ವಿಜಯಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂಬರುವ ದಿನಗಳಲ್ಲಿ ನಡೆಸಲಿರುವ ಜಾತಿ ಗಣತಿ ವೇಳೆ ಪಂಚಮಸಾಲಿ ಸಮಾಜದವರು ಜಾತಿ ಕಾಲಂನಲ್ಲಿ ಯಾವ ಹೆಸರು ನಮೂದಿಸಬೇಕು ಎಂಬ ಗೊಂದಲವನ್ನು ನಿವಾರಿಸುವ ಸಂಬಂಧ ನಗರದಲ್ಲಿ ಭಾನುವಾರ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಚಿಂತನಾ ಸಭೆ ನಡೆಯಿತು.
ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಾನುವಾರ ನಡೆದ ಈ ಸಭೆಯಲ್ಲಿ ರಾಜ್ಯದ 13 ಜಿಲ್ಲೆಗಳಿಂದ ಆಗಮಿಸಿದ್ದ ವಕೀಲರ ಅಭಿಪ್ರಾಯ ಸಂಗ್ರಹಿಸಲಾಯಿತು.
ಜಾತಿ ಗಣತಿ ಕಾಲಂನಲ್ಲಿ ‘ಲಿಂಗಾಯತ ಪಂಚಮಸಾಲಿ’ ಎಂದು ನಮೂದಿಸಬೇಕು ಎಂದು ಕೆಲವರು, ‘ಹಿಂದು ಲಿಂಗಾಯತ ಪಂಚಮಸಾಲಿ’ ಎಂದು ನಮೂದಿಸಬೇಕು ಎಂದು ಇನ್ನು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ವಿಷಯದಲ್ಲಿ ಒಮ್ಮತ ಮೂಡದ ಕಾರಣ ಮುಂದಿನ ಸೆಪ್ಟೆಂಬರ್ 21ರಂದು ಸವದತ್ತಿಯಲ್ಲಿ ಮತ್ತೊಂದು ಸುತ್ತಿನ ವಕೀಲರ ಪರಿಷತ್ತಿನ ಚಿಂತನಾ ಸಭೆ ನಡೆಸಿ, ತೀರ್ಮಾನಿಸಲು ನಿರ್ಧರಿಸಲಾಯಿತು.
ಕೇಂದ್ರ ಸರ್ಕಾರ ನಡೆಸಲಿರುವ ಜನ ಗಣತಿಯ ಜಾತಿಗಳ ಪಟ್ಟಿಯಲ್ಲಿ ಪಂಚಮಸಾಲಿ ಸಮಾಜದ ಕೋಡ್ ಇದೆಯೋ, ಇಲ್ಲವೋ ಎಂಬುದನ್ನು ತಿಳಿಯಲು ಸುಪ್ರೀಂ ಕೋರ್ಟ್ ವಕೀಲರಾದ ಸಂಕೇತ ಏಣಗಿ ನೇತೃತ್ವದಲ್ಲಿ ಪರಿಶೀಲನೆ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಡಿ.10 ರಂದು ಪಂಚಮಸಾಲಿ ಸಮಾಜದ ಬಾವುಟಗಳ ಆರ್ಭಟದ ಬೃಹತ್ ಮೀಸಲಾತಿ ಸಮಾವೇಶ ಹಾಗೂ ಪಂಚಮಸಾಲಿ ವಕೀಲರ ಪರಿಷತ್ತಿನ ಎರಡನೇ ಸಮಾವೇಶವನ್ನು ಬೆಳಗಾವಿಯಲ್ಲಿ ನಡೆಸಲು ನಿರ್ಧರಿಸಲಾಯಿತು.
ಚಿಂತನಾ ಸಭೆಯಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೇಂದ್ರ, ರಾಜ್ಯ ಸರ್ಕಾರ ನಡೆಸುವ ಜನ ಗಣತಿಯಲ್ಲಿ ಪಂಚಮಸಾಲಿ ಸಮಾಜದವರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶೈಕ್ಷಣಿಕ, ಉದ್ಯೋಗ ಹಾಗೂ ರಾಜಕೀಯ ಪ್ರಾತಿನಿಧ್ಯ ಕೇಳಲು ಅನುಕೂಲವಾಗುವ ದೃಷ್ಟಿಯಿಂದ ಸೂಕ್ತ ಹೆಸರನ್ನು ನಮೂದಿಸಲು, ಸೂಕ್ತ ತೀರ್ಮಾನ ಕೈಗೊಳ್ಳಬೇಕಾದ ಹೊಣೆ ಸಮಾಜದ ವಕೀಲರ ಮೇಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ 2015ರಲ್ಲಿ ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪಂಚಮಸಾಲಿ ಒಳಪಂಗಡವನ್ನು ಅಖಂಡವಾಗಿ ತೋರಿಸಿಲ್ಲ, ಪರಿಣಾಮ ಪಂಚಮಸಾಲಿ ಸಮಾಜ ರಾಜ್ಯದಲ್ಲಿ 16 ಲಕ್ಷ ಇದೆ ಎಂದು ತಿಳಿದುಬಂದಿದೆ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಮಾಜದ ಮುಖಂಡರಾದ ಬಿ.ಎಲ್.ಪಾಟೀಲ, ಪಂಚನಗೌಡ ದ್ಯಾಮನಗೌಡ, ನಿಂಗಪ್ಪ ಪಿರೋಜಿ, ಬಿ.ಎಂ.ಪಾಟೀಲ ದೇವರಹಿಪ್ಪರಗಿ, ಸಂಗನಗೌಡ ಪಾಟೀಲ, ಎಸ್.ಎಸ್.ಮೂಡಲಗಿ, ಈರಣ್ಣ ಚಾಗಶೆಟ್ಟಿ, ಎಸ್.ವಿ.ಪಾಟೀಲ, ದಾನಪ್ಪ ಅವಟಿ, ನಿಂಗನಗೌಡ ಸೋಲಾಪುರ ಇದ್ದರು.
ಪಂಚಮಸಾಲಿ ಸಮಾಜದ ಹೆಸರನ್ನು ದುರುಪಯೋಗ ಆಗದಂತೆ ನೋಡಿಕೊಳ್ಳೋಣ ನಮ್ಮೋಳಗಿನ ಕೆಲವು ಅಜ್ಞಾನಿಗಳು ಬಂಡವಾಳ ಶಾಹಿಗಳು ನಮ್ಮ ಹೋರಾಟದ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಅವರಿಗೆ ಅವಕಾಶ ಒದಗಿಸುವುದು ಬೇಡಬಸವಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಪೀಠಕೂಡಲಸಂಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.