ADVERTISEMENT

2 ‘ಎ’ ಮೀಸಲಾತಿ: ಪಕ್ಷ, ಸಂಘ ಪ್ರೇರಿತ ಹೋರಾಟವಲ್ಲ

ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 5:55 IST
Last Updated 12 ಜುಲೈ 2025, 5:55 IST
ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ   

ವಿಜಯಪುರ: ‘2ಎ ಮೀಸಲಾತಿ ಹೋರಾಟವು ಯಾವುದೇ ಪಕ್ಷ, ಸಂಘಟನೆ, ವ್ಯಕ್ತಿ ಪ್ರೇರಿತ ಹೋರಾಟವಲ್ಲ, ಇದು ಲಿಂಗಾಯತ ಪಂಚಮಸಾಲಿ ಸಮುದಾಯ ಪ್ರೇರಿತ ಹೋರಾಟವಾಗಿದೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. 

‘2 ಎ ಮೀಸಲಾತಿ ಹೋರಾಟವು ಆರ್‌ಎಸ್‌ಎಸ್‌, ಸಂಘ ಪರಿವಾರ ಪ್ರೇರಿತ ಹೋರಾಟ’ ಎಂಬ ಆರೋಪ ಕುರಿತು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಶ್ರೀಗಳು, ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಹೋರಾಟವನ್ನು ಕಾಂಗ್ರೆಸ್‌ ಪ್ರೇರಿತ ಹೋರಾಟ ಎಂದು, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಿಜೆಪಿ ಪ್ರೇರಿತ ಹೋರಾಟ ಎಂದು ಬಿಂಬಿಸುವ ಮೂಲಕ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯಿತು’ ಎಂದು ಹೇಳಿದರು.

ದೇಶದಲ್ಲಿ ಜಾತಿ, ಜನ ಗಣತಿ ನಡೆಯುಲಿದ್ದು, ಈ ಸಂಬಂಧ ಚರ್ಚೆಗಳು ಆರಂಭವಾಗಿವೆ. ಜಾತಿ ಗಣತಿ ವೇಳೆ ಜಾತಿ, ಧರ್ಮದ ಕಾಲಂನಲ್ಲಿ ಪಂಚಮಸಾಲಿಗಳು ಏನೆಂದು ನಮೂದಿಸಬೇಕು ಎಂಬ ಕುರಿತು ಚರ್ಚಿಸಿ, ತೀರ್ಮಾನಕೈಗೊಳ್ಳುವ ಸಲುವಾಗಿ ಜುಲೈ 13ಕ್ಕೆ ಮಧ್ಯಾಹ್ನ 12.30ಕ್ಕೆ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಗುಡಿಯ ಶಿವಾನುಭ ಮಂಟಪದಲ್ಲಿ ಪಂಚಮಸಾಲಿ ವಕೀಲರ ಪರಿಷತ್ತಿನ ರಾಜ್ಯ ಮಟ್ಟದ ಚಿಂತನಾ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಪಂಚಮಸಾಲಿಗಳು ಈ ಹಿಂದಿನ ಗಣತಿಗಳಲ್ಲಿ ಪಂಚಮಸಾಲಿ, ಲಿಂಗಾಯತ ಪಂಚಮಸಾಲಿ, ವೀರಶೈವ ಪಂಚಮಸಾಲಿ ಸೇರಿದಂತೆ ವಿವಿಧ ಹೆಸರುಗಳನ್ನು ನಮೂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಗಣತಿ ವೇಳೆ ಸಮಾಜದವರು ಏನೆಂದು ನಮೂದಿಸಬೇಕು ಎಂಬುದನ್ನು ನಿರ್ಧರಿಸುವ ಸಂಬಂಧ ಚಿಂತನಾ ಸಭೆಯಲ್ಲಿ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಹೇಳಿದರು.

2015ರಲ್ಲಿ ಕಾಂತರಾಜು ಅಧ್ಯಕ್ಷತೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಜಾತಿ ಗಣತಿ ವೇಳೆ ಪಂಚಮಸಾಲಿಗಳು ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಲು ಸಮಾಜಕ್ಕೆ ಕರೆ ನೀಡಲಾಗಿತ್ತು. ಆದರೆ, ಸಮಾಜದಲ್ಲಿ ಜಾಗೃತಿ ಇರದ ಕಾರಣ ಬೇರೆ ಬೇರೆ ಹೆಸರನ್ನು ನಮೂದಿಸಿದ್ದರು. ಇದೀಗ 2 ಎ ಮೀಸಲಾತಿ ಹೋರಾಟದ ಪರಿಣಾಮ ಪಂಚಮಸಾಲಿ ಸಮಾಜದಲ್ಲಿ ಜಾಗೃತಿ‌ ಮೂಡಿದೆ ಎಂದರು.

ಮುಂಬರುವ ಗಣತಿ ವೇಳೆ ಸಮಾಜದ ಮಕ್ಕಳ ಭವಿಷ್ಯಕ್ಕೆ ಮೀಸಲಾತಿ ಪಡೆಯಲು ಅನುಕೂಲ ಆಗುವ ದೃಷ್ಟಿಯಿಂದ ಒಮ್ಮತದ ಮತ್ತು ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ತಜ್ಞ ವಕೀಲರೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ವಕೀಲರ ಪರಿಷತ್ತಿನ ಚಿಂತನಾ ಸಭೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಸುಮಾರು 800 ವಕೀಲರು ಭಾಗವಹಿಸುವ ನಿರೀಕ್ಷೆ ಇದೆ. ಈ ಚಿಂತನಾ ಸಭೆಯಲ್ಲಿ ಪಂಚಮಸಾಲಿ ಲಿಂಗಾಯತ, ದೀಕ್ಷಾ ಲಿಂಗಾಯತ, ಗೌಡ ಲಿಂಗಾಯತ, ಮಲೆಯ ಲಿಂಗಾಯತ ಸೇರಿದಂತೆ ಎಲ್ಲ ಒಳಪಂಗಡದವರು ಭಾಗವಹಿಸಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಪಾಟೀಲ ದೇವರ ಹಿಪ್ಪರಗಿ, ಶ್ರೀಶೈಲ ಬುಕ್ಕಣ್ಣಿ, ದಾನೇಶ ಅವಟಿ, ಜಿ.ಬಿ.ಕೋಳೂರ, ಬಾಪುಗೌಡ ಪಾಟೀಲ, ಶರಣಬಸಪ್ಪ ಗಂಗಶೆಟ್ಟಿ, ಸಿದ್ದು ಹಳ್ಳೂರ ಉಪಸ್ಥಿತರಿದ್ದರು.

2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ನಡೆದ ಶಾಂತಿಯುತ ಹೋರಾಟದ ವೇಳೆ ಸಮಾಜದವರ ಮೇಲೆ ಲಾಠಿ ಚಾರ್ಜ್‌ ಆಗಿರುವ ಕುರಿತು ಆರು ತಿಂಗಳ ಒಳಗೆ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿರುವುದು ಸ್ವಾಗತಾರ್ಹ
ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಪೀಠ ಕೂಡಲಸಂಗಮ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.