ADVERTISEMENT

ವಿಜಯಪುರ: ರೈಲ್ವೆ ಖಾಸಗೀಕರಣಕ್ಕೆ ವಿರೋಧ

ಎಐಯುಟಿಯುಸಿಯಿಂದ ಅಖಿಲ ಭಾರತ ಪ್ರತಿಭಟನಾ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 15:38 IST
Last Updated 1 ಅಕ್ಟೋಬರ್ 2020, 15:38 IST
ಭಾರತೀಯ ರೈಲ್ವೆ ಖಾಸಗೀಕರಣ ವಿರೋಧಿಸಿ ಎಐಯುಟಿಯುಸಿ ವಿಜಯಪುರ ಘಟಕದ ಪದಾಧಿಕಾರಿಗಳು ಗುರುವಾರ ಆನ್‌ಲೈನ್ ಮೂಲಕ ಪ್ರತಿಭಟನೆ ನಡೆಸಿದರು
ಭಾರತೀಯ ರೈಲ್ವೆ ಖಾಸಗೀಕರಣ ವಿರೋಧಿಸಿ ಎಐಯುಟಿಯುಸಿ ವಿಜಯಪುರ ಘಟಕದ ಪದಾಧಿಕಾರಿಗಳು ಗುರುವಾರ ಆನ್‌ಲೈನ್ ಮೂಲಕ ಪ್ರತಿಭಟನೆ ನಡೆಸಿದರು   

ವಿಜಯಪುರ:ಭಾರತೀಯ ರೈಲ್ವೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ವಿರೋಧಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ)ನೇತೃತ್ವದಲ್ಲಿ ಗುರುವಾರ ಆನ್‌ಲೈನ್ ಮೂಲಕ ಪ್ರತಿಭಟನೆ ನಡೆಸಲಾಯಿತು.

ದೇಶದ 109 ಮಾರ್ಗಗಳಲ್ಲಿ 151 ಖಾಸಗಿ ರೈಲುಗಳನ್ನು ಓಡಿಸುವ ಯೋಜನೆಯನ್ನು ಕೈ ಬಿಡಬೇಕು, ಯಾವುದೇ ಕಾರಣಕ್ಕೂ ರೈಲ್ವೆ ಜಮೀನು, ಕಾಲೊನಿಗಳು, ಆಸ್ಪತ್ರೆಗಳು, ವರ್ಕ್‍ಶಾಪ್ ಮತ್ತು ಇತರೆ ರೈಲ್ವೆ ಸಂಸ್ಥೆಗಳನ್ನು ಮುಚ್ಚುವುದು ಅಥವಾ ಮಾರಾಟ ಮಾಡುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಏಳು ರೈಲ್ವೆ ಉತ್ಪಾದಕ ಘಟಕಗಳನ್ನು ಕಾರ್ಪೊರೇಟ್ ಮನೆತನಗಳಿಗೆ ಮಾರುವುದನ್ನು ತಡೆಗಟ್ಟಬೇಕು, ಉದ್ಯೋಗ ಕಡಿತದ ಬದಲು ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು, 55 ವರ್ಷ ವಯಸ್ಸು ಅಥವಾ 30 ವರ್ಷಗಳ ಸೇವೆಯ ಹೆಸರಲ್ಲಿ ಯಾವುದೇ ನೌಕರರನ್ನು ಕೆಲಸದಿಂದ ತೆಗೆಯಬಾರದು, ನಿವೃತ್ತಿ ಹೊಂದಿದ ಎಲ್ಲ ನೌಕರರಿಗೂ ಎನ್.ಪಿ.ಎಸ್ ಬದಲು ಹಳೆಯ ಪಿಂಚಣಿ ಸ್ಕೀಂ ಅನುಸಾರ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ರೈಲ್ವೆ ಪ್ರಯಾಣ ದರ ಮತ್ತು ಸರಕು ಸಾಗಾಣಿಕೆ ದರವನ್ನು ಏರಿಸಬಾರದು, ವಿವೇಕ್‍ ದೇವ್‍ರಾಯ್ ಸಮಿತಿಯ ಶಿಫಾರಸುಗಳನ್ನು ರದ್ದುಗೊಳಿಸಬೇಕು ಎಂಬುದು ಸೇರಿದಂತೆ ಮುಂತಾದ ಹಕ್ಕೊತ್ತಾಯಗಳನ್ನು ಮುಂದಿಡಲಾಯಿತು.

ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವು ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರ ವಹಿಕೊಂಡ ನಂತರ ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಾ ಬಂದಿದೆ ಮತ್ತು ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕುಳಗಳ ಮಡಿಲಿಗೆ ಹಾಕಿ ಲಕ್ಷಾಂತರ ಉದ್ಯೋಗಗಳನ್ನು ನಾಶ ಮಾಡಿದೆ ಎಂದು ಆರೋಪಿಸಿದರು.

ಆನ್‌ಲೈನ್‌ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ., ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ, ಕಾರ್ಮಿಕರಾದ ಕಾಶಿಬಾಯಿ ಜನಗೊಂಡ, ಮಹಾದೇವಿ ಧರ್ಮಶೆಟ್ಟಿ, ಭಾರತಿ ದೇವಕತೆ, ಶಶಿಕಲಾ ಮ್ಯಾಗೇರಿ, ಲಕ್ಷ್ಮೀ ಲಕ್ಷಟ್ಟಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.