ADVERTISEMENT

ವಿಜಯಪುರ: ನಾಳೆಯಿಂದ ಪವಿತ್ರ ವಸ್ತ್ರ ಅಭಿಯಾನ

ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 13:14 IST
Last Updated 22 ಸೆಪ್ಟೆಂಬರ್ 2021, 13:14 IST
ಪ್ರಸನ್ನ
ಪ್ರಸನ್ನ   

ವಿಜಯಪುರ: ಸಾಗರ ತಾಲ್ಲೂಕು ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ನಗರದ ಬಿ.ಎಲ್.ಡಿ.ಇ ಸಂಸ್ಥೆಯಎಸ್.ಎಸ್.ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೆ.23 ರಿಂದ 25ರ ವರೆಗೆ ಪವಿತ್ರ ವಸ್ತ್ರ ಪ್ರದರ್ಶನ ಮತ್ತು ಮಾರಾಟ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮಾರುಕಟ್ಟೆ ವ್ಯವಸ್ಥಾಪಕಿ ಪದ್ಮಶ್ರೀ ಡಿ. ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ ಪರಿಣಾಮ ಕೈಮಗ್ಗ ನೇಕಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಲಕ್ಷಾಂತರ ಮೀಟರ್‌ ಬಟ್ಟೆ ವ್ಯಾಪಾರವಾಗದೇ ಬಿದ್ದಿವೆ. ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಪವಿತ್ರ ವಸ್ತ್ರ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ನೈಸರ್ಗಿಕ ಬಣ್ಣ ಹಾಕಿದ ಪರಿಶುದ್ಧ ಹತ್ತಿ ಕೈಮಗ್ಗದ ಪದಾರ್ಥಗಳು ಹಾಗೂ ಇತರೆ ಕೈಉತ್ಪನ್ನಗಳು, ಆಹಾರ ಪದಾರ್ಥಗಳು ಪ್ರದರ್ಶನದಲ್ಲಿ ಮಾರಾಟಕ್ಕೆ ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಉದ್ಘಾಟನೆ ಇಂದು:
ಸಿಡಾಕ್ ಜಂಟಿ ನಿರ್ದೇಶಕಿ ಸುಪ್ರಿತಾ ಬಳ್ಳಾರಿ ಅವರುಸೆ. 23 ಬೆಳಿಗ್ಗೆ 9.30ಕ್ಕೆ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಕೈಮಗ್ಗ ಸಂಸ್ಥೆ ಅಧ್ಯಕ್ಷ, ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ, ಆಶಾ.ಎಂ.ಪಾಟೀಲ, ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜನಿಯರಿಂಗ್ ಕಾಲೇಜು ಉಪಪ್ರಾಚಾರ್ಯ ಡಾ.ಗೀತಾಂಜಲಿ ಪಾಟೀಲ, ಬಿ.ಎಂ.ಪಾಟೀಲ ಪಬ್ಲಿಕ್ ಸ್ಕೂಲ್ ಮುಖ್ಯೋಪಾಧ್ಯಯ ಬಂದನಾ ಬ್ಯಾನರ್ಜಿಉಪಸ್ಥಿತರಿರಲಿದ್ದಾರೆ ಎಂದರು.

ಉತ್ತಮ ಸ್ಪಂದನೆ:
ಚರಕ ಸಂಸ್ಥೆ ಸಂಸ್ಥಾಪಕ ಪ್ರಸನ್ನ ಮಾತನಾಡಿ,ಸೆಪ್ಟೆಂಬರ್‌ನಿಂದ ನವೆಂಬರ್‌ ವರೆಗೆ ಪವಿತ್ರ ವಸ್ತ್ರ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಶಿವಮೊಗ್ಗ, ಉಡುಪಿ, ಶಿರಸಿಯಲ್ಲಿ ಅಭಿಯಾನ ನಡೆದಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಲಭಿಸಿದೆ ಎಂದು ತಿಳಿಸಿದರು.

ದೇಶದ ಹೆಸರಾಂತ ವಸ್ತ್ರ ವಿನ್ಯಾಸಕರು, ಪ್ರಮುಖ ಕೈಮಗ್ಗ ಹಾಗೂ ಕರಕುಶಲ ಸಂಸ್ಥೆಗಳು, ಜನಪರ ಸಂಘಟನೆಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿವೆ ಎಂದರು.

ಕೈ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಹಾಗೂ ಸಮಾಜದ ನೈತಿಕ ಶಕ್ತಿಗಳನ್ನು ಈ ಅಭಿಯಾನಕ್ಕೆ ಧ್ವನಿಯಾಗಿಸುವ ಉದ್ದೇಶವಿದ್ದು, ಈ ಸಂಬಂಧ ವಿವಿಧ ಸಹಕಾರ ಸಂಘಗಳ ಬಳಿ ಸಹಕಾರ ಕೇಳುತ್ತೇವೆ. ಅವರನ್ನೂ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಖಾದಿ, ಕೈಮಗ್ಗದ ಉತ್ಪನ್ನ ಮತ್ತು ಕುಶಲಗಾರಿಕೆಗೆ ವಿಜಯಪುರ ಮೊದಲಿನಿಂದಲೂ ಪ್ರಸಿದ್ಧವಾದ ಜಿಲ್ಲೆಯಾಗಿದೆ ಎಂದು ನೆನಪಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿಕಾಲೇಜು ಪ್ರಾಚಾರ್ಯ ಡಾ.ಭಾರತಿ ಖಾಸನೀಸ್,ಡಾ.ಮಹಾಂತೇಶ ಬಿರಾದಾರ, ಪ್ರೊ.ಮುರುಗೇಶ ಪಟ್ಟಣಶೆಟ್ಟಿ, ಐ.ಎಸ್‌.ಕಾಳಪ್ಪನವರ್‌ ಇದ್ದರು.

****

ಗ್ರಾಮೀಣ ಉದ್ಯೋಗ ರಕ್ಷಣೆಗೆ ಸಲಹೆ
ವಿಜಯಪುರ
: ಗ್ರಾಮೀಣ ಉದ್ಯೋಗ ರಕ್ಷಣೆ ಆಗಬೇಕಿದೆ. ಇದು ಆಗದೇ ಹೋದರೆ ದೇಶ ಉಳಿಯಲು ಸಾಧ್ಯವಿಲ್ಲ. ಈ ಉದ್ದೇಶದೊಂದಿಗೆ ಪವಿತ್ರ ವಸ್ತ್ರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದುಚರಕ ಸಂಸ್ಥೆ ಸಂಸ್ಥಾಪಕ ಪ್ರಸನ್ನ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರ ಪ್ರದೇಶದ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡದೇ ಗ್ರಾಮೀಣ ಪ್ರದೇಶದ ಉದ್ಯಮಕ್ಕೆ ಒತ್ತು ನೀಡಬೇಕು. ಈ ಮೂಲಕ ಗ್ರಾಮೀಣ ಉದ್ಯೋಗ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಿ ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಎಂಬ ಕವಿ ಸಿದ್ದಲಿಂಗಯ್ಯನವರ ಪ್ರಸಿದ್ಧ ಹಾಡನ್ನು ನೆನಪಿಸಿಕೊಂಡರೆ ಶ್ರೀಮಂತರಿಗೆ, ಉದ್ದಿಮೆದಾರರಿಗೆ, ನಗರಕ್ಕೆ ಬಂತೇ ಹೊರತು ಹಳ್ಳಿಗೆ ಬರಲಿಲ್ಲ ಎಂಬ ಉತ್ತರ ಲಭಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

***

ಕೇರಳ ಸರ್ಕಾರವುಕೈಮಗ್ಗ ನೇಕಾರರಿಗೆ ನರೇಗಾ ಯೋಜನೆಯನ್ನು ಅನ್ವಯಿಸಿದೆ ಪರಿಣಾಮ ಪ್ರತಿಯೊಬ್ಬ ನೇಕಾರ ದಿನವೊಂದಕ್ಕೆ ₹ 600 ಗಳಿಸುವಂತಾಗಿದೆ. ಇದು ಕರ್ನಾಟಕದಲ್ಲೂ ಅನ್ವಯವಾಗಬೇಕಿದೆ
–ಪ್ರಸನ್ನ, ಸಂಸ್ಥಾಪಕ,ಚರಕ ಸಂಸ್ಥೆ, ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.