ADVERTISEMENT

ಪಂಚಮಸಾಲಿ ಮೂರನೇ ಪೀಠ: ಫೆ.13ರಂದು ಶ್ರೀಗಳ ಪೀಠಾರೋಹಣ

ಧರ್ಮ ಸಮ್ಮೇಳನ, ರೈತ ಸಮಾವೇಶಕ್ಕೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 15:30 IST
Last Updated 11 ಫೆಬ್ರುವರಿ 2022, 15:30 IST
ಸಂಗನಬಸವ ಸ್ವಾಮೀಜಿ
ಸಂಗನಬಸವ ಸ್ವಾಮೀಜಿ   

ವಿಜಯಪುರ: ಜಮಖಂಡಿ ತಾಲ್ಲೂಕಿನ ಆಲಗೂರ ಗ್ರಾಮದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಮೂರನೇ ಪೀಠದ ನೂತನ ಜಗದ್ಗುರುಗಳಾದ ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳ ಪೀಠಾರೋಹಣ, ಧರ್ಮ ಸಮ್ಮೇಳನ ಹಾಗೂ ರೈತ ಸಮಾವೇಶ ಫೆ.13ರಂದು ನಡೆಯಲಿದೆ ಎಂದು ಮನಗೂಳಿ ಹಿರೇಮಠದ ಸಂಗನಬಸವ ಶ್ರೀ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಸಚಿವರು, ಶಾಸಕರು, ಸಂಸದರುಹಾಗೂ ನಾಡಿನ 350ಕ್ಕೂ ಅಧಿಕ ಮಠಾಧೀಶರು ಪೀಠಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಫೆ.12ರಂದು ಸಂಜೆ ನೂತನ ಜಗದ್ಗುರುಗಳಾದ ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳ ಪುರಪ್ರವೇಶವಾಗಲಿದೆ. ರಾತ್ರಿ 12ಕ್ಕೆ ಧಾರ್ಮಿಕ ಮತ್ತು ಪೂಜಾ ಕಾರ್ಯಗಳು ನಡೆಯಲಿವೆ. ಫೆ.13ರಂದು ಬೆಳಿಗ್ಗೆ 4.15ಕ್ಕೆ ಶ್ರೀಗಳ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 4.48ಕ್ಕೆ ಪೀಠಾರೋಹಣ, ಬೆಳಿಗ್ಗೆ 6.48ಕ್ಕೆ ರುದ್ರಾಕ್ಷಿ ಕಿರೀಟ ಧಾರಣೆ ನಡೆಯಲಿದೆ. ಬೆಳಿಗ್ಗೆ 8ಕ್ಕೆ ಕೃಷ್ಣಾರತಿ ನಡೆಯಲಿದೆ ಎಂದರು.

ADVERTISEMENT

ಬೆಳಿಗ್ಗೆ 10.30ಕ್ಕೆ ಧರ್ಮ ಸಮ್ಮೇಳನ ಹಾಗೂರೈತ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಮೂರನೇ ಪೀಠ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೂ ಆಹ್ವಾನ ನೀಡಲಾಗುವುದು ಎಂದು ಮನಗೂಳಿ ಹಿರೇಮಠದ ಸಂಗನಬಸವ ಸ್ವಾಮೀಜಿ ತಿಳಿಸಿದರು.

ಪಂಚಮಸಾಲಿ ಸಮುದಾಯಕ್ಕೆ ಹರಿಹರ ಪೀಠ ಮೂಲಮಠವೇ ಹೊರತು, ಕೂಡಲಸಂಗಮ ಮಠವಲ್ಲ. ಇದೀಗ ಆಲಗೂರಿನಲ್ಲಿಮೂರನೇ ಮಠ ಸ್ಥಾಪನೆಯಾಗುತ್ತಿದೆ. ಇನ್ನೂ ಎರಡು ಮಠ ಸ್ಥಾಪನೆಯಾದರೂ ಸಮಾಜದ ಸಂಘಟನೆಗೆ ಅನುಕೂಲವಾಗಲಿದೆಯೇ ಹೊರತು ತೊಂದರೆಯಿಲ್ಲ ಎಂದು ಹೇಳಿದರು.

ಆಲಗೂರದಲ್ಲಿ ಸ್ಥಾಪನೆಯಾಗುವವೀರಶೈವ ಲಿಂಗಾಯತ ಪಂಚಮಸಾಲಿ ಮೂರನೇ ಪೀಠವು ಸಂಸ್ಕಾರ, ಸೇವೆ, ಕಾಯಕ, ದಾಸೋಹ, ಗೋರಕ್ಷೆ, ಕೃಷಿ, ವಿಜ್ಞಾನ, ವಿಕಾಸದಂತ ಹತ್ತು ಹಲವು ಧ್ಯೇಯಗಳೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ನೂತನ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.

ಪೀಠ ಹಮ್ಮಿಕೊಂಡಿರುವ ಕಾರ್ಯಕ್ರಮ ಅನುಷ್ಠಾನದ ಸಹಾಯಾರ್ಥವಾಗಿ ‘ಬಸವ ಜೋಳಿಗೆ’ ದಾಸೋಹ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದರು.

ಬುರಾಣಪುರದ ಆರೂಢ ಆಶ್ರಯಮದ ಯೋಗೀಶ್ವರಿ ಮಾತಾಜಿ, ಸಮಾಜದ ಮುಖಂಡರಾದ ಹೊನಮಲ್ಲ ಸಾರವಾಡ, ಅಶೋಕ ಪಾಟೀಲ, ಮುತ್ತು ಜಂಗಮಶೆಟ್ಟಿ, ಶಂಕರಗೌಡ ಮನಗೂಳಿ, ಸಾಹೇಬಗೌಡ ಪಾಟೀಲ, ರವಿ ಮುಕರ್ತಿಹಾಳ, ರಾಜು ಕಳಸಗೊಂಡ, ಶಾಂತು ಇಂಡಿ ಪ‍ತ್ರಿಕಾಗೋಷ್ಠಿಯಲ್ಲಿ ಇದ್ದರು.

***

ಪಂಚಮಸಾಲಿ ಮೂರನೇ ಪೀಠದ ನೂತನ ಜಗದ್ಗುರುಗಳ ಪೀಠಾರೋಹಣ ಕಾರ್ಯದಲ್ಲಿ ಎಲ್ಲ ಜಾತಿ, ಧರ್ಮದ ಭಕ್ತರು, ಎಲ್ಲ ಪಕ್ಷದ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ

–ಸಂಗನಬಸವ ಶ್ರೀ,ಹಿರೇಮಠ,ಮನಗೂಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.