ADVERTISEMENT

ಅಧಿಕಾರ ಚಲಾವಣೆಯಲ್ಲಿ ಹಸ್ತಕ್ಷೇಪವಿಲ್ಲ: ಜಗದೇವಿ  

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 4:54 IST
Last Updated 8 ಜುಲೈ 2025, 4:54 IST
ಜಗದೇವಿ ಗುಂಡಳ್ಳಿ
ಜಗದೇವಿ ಗುಂಡಳ್ಳಿ   

ಬಸವನಬಾಗೇವಾಡಿ: ‘ಪದವೀಧರೆಯಾಗಿರುವ ನಾನು ಎರಡು ಬಾರಿ ಪುರಸಭೆಯ ಸದಸ್ಯಳಾಗಿ ಆಯ್ಕೆಯಾಗಿದ್ದು, ಸಚಿವ ಶಿವಾನಂದ ಪಾಟೀಲರ ಪ್ರೋತ್ಸಾಹ, ಸರ್ವ ಸದಸ್ಯರ ಬೆಂಬಲದಿಂದ ಅವಿರೋಧವಾಗಿ ಅಧ್ಯಕ್ಷಳಾಗಿದ್ದೇನೆ. ಅನುಭವಿ, ಸುಶಿಕ್ಷಿತಳಾದ ನನಗೆ ಅಧಿಕಾರ ಚಲಾಯಿಸುವಲ್ಲಿ ನನ್ನ ಪತಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಶುದ್ಧ ಸುಳ್ಳು’ ಎಂದು ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಹೇಳಿದರು.

ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ ಅವರ ಆರೋಪಗಳ ವಿಚಾರವಾಗಿ ತಮ್ಮ‌ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಸ್ಪಷ್ಟನೆ ನೀಡಿದರು.

‘ಪುರಸಭೆ ಉಪಾಧ್ಯಕ್ಷರು, ಸರ್ವ ಸದಸ್ಯರು ನನ್ನ ಪರಿವಾರವಿದ್ದಂತೆ, ನಾನು ಯಾವುದೇ ತಿರುಗೇಟು ನೀಡಲ್ಲ, ನನ್ನ ವಿರುದ್ಧ ಉಪಾಧ್ಯಕ್ಷರು ಮಾಡಿರುವ ಸುಳ್ಳು ಆರೋಪಗಳಿಗೆ ಸ್ಪಷ್ಠನೆ ಮಾತ್ರ ನೀಡುತ್ತೇನೆ’ ಎಂದರು.

ADVERTISEMENT

‘ಅಭಿವೃದ್ಧಿಪರ ಸರ್ಕಾರ, ನಮ್ಮ ಸಚಿವರ ವಿಶೇಷ ಕಾಳಜಿಯಿಂದ ನನ್ನ ಅಧಿಕಾರವಧಿಯಲ್ಲಿ ಪುರಸಭೆಗೆ ಸಾಕಷ್ಟು ಅನುದಾನ ಹರಿದು ಬಂದಿದ್ದು, ಎಲ್ಲಾ ವಾರ್ಡ್‌ಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಾಗಿವೆ. ಎಲ್ಲವೂ ಜಿಪಿಎಸ್ ಮಾಡಿ, ತಾಂತ್ರಿಕ ಅಧಿಕಾರಿಗಳು ಹಾಗೂ ಮೂರನೇ ವ್ಯಕ್ತಿ ತಪಾಸಣೆ ಬಳಿಕವೇ ಕಾಮಗಾರಿಗಳ ಬಿಲ್ ಆಗುತ್ತದೆ. ಮೇಲಾಗಿ ನಾನು ಖುದ್ಧು ಕಾಮಗಾರಿ ಪರಿಶೀಲಿಸಿಯೇ ಬಿಲ್ ಗಳಿಗೆ ಸಹಿ ಹಾಕುತ್ತೇನೆ. ಹಾಗಾಗಿ ಕಾಮಗಾರಿಗಳಾಗದೇ ಯಾವುದೇ ಬಿಲ್ ಮಾಡಲು ಸಾಧ್ಯವಿಲ್ಲ, ಮಾಡುವುದೂ ಇಲ್ಲ ಎಂದು ಕಾಮಗಾರಿಗಳಾಗದೇ ಬಿಲ್ ಮಾಡುವ ಆರೋಪ ಸುಳ್ಳು’ ಎಂದು ಹೇಳಿದರು.

‘ನನ್ನ ಪತಿ ಯಾವುದೇ ಸಭೆಯಲ್ಲಿ ಭಾಗಿಯಾಗಿಲ್ಲ, ಅಧಿಕಾರದಲ್ಲಿ ಹಸ್ತಕ್ಷೇಪವೂ ಮಾಡಿಲ್ಲ, ಮಾಡುವ ಪ್ರಮೇಯವೂ ಇಲ್ಲ. ನಾನು ಉಪಾಧ್ಯಕ್ಷರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಿಲ್ಲ, ಏಕಪಕ್ಷೀಯ ನಿರ್ಧಾರ ಸಹ ಕೈಗೊಂಡಿಲ್ಲ, ಆದರೆ ಉಪಾಧ್ಯಕ್ಷರಿಗೆ ಸಭೆಗಳಿಗೆ ಆಹ್ವಾನಿಸಿದರೂ ಅವರು ಗೈರಾದಾಗ, ಅನುಪಸ್ಥಿತಿಯಲ್ಲಿ ಅಧ್ಯಕ್ಷಳಾದ ನನಗೆ ಅಭಿವೃದ್ಧಿ ವಿಚಾರವಾಗಿ ನಿಯಮದಂತೆ ತುರ್ತು ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಬೇಕಾದರೆ ತನಿಖೆಯಾಗಲಿ’ ಎಂದು ಸವಾಲು ಹಾಕಿದರು.

‘ಜುಲೈ 11 ರಂದು ಪುರಸಭೆ ಸಾಮಾನ್ಯಸಭೆ ಮಾಡಲು ನಿರ್ಧರಿಸಲಾಗಿದ್ದು, ಸಭೆಯಲ್ಲಿ ಎಲ್ಲಾ ಅಂಕಿ–ಅಂಶಗಳನ್ನು ನೀಡಲಾಗುವುದು’ ಎಂದು ಅಧ್ಯಕ್ಷೆ ಜಗದೇವಿ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.