ADVERTISEMENT

ಕೇಂದ್ರ, ರಾಜ್ಯ ಸರ್ಕಾರದಿಂದ ರೈತದ್ರೋಹಿ ಕೆಲಸ: ಮಾನ್ಪಡೆ

ಜೂನ್‌ 29ರಿಂದ ಒಂದು ವಾರ ರಾಜ್ಯದ ಒಂದು ಸಾವಿರ ಸ್ಥಳಗಳಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 14:15 IST
Last Updated 15 ಜೂನ್ 2020, 14:15 IST
ಮಾರುತಿ ಮಾನ್ಪಡೆ 
ಮಾರುತಿ ಮಾನ್ಪಡೆ    

ವಿಜಯಪುರ: ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಯಾರು ಬೇಕಾದರೂ ಕೃಷಿ ಭೂಮಿ ಹೊಂದಲು ಅವಕಾಶ ನೀಡಿರುವ ರಾಜ್ಯ ಸರ್ಕಾರದ ಕ್ರಮ ರೈತ ದ್ರೋಹಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಖಂಡಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೂಡಲೇ ಈ ದುಷ್ಟ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಭೂಸುಧಾರಣಾ ಕಾಯ್ದೆ 1961ರ ಪ್ರಮುಖ ಕಲಂಗಳನ್ನು ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ವಾರ್ಷಿಕ ₹ 20 ಲಕ್ಷ ಕೃಷಿಯೇತರ ಆದಾಯ ಹೊಂದಿರುವ ಯಾರು ಬೇಕಾದರೂ ಕೃಷಿ ಭೂಮಿ ಹೊಂದಲು ಅವಕಾಶ ನೀಡುವಂತೆ ತಿದ್ದುಪಡಿ ಮಾಡಿ ದುರ್ಬಲಗೊಳಿಸಿತ್ತು. ಇದೀಗ ಬಿಜೆಪಿ ಸರ್ಕಾರ ಈ ಕಲಂಗಳನ್ನೇ ತೆಗೆದು ಹಾಕಲು ಮುಂದಾಗಿರುವುದು ಖಂಡನೀಯ ಎಂದರು.

ADVERTISEMENT

ವ್ಯವಸಾಯದಲ್ಲಿ ತೊಡಗಿರುವ ಎಲ್ಲ ರೈತರು ಹಾಗೂ ಗೇಣಿದಾರರು, ಕೃಷಿಕೂಲಿಕಾರ್ಮಿಕರು, ಕಸಬುದಾರರು ಹಾಗೂ ಅವರನ್ನು ಆಧರಿಸಿದ ಸಣ್ಣ ವ್ಯಾಪಾರಿಗಳು, ಕೃಷಿ ವ್ಯಾಪಾರಿಗಳು ಸೇರಿದಂತೆ ಗ್ರಾಮೀಣ ಪ್ರದೇಶವನ್ನೇ ಈ ಕಾಯ್ದೆ ಮಸಣ ಮಾಡಲಿದೆ. ಅಲ್ಲದೇ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಾಶ ಮಾಡುವ ಹಾಗೂ ರಾಜ್ಯವನ್ನು ಅತ್ಯಂತ ಗಂಭೀರವಾದ ಸಂಕಷ್ಟಕೀಡು ಮಾಡುವ ದುಷ್ಕೃತ್ಯವಾಗಿದೆ ಎಂದು ಅವರು ಆರೋಪಿಸಿದರು.

ಕೇಂದ್ರದಿಂದಲೂ ರೈತ ವಿರೋಧಿ ನಡೆ:ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಅಗತ್ಯ ಸೇವಾ ನಿರ್ವಹಣೆ ಕಾಯ್ದೆ ಮತ್ತು ಗುತ್ತಿಗೆ ಬೇಸಾಯಕ್ಕೆ ಅವಕಾಶ ನೀಡುವ ಮೂರು ಸುಗ್ರೀವಾಜ್ಞೆಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು.

ಪ್ರತಿಭಟನೆ ಜುಲೈ 27 ರಿಂದ:ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾಯ್ದೆಗಳನ್ನು ಖಂಡಿಸಿ ಜೂನ್‌ 27ರಿಂದ ಜುಲೈ 3ರ ವರೆಗೆ ಒಂದು ವಾರ ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮಿತಿ ನೇತೃತ್ವದಲ್ಲಿ ರಾಜ್ಯದ ಒಂದು ಸಾವಿರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣರಾಯ ಈಳಗೇರ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜಿಲ್ಲೆಯ 50 ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಎನ್‌ಆರ್‌ಇಜಿ ಯೋಜನೆಯನ್ನು ಗ್ರಾಮೀಣ ಪ್ರದೇಶಕ್ಕೆ ಸೀಮಿತಗೊಳಿಸದೇ ನಗರ ಪ್ರದೇಶಕ್ಕೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಗುಳೆ ಹೋಗಿದ್ದ ವಲಸೆ ಕಾರ್ಮಿಕರು ಜಿಲ್ಲೆಗೆ ಮರಳಿದ್ದು, ಅವರಿಗೆ ಉದ್ಯೋಗವಕಾಶ ಕಲ್ಪಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬೆಂಬಲ ಬೆಲೆಯಲ್ಲಿ ಖರೀದಿಸಿರುವ ತೊಗರಿಗೆ ಎರಡು ತಿಂಗಳಾದರೂ ಹಣ ಪಾವತಿಯಾಗಿಲ್ಲ. ತಕ್ಷಣ ಹಣ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಹಾಗೂ ಕಬ್ಬು ಬೆಳೆಗಾರರ ಬಾಕಿ ಇರುವ ಹಣದ ಬಿಡುಗಡೆಗೂ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ವದೇಶಿ ಬಗ್ಗೆ ಮಾತನಾಡುವ ಆರ್‌ಎಸ್‌ಎಸ್‌ ಕೇಂದ್ರದ ರೈತ ವಿರೋಧಿ ನಿಲುವುಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ. ವಿದೇಶಿ ಕಂಪನಿಗಳ ಕೆಲಸ ಮಾಡುವ ಮೂಲಕ ದೇಶದ್ರೋಹಿ ಕೃತ್ಯದಲ್ಲಿ ತೊಡಗಿದೆ ಎಂದುಮಾರುತಿ ಮಾನ್ಪಡೆ ಟೀಕಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.