ವಿಜಯಪುರ: ಸಮಗ್ರ ಶಿಕ್ಷಣ ಕರ್ನಾಟಕವು ಸೆಪ್ಟೆಂಬರ್ 1ರಿಂದ 21 ದಿನಗಳ ಕಾಲ ಎಲ್ಲ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಓದುವ ಕೌಶಲವನ್ನು ವೃದ್ಧಿಸಲು ಆಯೋಜಿಸಿರುವ ‘ಓದುವ ಅಭಿಯಾನ’ದ ಚಟುವಟಿಕೆಗಳ ಮಾರ್ಗದರ್ಶಿಯಲ್ಲಿ ‘ಈದ್ ಮಿಲಾದ್’ ಹಬ್ಬ ಸೇರ್ಪಡೆ ಮಾಡಿರುವುದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ಯತ್ನಾಳ, ‘ಓದುವ ಅಭಿಯಾನ’ದ ಚಟುವಟಿಕೆಗಳ ಮಾರ್ಗದರ್ಶಿಯಲ್ಲಿರುವ ಒಂದು ಕೋಮಿನ ಹಬ್ಬದ ತಿಳಿವಳಿಕೆ ವಿಷಯವನ್ನು ಕೂಡಲೇ ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಓದುವ ಅಭಿಯಾನದಲ್ಲಿ ಪ್ರಚಲಿತ ವಿದ್ಯಮಾನ, ಕನ್ನಡ ಸಾಹಿತ್ಯ, ವಿಜ್ಞಾನ, ನಮ್ಮ ಸಂಸ್ಕೃತಿ, ಇತಿಹಾಸವನ್ನು ಓದಲು ಉತ್ತೇಜಿಸಬೇಕೇ ಹೊರತು, ಯಾವುದೋ ಒಂದು ಕೋಮಿನ ಓಲೈಕೆಗೆ ಅವರ ಹಬ್ಬದ ಬಗ್ಗೆ ತಿಳಿವಳಿಕೆ ನೀಡುವುದರಿಂದ ಮಕ್ಕಳ ಜ್ಞಾನವಾಗಲಿ, ಬೌದ್ಧಿಕ ಮಟ್ಟವಾಗಲಿ ಸುಧಾರಿಸುವುದಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ಈ ರೀತಿಯಾದ ಓಲೈಕೆ ರಾಜಕಾರಣವನ್ನು ಬಿಟ್ಟು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತ ಪಠ್ಯಕ್ರಮವನ್ನು, ವಿಷಯಗಳನ್ನು ಪರಿಚಯಿಸಲಿ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.