
ಬಸವನಬಾಗೇವಾಡಿ: ‘ವಿಷಮುಕ್ತ ಆಹಾರ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ರೈತರು ಸಾವಯವ ಆಹಾರ ಧಾನ್ಯಗಳು ಹಾಗೂ ಕೃಷಿ ಉತ್ಪನ್ನಗಳನ್ನು ಬೆಳೆಯುವ ಮೂಲಕ ಆರ್ಥಿಕ ಸಬಲೀಕರಣ ಸಾಧಿಸಬೇಕು’ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲ್ಲೂಕಿನ ಮನಗೂಳಿ ಗ್ರಾಮದ ರೆಡ್ಡಿ ಫಾರ್ಮ್‌ನಲ್ಲಿ ಸಾವಯವ ಬೆಲ್ಲ ಉತ್ಪಾದನೆಯ ಆಲೆಮನೆ ಗಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ನಂತರದ ಭಾರತದ ಗ್ರಾಮೀಣ ಉದ್ಯಮ ಗುಡಿ ಕೈಗಾರಿಕೆಯನ್ನೇ ಅವಲಂಬಿಸಿತ್ತು. ಹೀಗಾಗಿ ದೇಶದ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿರುವ ಗುಡಿ ಕೈಗಾರಿಕೆ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರವಾಗಿದೆ’ ಎಂದರು.
‘ಸ್ವಾತಂತ್ರ್ಯ ಪಡೆದ ಭಾರತ ದೇಶದಲ್ಲಿ ಒಂದಿಬ್ಬರು ಬೃಹತ್ ಉದ್ಯಮಿಗಳ ಹೊರತಾಗಿ ದೊಡ್ಡಮಟ್ಟದ ಉದ್ಯಮಗಳು ಇರಲಿಲ್ಲ. ಆಗೆಲ್ಲ ಬೆಲ್ಲ, ಅಡುಗೆಎಣ್ಣೆ, ಬಟ್ಟೆಯಂಥ ಉತ್ಪನ್ನಗಳ ಉತ್ಪಾದನೆ ಮೂಲಕ ಸಶಕ್ತ ಭಾರತ ಕಟ್ಟುವಲ್ಲಿ ಗುಡಿ ಕೈಗಾರಿಕೆಗಳು ಮಹತ್ವದ ಪಾತ್ರ ನಿರ್ವಹಿಸಿವೆ. ಗ್ರಾಮೀಣ ಉದ್ಯಮ ಬೆಳೆಸಿ, ಸ್ಥಾನಿಕವಾಗಿಯೇ ಉದ್ಯೋಗ ಸೃಷ್ಟಿಸಿದ ಕೀರ್ತಿ ಗ್ರಾಮೀಣ ಗುಡಿ ಕೈಗಾರಿಕೆ ಹಾಗೂ ಸಹಕಾರಿ ರಂಗಕ್ಕೆ ಸಲ್ಲುತ್ತದೆ’ ಎಂದರು.
‘ಪ್ರಸಕ್ತ ಸಂದರ್ಭದಲ್ಲಿ ವಿಷಮುಕ್ತ ಆಹಾರ ಧಾನ್ಯ ಉತ್ಪಾದನೆ ಕಷ್ಟಸಾಧ್ಯವಾಗಿದೆ. ಬೆಲ್ಲ, ಸಕ್ಕರೆಯಂಥ ಆಹಾರವೂ ಅಧಿಕ ರಾಸಾಯನಿಕ ಹಾಗೂ ವಿಷಯುಕ್ತವಾಗಿದೆ. ಕಾರಣ ಸಕ್ಕರೆ ಕಾಯಿಲೆ ರೋಗದ ಸಮಸ್ಯೆಯೂ ಸಮಾಜವನ್ನು ಬಾಧಿಸುತ್ತಿದೆ’ ಎಂದು ಹೇಳಿದರು.
ಮನಗೂಳಿಯ ಅಭಿನವ ಸಂಗನಬಸವ ಶ್ರೀ ಸಾನ್ನಿಧ್ಯ ವಹಿಸಿದ್ದರು. ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಸಂಯುಕ್ತ ಪಾಟೀಲ, ಸಹಕಾರಿ ಧುರೀಣ ಐ.ಸಿ.ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮುಖಂಡರಾದ ಪ್ರಭು ದೇಸಾಯಿ, ಸುರೇಶ ಹಾರಿವಾಳ, ಶಿವನಗೌಡ ಗುಜಗೊಂಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಆಲೆಮನೆ ಸ್ಥಾಪಕಿ ಅಶ್ವಿನಿ ಚಂದ್ರಶೇಖರ ರೆಡ್ಡಿ, ಚಂದ್ರಶೇಖರ ರೆಡ್ಡಿ, ಪಟ್ಟಣ ಪಂಚಾಯತ್ ಸದಸ್ಯ ಭಾಗ್ಯರಾಜ ಸೊನ್ನದ ಇದ್ದರು.
ರಾಜ್ಯದಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಮಧ್ಯೆ ಏರ್ಪಟ್ಟಿರುವ ದರ ನಿಗದಿ ಸಂಕಷ್ಟದ ಪರಿಣಾಮ ಭವಿಷ್ಯದಲ್ಲಿ ಉದ್ಯಮಿಗಳು ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸದಿರುವ ಪರಿಸ್ಥಿತಿ ಎದುರಾಗಿದೆ
ಶಿವಾನಂದ ಪಾಟೀಲ ಜವಳಿ ಕಬ್ಬು ಅಭಿವೃದ್ಧಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.