ADVERTISEMENT

ದೇವರಿಗೇ ಆಗಿಲ್ಲ, ಇನ್ನು ನಾನೇನು ಮಾಡಲು ಸಾಧ್ಯ? ವಿಜಯಪುರ ಸಂಸದ ಉಡಾಫೆ ಮಾತು

ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಸಹಾಯಕತೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 15:00 IST
Last Updated 8 ಜೂನ್ 2021, 15:00 IST
ರಮೇಶ ಜಿಗಜಿಣಗಿ
ರಮೇಶ ಜಿಗಜಿಣಗಿ   

ವಿಜಯಪುರ: ‘ಕೋವಿಡ್‌ ಸಂಕಷ್ಟದಲ್ಲಿರುವ ಜನರಿಗೆ ದೇವರಿಗೆ ಸಮಾಧಾನ ಮಾಡಲು ಸಾಧ್ಯವಾಗಿಲ್ಲ. ಇನ್ನು ನಾನ್‌ ಏನ್‌ ಮಾಡಲು ಸಾಧ್ಯ’ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಸಹಾಯಕತೆ ವ್ಯಕ್ತಪಡಿಸಿದರು.

ಕೋವಿಡ್‌ ಎರಡನೇ ಅಲೆ ಆರಂಭವಾದ ಬಳಿಕ ಇದುವರೆಗೆ ಕ್ಷೇತ್ರದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಹಾಗೂ ಸಚಿವರು, ಅಧಿಕಾರಿಗಳ ಸಭೆಗಳಿಗೂ ಹಾಜರಾಗದೇ ಇರುವ ಬಗ್ಗೆ ಜನರಿಂದ ವ್ಯಕ್ತವಾಗಿರುವ ಟೀಕೆ, ಆರೋಪಗಳ ಕುರಿತು ಅವರು ‘ಪ್ರಜಾವಾಣಿ’ಗೆಪ್ರತಿಕ್ರಿಯಿಸಿದರು.

‘ಕೆಲವರು ಪ್ರಚಾರಕ್ಕಾಗಿ ಏನೇನೋ ನಾಟಕ ಮಾಡ್ತಾರೆ. ಅವರ ಹಾಗೆ ನನಗೆ ಮಾಡಲು ಇಷ್ಟ ಇಲ್ಲ. ಕ್ಷೇತ್ರದಲ್ಲಿ 600ಕ್ಕೂ ಹೆಚ್ಚು ಹಳ್ಳಿ ಇವೆ. ಅಲ್ಲೆಲ್ಲ ಅಡ್ಡಾಡಲು ನನಗೆ ಸಾಧ್ಯವಿಲ್ಲ, ಆ ರೀತಿ ಅಪೇಕ್ಷೆ ಪಡಬೇಡಿ’ ಎಂದು ಜನರಿಗೆ ವಿನಂತಿಸಿದರು.

ADVERTISEMENT

‘ಈಗಾಗಲೇ ನನಗೆ ಎರಡು ಬಾರಿ ಕೊರೊನಾ ಆಯ್ತು. ಜೊತೆಗೆ ಹೈಪರ್‌ ಶುಗರ್‌, ಬಿಪಿ ಇದೆ. ಮೂರನೇ ಬಾರಿ ಆಗೋದು ಬೇಡ ಎಂಬ ಕಾರಣಕ್ಕೆ ಹೆಚ್ಚು ಅಡ್ಡಾಡಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ನಾನು ಎಲ್ಲೂ ಅಡ್ಡಾಡುತ್ತಿಲ್ಲ’ ಎಂದು ಹೇಳಿದರು.

‘ಹಾಗಂತ, ನಾನು ಮನೆಯಲ್ಲಿ ಸುಮ್ಮನೆ ಕೂತಿಲ್ಲ. ರೊಕ್ಕ ಕೊಡೊದು ಬಿಟ್ಟು ಕೈಯಲ್ಲಿ ಆದ ಕೆಲಸ ಮಾಡಿದ್ದೇನೆ. ಎಮ್ಮೆ ಕಾಯೋನು ಫೋನ್‌ ಮಾಡಿದರೂ ಅಟೆಂಡ್ ಆಗಿದ್ದೇನೆ. ಅಧಿಕಾರಿಗಳಿಗೆ ಫೋನ್‌ ಮಾಡಿ ಆಸ್ಪತ್ರೆಯಲ್ಲಿ ಬೆಡ್‌, ಇಂಜೆಕ್ಷನ್‌ ಕೊಡಿಸಿದ್ದೇನೆ. ಈ ವಯಸ್ಸಿನಲ್ಲೂ ಮಧ್ಯ ರಾತ್ರಿಯಲ್ಲೂ ಫೋನ್‌ ಅಟೆಂಡ್‌ ಆಗಿ ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ನಿದ್ರೆ ಮಾಡಲು ಜನ ಬಿಟ್ಟಿಲ್ಲ. ನನ್ನಂತೆ ಯಾರಾದರೂ ಫೋನ್‌ನಲ್ಲಿ ಜನರೊಂದಿಗೆ ಮಾತನಾಡೋರು ಇದ್ದಾರಾ’ ಎಂದು ಪ್ರಶ್ನಿಸಿದರು.

‘ನನ್ನ ಬಗ್ಗೆ ಯಾರ್‌ ಬಯ್ಕೊಂಡು ಹೋಗ್ತಾರೊ ಹೋಗಲಿ. ಈ ಹಿಂದೆ ಇದೇ ರೀತಿ ನನ್ನನ್ನ ಬೈಯ್ದವರು ಫೋನ್‌ ಮಾಡಿ ಕಾಕಾ ತಪ್ಪಾಯ್ತು ಎಂದು ಕ್ಷಮೆಯಾಚಿಸಿದ್ದಾರೆ’ ಎಂದು ತಿರುಗೇಟು ನೀಡಿದರು.

‘ನಾನು ಸುಮಾರ್‌ ಮನುಷ್ಯ ಆಗಿದ್ದರೆ ಜನ ಏಕೆ 10 ಬಾರಿ ಗೆಲ್ಲಿಸುತ್ತಿದ್ರು? ಎಲ್ಲರನ್ನು ಕಟ್ಟಿಕೊಂಡು ಹೋಗೋನ್‌ ನಾನು, ಜಾತಿ ಮಾಡೋನ್ ಅಲ್ಲ. ಅದರಲ್ಲೂ ದಲಿತನನ್ನು ಸುಮ್ನೆ ಬಿಡುತ್ತಾರಾ, ಒದ್ದು ಓಡಿಸುತ್ತಿದ್ದರು ಜನ. ಉದ್ದ ಅಂಗಿ ಹಾಕುವವರಷ್ಟೇ ನನ್ನ ಬಗ್ಗೆ ಮಾತಾಡ್ತಾರೆ. ಆದರೆ, ಅವರ ಜೊತೆಯಲ್ಲೇ ಅಡ್ಡಾಡೊರು, ಅವರ ಜಾತಿಯವರೇ ನನ್ನ ಜೊತೆ ಇದ್ದಾರೆ’ ಎಂದು ಹೇಳಿದರು.

***‌

ಹಳ್ಳಿಯ ವಸ್ತು ಸ್ಥಿತಿ ಗೊತ್ತಿಲ್ಲ

ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆಜಿಲ್ಲಾ ಮಟ್ಟದಲ್ಲಿ ನಡೆಯುವ ಯಾವೊಂದು ಸಭೆಗೂ ತಾವು ಹಾಜರಾಗುತ್ತಿಲ್ಲ ಏಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ಹಳ್ಳಿಗೆ ನಾನು ಹೋಗಿಲ್ಲ. ವಸ್ತು ಸ್ಥಿತಿ ಗೊತ್ತಿಲ್ಲ. ಹೀಗಾಗಿ ಸಮಾಧಾನ ಮಾಡಲು ಸಭೆಗೆ ಹೋಗಬೇಕು ಅಷ್ಟೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

‘ಕೋವಿಡ್‌ ಲಸಿಕೆ ಎರಡು ಡೋಸ್‌ ಈಗಾಗಲೇ ಪಡೆದುಕೊಂಡಿದ್ದೇನೆ.ಲಾಕ್‌ಡೌನ್‌ ಮುಗಿದ ಬಳಿಕ ಸಚಿವರು, ಅಧಿಕಾರಿಗಳ ಸಭೆಗಳಿಗೆ ಹೋಗುತ್ತೇನೆ’ ಎಂದರು

ಅದೇನೂ ನನಗೆ ಗೊತ್ತಿಲ್ಲ:

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಅದೇನೂ ನನಗೆ ಗೊತ್ತಿಲ್ಲ. ಆ ಕಡೆ ತಲೆ ಕೂಡ ಹಾಕಿಲ್ಲ, ಯಾರೊಂದಿಗೂ ಮಾತನಾಡಿಲ್ಲ.ದೆಹಲಿ, ಬೆಂಗಳೂರಿನವರು ಮಾತನಾಡುತ್ತಾರೆ. ಅದು ಅವರಿಗೆ ಬಿಟ್ಟ ವಿಷಯ’ ಎಂದರು.

‘ಕೆಲವರು ಬಾಯಿಗೆ ಬಂದಂತೆ ಅನಗತ್ಯವಾಗಿ ಮಾತನಾಡುತ್ತಿರುವುದರಿಂದ ಪಕ್ಷಕ್ಕೆ ಸಾಕಷ್ಟು ಹಾನಿ, ಮುಜುಗರವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

***

ಟೀಕೆ, ಆರೋಪಗಳಿಗೆ ನಾನು ತಲೆಗೆ ಬಹಳ ಹಚ್ಚಿಕೊಳ್ಳಲ್ಲ. ಸಾಯೋತನ ಯಾರೂ ಅಧಿಕಾರದಲ್ಲಿ ಇರಲ್ಲ, ಒಂದು ದಿನ ಹೋಗೋದೆ, ಹಾಗಾಗಿ ನಾನುಅಧಿಕಾರ, ಹಣ ಬಿಟ್ಟು ಬಹಳ ದೂರ ಇದ್ದೇನೆ

–ರಮೇಶ ಜಿಗಜಿಣಗಿ

ಸಂಸದ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.