ADVERTISEMENT

ಜಾತಿಯಲ್ಲ; ನೀತಿ ಮೇಲೆ ಕಾಂಗ್ರೆಸ್‌ ಹೋರಾಟ: ಡಿ.ಕೆ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 12:07 IST
Last Updated 23 ಅಕ್ಟೋಬರ್ 2021, 12:07 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ವಿಜಯಪುರ: ’ನಾವು ಜಾತಿ ಮೇಲೆ ಹೋರಾಟ ಮಾಡುತ್ತಿಲ್ಲ, ನೀತಿ ಮೇಲೆ ಹೋರಾಟ ಮಾಡುತ್ತಿದ್ದೇವೆ‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸಿಂದಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಬಂದು ಎರಡು ವರ್ಷವಾಯಿತು. ಅವರು ಹೇಳಿದಂತೆ ರೈತರ ಆದಾಯ ಡಬಲ್ ಮಾಡಿದ್ದಾರಾ? ಕೋವಿಡ್ ಸಮಯದಲ್ಲಿ ಘೋಷಿಸಿದ ಪರಿಹಾರ ಪ್ಯಾಕೇಜ್ ಜನರಿಗೆ ತಲುಪಿದೆಯಾ? ಎಂಬುದಷ್ಟೇ ಇಲ್ಲಿ ಮುಖ್ಯ. ಜನ ಇದನ್ನು ನೋಡಿ ನಂತರ ಮತ ಹಾಕುತ್ತಾರೆ. ಇದನ್ನು ಹೊರತು ಪಡಿಸಿ ಯಾವ ಪಕ್ಷ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂಬುದು ಮುಖ್ಯವಲ್ಲ ಎಂದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 140 ಸೀಟು ಗೆಲ್ಲಿಸಿ ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಹಳ ಸಂತೋಷ, ಇನ್ನುಳಿದ ಕ್ಷೇತ್ರಗಳನ್ನು ಅವರು ಯಾಕೆ ಬಿಟ್ಟಿದ್ದಾರೆ? ಯಡಿಯೂರಪ್ಪನವರ ಗುರಿ 140 ಸೀಟುಗಳಾದರೆ, ನನ್ನ ಗುರಿ 224 ಸೀಟು ಎಂದರು.

ADVERTISEMENT

ಯಡಿಯೂರಪ್ಪನವರಿಗೆ ಅವರ ನೋವು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಣ್ಣೀರು ಯಾಕೆ ಬರುತ್ತದೆ ಹೇಳಿ. ಯಾರಿಗೆ ನೋವಾಗಿರುತ್ತದೆಯೋ ಅವರಿಗೆ ಕಣ್ಣೀರು ಬರುತ್ತದೆ. ಯಡಿಯೂರಪ್ಪನವರು ರಾಜ್ಯಪಾಲರಿಗೆ ರಾಜೀನಾಮೆ ನೀಡುವಾಗ ಹಾಕಿದ ಕಣ್ಣೀರಲ್ಲೇ ಈ ಬಿಜೆಪಿ ಪಕ್ಷ ಹಾಗೂ ಅದರ ಸರ್ಕಾರ ಕೊಚ್ಚಿಹೋಗಲಿದೆ ಎಂದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಜನರೇ ಅದನ್ನು ವಿಸರ್ಜನೆ ಮಾಡಲಿದ್ದು, ವಿಳಾಸ ಹುಡುಕುವಂತಾಗಿದೆ ಎಂಬ ಯಡಿಯೂರಪ್ಪನವರ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ‘ಕಾಂಗ್ರೆಸ್ ಅಡ್ರೆಸ್ ಪಕ್ಕಕ್ಕಿರಲಿ, ಈಗ ಬಿಜೆಪಿಯವರು ಯಡಿಯೂರಪ್ಪನವರಿಗೆ ಏನಾದರೂ ವಿಳಾಸ ಕೊಟ್ಟಿದ್ದಾರಾ? ಅವರ ವಿಳಾಸ ಏನು ಎಂದು ಮೊದಲು ಹುಡುಕಿಕೊಳ್ಳಲಿ, ಅದನ್ನು ಅವರು ಅರ್ಥ ಮಾಡಿಕೊಳ್ಳಲಿ’ ಎಂದು ಛೇಡಿಸಿದರು.

ರಾಜಾಹುಲಿ ಯಡಿಯೂರಪ್ಪನವರ ಜತೆ ಮತ್ತೊಂದು ಹುಲಿ ಬೊಮ್ಮಾಯಿ ಸೇರಿದ್ದಾರೆ. ಈಗ ಕಾಂಗ್ರೆಸ್ ನವರು ಇಲಿಗಳಾಗಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಮಾರ್ಮಿಕವಾಗಿ ಉತ್ತರಿಸಿದ ಅವರು, ‘ಇಲಿಯೇ ಅಲ್ಲವೇ ಗಣಪತಿಯನ್ನು ಹೊತ್ತು ತಿರುಗುವುದು’ ಎಂದು ಟಾಂಗ್ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.