕೆಗೆ ಕೂಡಿಬಾರದ ಚುನಾವಣೆ: ಕುಂದು–ಕೊರತೆಗೆ ಇಲ್ಲ ಸ್ಪಂದನೆ

ಅಧಿಕಾರಿಗಳ ದರ್ಬಾರ್‌

ಬಸವರಾಜ ಸಂಪಳ್ಳಿ
Published 3 ಜುಲೈ 2021, 19:30 IST
Last Updated 3 ಜುಲೈ 2021, 19:30 IST
ವಿಜಯಪುರ ಮಹಾನಗರ ಪಾಲಿಕೆ ಕಚೇರಿ –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ಮಹಾನಗರ ಪಾಲಿಕೆ ಕಚೇರಿ –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಜುಲೈ 14ಕ್ಕೆ ಅವಧಿ ಮುಗಿದು ಬರೋಬ್ಬರಿ ಎರಡು ವರ್ಷವಾದರೂ ಮಹಾನಗರ ಪಾಲಿಕೆ ಚುನಾವಣೆ ನಡೆಯದೇ ನನೆಗುದಿಗೆ ಬಿದ್ದಿದೆ. ಪರಿಣಾಮ ಗುಮ್ಮಟ ನಗರ ವಾಸಿಗಳ ಕುಂದುಕೊರತೆಗಳಿಗೆ ಸ್ಪಂದನೆ ಇಲ್ಲದೇ ಸಮಸ್ಯೆಗಳು ಹಾಸುಹೊದ್ದು ಮಲಗಿವೆ.

ಕೆಲ ಹಿರಿಯ ರಾಜಕಾರಣಿಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಶಾಮೀಲಾಗಿ ತಮಗೆ ಬೇಕಾದಂತೆ ವಾರ್ಡ್‌ ವಿಂಗಡಣೆ ಮಾಡಿದ್ದಾರೆ, ಮೀಸಲಾತಿ ನಿಗದಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಆರು ಜನ ಮಾಜಿ ಕಾರ್ಪೊರೇಟರ್‌ಗಳು ಕಲಬುರ್ಗಿ ಹೈಕೋರ್ಟ್‌ ಪೀಠದಲ್ಲಿ ಪ್ರಶ್ನಿಸಿದ್ದರು.

ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್‌ ಪೀಠವು, ನಿಗದಿಪಡಿಸಿರುವ ವಾರ್ಡ್‌ ವಿಂಗಡಣೆ ಮತ್ತು ಮೀಸಲಾತಿ ಅವೈಜ್ಞಾನಿಕವಾಗಿದ್ದು, ಹೊಸದಾಗಿ ವೈಜ್ಞಾನಿಕವಾಗಿ ವಾರ್ಡ್‌ ವಿಂಗಡೆ ಮಾಡಬೇಕು ಹಾಗೂ ಮೀಸಲಾತಿಯನ್ನು ಸರಿಪಡಿಸಬೇಕು ಎಂದು ಆದೇಶಿಸಿತ್ತು. ಆದರೆ, ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಮತ್ತಷ್ಟು ಜನ ಸುಪ್ರೀಂಕೋರ್ಟ್‌ ಮೊರೆ ಹೋಗಿ ತಡೆ ತಂದಿದ್ದಾರೆ.

ADVERTISEMENT

ಕೋವಿಡ್‌ ಪರಿಣಾಮ ಕೋರ್ಟ್ ಕಲಾಪಗಳು ನಡೆಯದ ಕಾರಣ ಮಹಾನಗರ ಪಾಲಿಕೆ ಪ್ರಕರಣ ಇತ್ಯರ್ಥವಾಗದೇ ಬಾಕಿ ಉಳಿದಿದೆ. ಕೋರ್ಟ್‌ನಲ್ಲಿ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಂಡು ಬರಲು ಯಾರಿಗೂ ಆಸಕ್ತಿ ಇಲ್ಲದ ಪರಿಣಾಮ ವಿಜಯಪುರ ನಗರ ‘ಹದಗೆಟ್ಟ ಹೈದರಾಬಾದ್‌’ ಆಗಿ ಮಾರ್ಪಟ್ಟಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದಮಾಜಿ ಕಾರ್ಪೊರೇಟರ್‌ಗಳಾದ ರವೀಂದ್ರ ಲೋಣಿ ಮತ್ತು ಅಬ್ದುಲ್‌ ರಜಾಕ್‌ ಹೊರ್ತಿ, ಪಾಲಿಕೆಗೆ ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಕುಡಿಯುವ ನೀರು, ಬೀದಿದೀಪ, ಒಳಚರಂಡಿ, ರಸ್ತೆ, ತೆರಿಗೆ, ಕಟ್ಟಡ ಪರವಾನಗಿ, ಸಾರ್ವಜನಿಕ ಉದ್ಯನ ನಿರ್ವಹಣೆ, ಅನುದಾನ ಬಳಕೆ, ಆಸ್ತಿ ತೆರಿಗೆ ವಸೂಲಿ, ಘನತ್ಯಾಜ್ಯ ನಿರ್ವಹಣೆ, ವಸತಿ ಸಮಸ್ಯೆ, ಹಕ್ಕುಪತ್ರ, ಬಿಡಾಡಿ ದನಕುರುಗಳ ಸಮಸ್ಯೆ, ಬೀದಿ ನಾಯಿ–ಹಂದಿಗಳ ಹಾವಳಿ, ಪಾರ್ಕಿಂಗ್‌ ಸಮಸ್ಯೆ, ಸಂತೆ–ಮಾರುಕಟ್ಟೆ ಸಮಸ್ಯೆ, ಪೌರಕಾರ್ಮಿಕರ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳು ಪರಿಹಾರ ಕಾಣದೇ ಇಡೀ ನಗರ ಸಮಸ್ಯೆಗಳ ಆಗರವಾಗಿದೆ ಎಂದು ಆರೋಪಿಸಿದರು.

ಚುನಾಯಿತ ಕಾರ್ಪೊರೇಟರ್‌ಗಳಿದ್ದರೆ ಸಾರ್ವಜನಿಕರ ಒಂದಷ್ಟು ಸಮಸ್ಯೆಗಳಿಗೆ ಮುಕ್ತಿ ಸಿಗುತ್ತಿತ್ತು. ಜನರೂ ಅವರನ್ನು ಪ್ರಶ್ನಿಸುತ್ತಿದ್ದರು. ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳಿಗೆ ಹಿಡಿತ ಇರುತ್ತಿತ್ತು. ಆದರೆ, ಎರಡು ವರ್ಷಗಳಿಂದ ಚುನಾವಣೆ ನಡೆಯದೇ ಇರುವ ಕಾರಣಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ದರ್ಬಾರ್‌ ನಡೆಸತೊಡಗಿದ್ದಾರೆ. ಜನರ ಕೈಗೂ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಸಮಸ್ಯೆಗಳ ಪರಿಹಾರಕ್ಕಾಗಿ ಸಾರ್ವಜನಿಕರು ನಮಗೆ ನಿತ್ಯ ದೂರುತ್ತಾರೆ. ಆದರೆ, ಅವುಗಳನ್ನು ಬಗೆಹರಿಸಲು ನಮ್ಮ ಬಳಿ ಅಧಿಕಾರವಿಲ್ಲ. ನಮ್ಮ ಮಾತುಗಳನ್ನು ಪಾಲಿಕೆ ಅಧಿಕಾರಿಗಳು ಕೇಳುತ್ತಿಲ್ಲ. ನಾವು ಅಸಹಾಯಕರಾಗಿದ್ದೇವೆ ಎನ್ನುತ್ತಾರೆ ಅವರು.

ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಒಳಗೊಂಡಿರುವ ನಗರ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ‘ಹುಚ್ಚಿ ಮದುವೆಯಲ್ಲಿ ಉಂಡೋನೆ ಜಾಣ’ ಎಂಬ ಪ‍ರಿಸ್ಥಿತಿ ನಿರ್ಮಾಣವಾಗಿದೆ.

ಒಮ್ಮೆಯೂ ನಡೆದ ಪಾಲಿಕೆ ಚುನಾವಣೆ!
ವಿಜಯಪುರ ನಗರಸಭೆಯು 2014ರಲ್ಲಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದ ಬಳಿಕ, 2013ರಲ್ಲಿ ನಡೆದಿದ್ದ ನಗರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 35 ಸದಸ್ಯರೇ ಕಾರ್ಪೊರೇಟರ್‌ ಆಗಿ ಮುಂದುವರಿದರು.

ಕಾಂಗ್ರೆಸ್‌ 10, ಬಿಜೆಪಿ 13, ಜೆಡಿಎಸ್‌ 8, ಎನ್‌ಸಿಪಿ 1, ಕೆಜಿಪಿ 1 ಮತ್ತು ಇಬ್ಬರು ಪಕ್ಷೇತರರು ಪ್ರಪ್ರಥಮ ಕಾರ್ಪೊರೇಟರ್‌ ಆಗಿ ಬಡ್ತಿ ಪಡೆದರು. ಯಾವೊಂದು ಪಕ್ಷಕ್ಕೂ ಬಹುಮತ ಇರದಿದ್ದರೂ ಕಾಂಗ್ರೆಸ್‌ ಪಕ್ಷವು ಮೇಯರ್‌ ಹುದ್ದೆ ಸೇರಿದಂತೆ ಪಾಲಿಕೆ ಚುಕ್ಕಾಣಿಯನ್ನು ಐದು ವರ್ಷ ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿತ್ತು.ಅಲ್ಲದೇ, ಆರು ವರ್ಷ ಅಧಿಕಾರ ಅನುಭವಿಸಿದರು.

ಮಹಾನಗರ ಪಾಲಿಕೆ ಸದಸ್ಯರ ಅಧಿಕಾರವಧಿ 2019 ಜುಲೈ 14ಕ್ಕೆ ಮುಗಿಯಿತಾದರೂ ಇದುವರೆಗೂ ಚುನಾವಣೆ ಮಾತ್ರ ನಡೆದಿಲ್ಲ.

***

ಸುಪ್ರೀಂಕೋರ್ಟ್‌ನಲ್ಲಿರುವ ಮಹಾನಗರ ಪಾಲಿಕೆ ಪ್ರಕರಣ ಆದಷ್ಟು ಬೇಗ ಇತ್ಯರ್ಥಪಡಿಸಲು ಆದ್ಯತೆ ನೀಡಬೇಕು. ಶೀಘ್ರ ಚುನಾವಣೆ ನಡೆಸಬೇಕು.
–ರವೀಂದ್ರ ಲೋಣಿ, ಮಾಜಿ ಕಾರ್ಪೊರೇಟರ್‌

***

ಜನರು ಯಾರ ಬಳಿ ಸಮಸ್ಯೆ, ಸಂಕಷ್ಟಗಳಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜನರು ತಮ್ಮ ಸಂಕಷ್ಟ ಯಾರ ಹೇಳಿಕೊಳ್ಳಬೇಕು ಎಂಬುದೇ ತಿಳಿಯದಂತಾಗಿದೆ.
–ಅಬ್ದುಲ್‌ ರಜಾಕ್‌ ಹೊರ್ತಿ, ಮಾಜಿ ಕಾರ್ಪೊರೇಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.