ADVERTISEMENT

ವಿಜಯಪುರ: ಜಿಲ್ಲೆಯಲ್ಲಿ 22,496 ಹೆಕ್ಟರ್ ಉಳ್ಳಾಗಡ್ಡಿ ಬೆಳೆಹಾನಿ

ದರ ಕುಸಿತ, ಅತಿವೃಷ್ಟಿಗೆ ನಲುಗಿದ ಉಳ್ಳಾಗಡ್ಡಿ ಬೆಳೆಗಾರರು

ಬಸವರಾಜ ಎಸ್.ಉಳ್ಳಾಗಡ್ಡಿ
Published 13 ಅಕ್ಟೋಬರ್ 2025, 5:08 IST
Last Updated 13 ಅಕ್ಟೋಬರ್ 2025, 5:08 IST
ಬಸವನ ಬಾಗೇವಾಡಿ ತಾಲ್ಲೂಕಿನ ಜೈನಾಪೂರ ಗ್ರಾಮದ ರೈತ ಅಂಬರೀಶ ಮೇಲ್ದಾಪುರ ಅವರ ಹೊಲದಲ್ಲಿ ಬೆಳೆದ ಉಳ್ಳಾಗಡ್ಡಿ 
ಬಸವನ ಬಾಗೇವಾಡಿ ತಾಲ್ಲೂಕಿನ ಜೈನಾಪೂರ ಗ್ರಾಮದ ರೈತ ಅಂಬರೀಶ ಮೇಲ್ದಾಪುರ ಅವರ ಹೊಲದಲ್ಲಿ ಬೆಳೆದ ಉಳ್ಳಾಗಡ್ಡಿ    

ಬಸವನಬಾಗೇವಾಡಿ: ಈ ಬಾರಿ ಉತ್ತಮ ಫಸಲು, ಲಾಭದ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಉಳ್ಳಾಗಡ್ಡಿ ಬೆಳೆಗಾರರಿಗೆ ಒಂದೆಡೆ ಅತಿವೃಷ್ಟಿಯಿಂದ ಬೆಳೆ ಹೊಲದಲ್ಲೇ ಕೊಳೆತು ಹಾಳಾದರೆ, ಮತ್ತೊಂದಡೆ ಅಳಿದುಳಿದ ಬೆಳೆಗೂ ದರ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉತ್ತಮ ಮಳೆ ನಿರೀಕ್ಷೆಯಲ್ಲಿ ಜಿಲ್ಲೆಯಲ್ಲಿ ರೈತರು ಈ ಮುಂಗಾರಿಗೆ ಅತಿ‌ ಹೆಚ್ಚು ಉಳ್ಳಾಗಡ್ಡಿ ಬೆಳೆ ಬಿತ್ತನೆ ಮಾಡಿದ್ದರು. ತೋಟಗಾರಿಕೆ ಇಲಾಖೆಯ  ಮಾಹಿತಿಯಂತೆ ಜಿಲ್ಲೆಯ 13 ತಾಲ್ಲೂಕುಗಳೂ ಸೇರಿ ಈ ಬಾರಿ ಒಟ್ಟು 29,784 ಹೆಕ್ಟರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆ ಬೆಳೆಯಲಾಗಿದ್ದು, ಅತಿವೃಷ್ಟಿಯಿಂದ 22,496 ಹೆಕ್ಟರ್ ಪ್ರದೇಶದ ಉಳ್ಳಾಗಡ್ಡಿ ಬೆಳೆ ಹಾಳಾಗಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಕೊಲ್ಹಾರ, ನಿಡಗುಂದಿ ತಾಲ್ಲೂಕುಗಳು ಸೇರಿ ಅಖಂಡ ಬಸವನಬಾಗೇವಾಡಿ ತಾಲ್ಲೂಕಿನಲ್ಲಿ 9,148 ಹೆಕ್ಟರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆಯನ್ನು‌ ಬೆಳೆಯಲಾಗಿದ್ದು, ಅತಿವೃಷ್ಟಿ ಪರಿಣಾಮ 7,158 ಹೆಕ್ಟರ್ ಪ್ರದೇಶದ ಉಳ್ಳಾಗಡ್ಡಿ ಬೆಳೆ ನಷ್ಟಗೊಂಡಿದೆ.

ADVERTISEMENT

‘ಈ ಬಾರಿ ಮುಂಗಾರಿಗೆ ಬಹಳ ನಿರೀಕ್ಷೆಯಿಟ್ಟು ಉಳ್ಳಾಗಡ್ಡಿ ಬೆಳೆದಿದ್ದೇವು. ಬೀಜ, ಬಿತ್ತನೆ, ಕಳೆ ತೆಗೆಯಲು ಕೂಲಿ, ಟ್ರ್ಯಾಕ್ಟರ್ ಹೀಗೆ ಎಕರೆ ಉಳ್ಳಾಗಡ್ಡಿ‌ ಬೆಳೆಯಲು ಅಂದಾಜು ₹ 35 ರಿಂದ ₹ 40 ಸಾವಿರ ಖರ್ಚು ಮಾಡಿದ್ದೇವೆ. ಆದರೆ, ಅತಿಯಾದ ಮಳೆಯಿಂದ ಉಳ್ಳಾಗಡ್ಡಿ ಬೆಳೆ ಹೊಲದಲ್ಲೇ ಕೊಳೆತು ಹಾಳಾಗಿವೆ‌’ ಎಂದು ಪ್ರಗತಿಪರ ರೈತರಾದ ಕೊಲ್ಹಾರದ ರಮೇಶ ಬಾಲಗೊಂಡ, ಮನಗೂಳಿಯ ವಿರೇಶ ಮನಗೂಳಿ‌ ‘ಪ್ರಜಾವಾಣಿ’ ಬಳಿ ತಮ್ಮ ನೋವು ಹಂಚಿಕೊಂಡರು.

‘ಕಷ್ಟಪಟ್ಟು ಬೆಳೆದ ಬೆಳೆಗೆ ಲಾಭವಿರಲಿ, ಬೆಳೆಗೆ ಖರ್ಚು ಮಾಡಿದ ಹಣವೂ ಬರುತ್ತಿಲ್ಲ. ಹಾಗಾಗಿ ಉಳ್ಳಾಗಡ್ಡಿ ಬೆಳೆಗಾರರ ಸಂಕಷ್ಟ, ವಸ್ತುಸ್ಥಿತಿ ಅರಿತು ಸರ್ಕಾರ ಘೋಷಿಸಿರುವ ಬೆಳ ಹಾನಿ ಪರಿಹಾರ ಮೊತ್ತವನ್ನು ಮರು ಪರಿಶೀಲಿಸಿ ಹೆಚ್ಚಿನ ಪರಿಹಾರಧನ ನೀಡಬೇಕು’ ಎಂದು ಉಳ್ಳಾಗಡ್ಡಿ ಬೆಳೆಗಾರರಾದ ಜೈನಾಪುರದ ಶಂಕರ ಉಳ್ಳಾಗಡ್ಡಿ, ಮಂಜುನಾಥ ಬೇನಾಳ ಒತ್ತಾಯಿಸಿದರು.

ಬೆಳೆ ಹಾನಿ ಸಮೀಕ್ಷೆ ಪ್ರಕ್ರಿಯೆ ಪ್ರಗತಿಯಲಿದ್ದು ಪೂರ್ಣಗೊಂಡ ಬಳಿಕ ಬೆಳೆಹಾನಿ ರೈತರ ಮಾಹಿತಿ ಪ್ರಚುರಪಡಿಸಲಾಗುವುದು. ಸಂಬಂಧಪಟ್ಟ ರೈತರು ಅದನ್ನು ಗಮನಿಸಿ ಏನಾದರೂ ತಿದ್ದುಪಡಿಗಳಿದ್ದಲ್ಲಿ ಗಮನಕ್ಕೆ‌ ತಂದರೆ ಪರಿಗಣಿಸಲಾಗುವುದು.
ಸಿ.ಬಿ.ಪಾಟೀಲ ಹಿರಿಯ ತೋಟಗಾರಿಕಾ ಉಪ ನಿರ್ದೇಶಕರು ಬಸವನಬಾಗೇವಾಡಿ

ತಾಲ್ಲೂಕುವಾರು ಮುಂಗಾರು ಈರುಳ್ಳಿ ಬೆಳೆ ಹಾನಿ ವಿವರ

ತಾಲ್ಲೂಕು;ಬಿತ್ತನೆ ಪ್ರದೇಶ;ಹಾನಿ(ಹೆಕ್ಟೇರ್‌ಗಳಲ್ಲಿ)

ಆಲಮೇಲ;982;850

ಬಬಲೇಶ್ವರ;3416;2500

ಬಸವನಬಾಗೇವಾಡಿ;4801;3698

ಚಡಚಣ;1237;898

ದೇವರಹಿಪ್ಪರಗಿ;1737;1050

ಇಂಡಿ;5389;3900

ಕೊಲ್ಹಾರ;1909;1280

ಮುದ್ದೇಬಿಹಾಳ;1492;1370

ನಿಡಗುಂದಿ;2437;2180

ಸಿಂದಗಿ;3423;2560

ತಾಳಿಕೋಟೆ; 95.30; 95.30

ತಿಕೋಟಾ;513;340

ವಿಜಯಪುರ;2347;1760

ಒಟ್ಟು;29784;22496

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.