ADVERTISEMENT

ಮೋದಿ ಗೆಲುವಲ್ಲ, ಮಾಧ್ಯಮಗಳ ಗೆಲುವು: ಶಾಸಕ ನಾಡಗೌಡ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 15:45 IST
Last Updated 6 ಜೂನ್ 2024, 15:45 IST

ಮುದ್ದೇಬಿಹಾಳ: ‘ಬಿಜೆಪಿಯ ಚಾರಸೋ ಪಾರ್ ಎಂಬ ಹೇಳಿಕೆ ಸುಳ್ಳಾಗಿದೆ. ಮೋದಿ ಬಿಟ್ಟರೆ ಈ ದೇಶವೇ ಇಲ್ಲ’ ಎಂದು ಮಾಧ್ಯಮದವರು ಬಿಂಬಿಸಿದ್ದರಿಂದಲೇ ಈ ಜಯ ಅವರಿಗೆ ದೊರೆತಿದೆ’ ಎಂದು ಶಾಸಕ ಸಿ.ಎಸ್. ನಾಡಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಹುಡ್ಕೋ ಉದ್ಯಾನದಲ್ಲಿ ಬುಧವಾರ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

‘ಎಷ್ಟೋ ಕಡೆ ನಾನು ಚುನಾವಣೆ ಸಮಯದಲ್ಲಿ ಹೋದಾಗ ದೇಶ ಉಳಿಯಬೇಕಾದರೆ ಮೋದಿ ಉಳಿಯಬೇಕು ಎಂದು ಹಲವು ಯುವಕರು ನಮ್ಮೆದುರಿಗೆ ಬಂದು ಹೇಳಿದರು. ನಮ್ಮ ರಾಜ್ಯದಲ್ಲಿ ಹಿನ್ನಡೆಯಾಗಲು ಕಾರಣ ಹಿಂದಿನ ಸರ್ಕಾರ ಮಾಡಿದ ತಪ್ಪನ್ನು ಜನರ ಮುಂದೆ ಸಮರ್ಥವಾಗಿ ಇಡುವಲ್ಲಿ ನಾವು ಎಲ್ಲೋ ಎಡವಿದ್ದೇವೆ. ಲೋಕಸಭಾ ಚುನಾವಣೆಯೇ ಬೇರೆ, ವಿಧಾನಸಭೆ ಚುನಾವಣೆಯೇ ಬೇರೆ ಎಂದು ನಮ್ಮ ಆಪ್ತರೇ ಹೇಳಿಕೊಂಡರು. ಸರ್ಕಾರ ಯಾವ ರೀತಿ ನಡೆದುಕೊಂಡಿತು ಎಂಬುದನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಲಿಲ್ಲ’ ಎಂದರು.

ADVERTISEMENT

‘ರಮೇಶ ಜಿಗಜಿಣಗಿ ಅವರು ಇದು ತಮ್ಮ ಕೊನೆಯ ಚುನಾವಣೆ ಎಂದು ಜನರ ಮುಂದೆ ಹೋಗಿದ್ದು ಅವರ ಮೇಲೆ ಅನುಕಂಪದ ಅಲೆ ಪರಿಣಾಮ ಬೀರಿತು. ಜನರು ಕೆಲವು ಸಿದ್ಧಾಂತಗಳನ್ನಿಟ್ಟುಕೊಂಡು ಮತ ಚಲಾಯಿಸಿದ್ದಾರೆ. ಗ್ಯಾರಂಟಿ ಕೊಟ್ಟರೂ ಜನರ ಮನಸ್ಥಿತಿಯಲ್ಲಿ ಬದಲಾವಣೆ ಆಗಿಲ್ಲ. ಶೇ 90ರಷ್ಟು ಗ್ಯಾರಂಟಿ ತೆಗೆದುಕೊಂಡವರು ಇದ್ದರೂ, ಗ್ರಾಮೀಣ ಪ್ರದೇಶದಲ್ಲಿ ಬಸ್ ಉಚಿತ, ಶೇ 73ರಷ್ಟು ಜನರ ಮನೆಗೆ ₹ 2 ಸಾವಿರ ಹೋಗುತ್ತದೆ. ಇಷ್ಟಾದರೂ ಕಾಂಗ್ರೆಸ್‌ಗೆ ಜನ ಮತ ಹಾಕಿಲ್ಲ ಎಂದರೆ ಅದಕ್ಕೆ ಅವರು ಇಟ್ಟುಕೊಂಡಿರುವ ಸಿದ್ಧಾಂತವೇ ಕಾರಣ. ಅದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ’ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀಶೈಲ ಮರೋಳ, ಮುಖಂಡರಾದ ಅಮರೇಶ ಗೂಳಿ, ಬುಡ್ಡೇಸಾಬ ಚಪ್ಪರಬಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.