ADVERTISEMENT

ವಿಜಯಪುರ: ನಾಲ್ಕು ವರ್ಷದ ಪದವಿ ಹೇರಿಕೆಗೆ ವಿರೋಧ

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯಿಂದ ಚಿಂತನ ಮಂಥನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 12:16 IST
Last Updated 28 ಜುಲೈ 2021, 12:16 IST
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಹಾಗೂ ಕಾಲೇಜು ಮತ್ತು ವಿಶ್ವವಿದ್ಯಾಲಯದ ಉಪನ್ಯಾಸಕರ ಒಕ್ಕೂಟದ ಆಶ್ರಯದಲ್ಲಿ ನಾಲ್ಕು ವರ್ಷದ ಪದವಿ ಹೇರಿಕೆಯ ಕುರಿತು ವಿಜಯಪುರ ಜಿಲ್ಲಾ ಮಟ್ಟದ ಚಿಂತನ ಮಂಥನ ಸಭೆಯಲ್ಲಿ ನಾ. ದಿವಾಕರ, ಡಾ. ಜೆ.ಎಸ್.ಪಾಟೀಲ, ವಿ.ಎನ್.ರಾಜಶೇಖರ, ಪ್ರೊ. ವಿ.ಎ. ಪಾಟೀಲ, ಎಚ್.ಟಿ ಭರತಕುಮಾರ ಪಾಲ್ಗೊಂಡಿದ್ದರು
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಹಾಗೂ ಕಾಲೇಜು ಮತ್ತು ವಿಶ್ವವಿದ್ಯಾಲಯದ ಉಪನ್ಯಾಸಕರ ಒಕ್ಕೂಟದ ಆಶ್ರಯದಲ್ಲಿ ನಾಲ್ಕು ವರ್ಷದ ಪದವಿ ಹೇರಿಕೆಯ ಕುರಿತು ವಿಜಯಪುರ ಜಿಲ್ಲಾ ಮಟ್ಟದ ಚಿಂತನ ಮಂಥನ ಸಭೆಯಲ್ಲಿ ನಾ. ದಿವಾಕರ, ಡಾ. ಜೆ.ಎಸ್.ಪಾಟೀಲ, ವಿ.ಎನ್.ರಾಜಶೇಖರ, ಪ್ರೊ. ವಿ.ಎ. ಪಾಟೀಲ, ಎಚ್.ಟಿ ಭರತಕುಮಾರ ಪಾಲ್ಗೊಂಡಿದ್ದರು   

ವಿಜಯಪುರ: ನಾಲ್ಕು ವರ್ಷದ ಪದವಿ ಕೋರ್ಸ್ ನಮ್ಮ ದೇಶದ ಶಿಕ್ಷಣವನ್ನು ಜಾಗತಿಕ ಮಾರುಕಟ್ಟೆಯ ಸರಕನ್ನಾಗಿ ಮಾಡುವ ಹುನ್ನಾರವಾಗಿದೆ ಎಂದು ಅಂಕಣಕಾರ ಮೈಸೂರಿನ ನಾ. ದಿವಾಕರ ಹೇಳಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಹಾಗೂ ಕಾಲೇಜು ಮತ್ತು ವಿಶ್ವವಿದ್ಯಾಲಯದ ಉಪನ್ಯಾಸಕರ ಒಕ್ಕೂಟದ ಆಶ್ರಯದಲ್ಲಿ, ನಾಲ್ಕು ವರ್ಷದ ಪದವಿಯ ಹಠಾತ್ ಹೇರಿಕೆಯ ಕುರಿತು ಜಿಲ್ಲಾ ಮಟ್ಟದ ಚಿಂತನ ಮಂಥನ ಸಭೆಯಲ್ಲಿ ಅವರು ಮಾತನಾಡಿದರು.

ಭಾರತ ಈಗಾಗಲೇ ಔದ್ಯೋಗಿಕ ಬಂಡವಾಳದ ಹಂತವನ್ನು ದಾಟಿ ಹಣಕಾಸು ಬಂಡವಾಳದ ಹಂತವನ್ನು ತಲುಪಿರುವುದರಿಂದ ಶಿಕ್ಷಣ ಕ್ಷೇತ್ರದಂಥ ಸೇವಾ ವಲಯಗಳನ್ನೂ ಕೂಡಾ ಔದ್ಯಮಿಕ ಕ್ಷೇತ್ರದ ವಿಸ್ತರಣೆ ಮತ್ತು ಮಾರುಕಟ್ಟಗೆ ಪೂರಕವಾಗಿ ಆಳುವ ವರ್ಗಗಳು ನೋಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಇದೀಗ ವಿಶ್ವ ಆರ್ಥಿತೆಗೆ ಪೂರಕವಾಗಿ ಕೆಲವೇ ಕೆಲವು ಗುಲಾಮರನ್ನು ಸೃಷ್ಟಿಸುವ ಕೆಲಸವನ್ನು ಇತ್ತೀಚಿನ ಶಿಕ್ಷಣ ನೀತಿಗಳು ಮಾಡುತ್ತಿವೆ. ಅದರ ಭಾಗವಾಗಿಯೇ ಈ ನಾಲ್ಕು ವರ್ಷದ ಪದವಿ ಕೋರ್ಸ್‌ ಅನ್ನು ಸರ್ಕಾರ ಪರಿಚಯಿಸುತ್ತಿದೆ. ಇಂಥ ನೀತಿಗಳು ಭಾಷಾ ಅಧ್ಯಯನ ಮತ್ತು ಭಾಷಾ ಸಂಸ್ಕೃತಿಗೂ ಅಪಾಯವನ್ನು ತಂದೊಡ್ಡುತ್ತವೆ ಎಂದರು.

ಶಿಕ್ಷಣ ಕ್ಷೇತ್ರವನ್ನು ಅದರಲ್ಲೂ ಜ್ಷಾನ ಸಂಪಾದನೆಯಂಥ ಕೆಲಸವನ್ನು ಮಾರುಕಟ್ಟಗೆ ಪೂರಕ ಸಾಧನ ಎಂಬಂತಹ ವಾತಾವರಣವನ್ನು ಎಲ್ಲ ಆಳುವ ವರ್ಗಗಳು ಸೃಷ್ಟಿಸುತ್ತಲೇ ಬಂದವು. ಭಾರತದಲ್ಲೂ ಇದು ಬ್ರಿಟಿಷರಿಂದ ಹಿಡಿದು ಇಲ್ಲಿಯವರೆಗೂ ನಡೆದುಕೊಂಡು ಬಂದಿದೆ ಎಂದು ಹೇಳಿದರು.

ಪ್ರಗತಿಪರ ಚಿಂತಕ ಡಾ. ಜೆ.ಎಸ್.ಪಾಟೀಲ ಮಾತನಾಡಿ, ಪಟ್ಟಭದ್ರ ಹಿತಾಸಕ್ತಿಗಳ ಆಶಯದಂತೆ ಪ್ರಜಾತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿ ಕೇಂದ್ರ ಮತ್ತು ರಾಜ್ಯ ಬಿಜೇಪಿ ಸರ್ಕಾರಗಳು ಸೇರಿ ಈ ನಾಲ್ಕು ವರ್ಷದ ಪದವಿ ನೀತಿಯನ್ನು ಜಾರಿಗೊಳಿಸುತ್ತಿದೆ. ಜೊತೆಗೆ ಬಿಜೆಪಿ ಪಕ್ಷದ ಸಿದ್ದಾಂತಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ತರುವ ಹುನ್ನಾರವಾಗಿ ಹೊಸಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿದ್ದಾರೆ. ಇಂಥ ನೀತಿಗಳು ಈಗಿರುವ ನಿರುದ್ಯೋಗ ಸಂಖ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.

ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ನಾಯಕ ವಿ.ಎನ್.ರಾಜಶೇಖರ ಮಾತನಾಡಿ, ಗ್ರಾಮೀಣ, ಹಿಂದುಳಿದ ಮತ್ತು ಕೆಳವರ್ಗದ ಸಮುದಾಯದ ಜನರು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಈಗಾಲೇ ಈ ನಾಲ್ಕು ವರ್ಷದ ಕೋರ್ಸ್ ಅನ್ನು ದೆಹಲಿ ಮತ್ತು ಬೆಂಗಳೂರು ವಿಶ್ವ ವಿದ್ಯಾಲಯಗಳಲ್ಲಿ ಜಾರಿಗೊಳಿಸಿ ಯಶಶ್ವಿಯಾಗದೆ ಹಿಂಪಡೆದರು. ಹೀಗಿರುವಾಗ ಮತ್ತೆ ಈ ಪ್ರಯತ್ನಕ್ಕೆ ಕೈ ಹಾಕುವುದು ಶಿಕ್ಷಣ ವ್ಯವಸ್ಥೆಯನ್ನು ಹಿಂದಕ್ಕೆ ಕೊಂಡೊಯ್ಯುತ್ತದೆ ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ. ವಿ.ಎ. ಪಾಟೀಲ, ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಸಂಚಾಲಕ ಎಚ್.ಟಿ ಭರತಕುಮಾರ, ಕಾಲೇಜು ಮತ್ತು ವಿಶ್ವವಿದ್ಯಾಲಯದ ಅಸ್ಸೋಸಿಯೇಶನ್‍ನ ಸಂಘಟನಾಕಾರ ಡಾ.ಪಂಪಾಪತಿ ಎನ್.ಎಲ್. ಸೇರಿದಂತೆ ಜಿಲ್ಲೆಯ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಭಾಗವಹಿಸಿದ್ದರು.

***

ಹೆಣ್ಣುಮಕ್ಕಳ ಉನ್ನತ ವ್ಯಾಸಾಂಗಕ್ಕೆ ಇದು ದೊಡ್ಡಪೆಟ್ಟನ್ನು ನೀಡಲಿದೆ. ಮಾರುಕಟ್ಟೆಗೆ ಬೇಕಾದ ದುಡಿಯುವ ಕೈಗಳನ್ನು ಇಗ ಶಿಕ್ಷಣ ಕ್ಷೇತ್ರದಿಂದ ಪಡೆಯಲು ಇಂಥ ಶಿಕ್ಷಣ ನೀತಿಗಳು ಜಾರಿಯಾಗುತ್ತಿವೆ
–ನಾ. ದಿವಾಕರ,ಅಂಕಣಕಾರ ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.