ADVERTISEMENT

ಮಕ್ಕಳಲ್ಲಿ ಮೌಲ್ಯ ಬಿತ್ತುವ ಕಾರ್ಯ ಮಾಡಿ

ಶಿಕ್ಷಕರಿಗೆ ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ್ ಲಮಾಣಿ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 12:53 IST
Last Updated 5 ಸೆಪ್ಟೆಂಬರ್ 2021, 12:53 IST
ವಿಜಯಪುರ ನಗರದದಲ್ಲಿ ಭಾನುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು 
ವಿಜಯಪುರ ನಗರದದಲ್ಲಿ ಭಾನುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು    

ವಿಜಯಪುರ:ಶಿಕ್ಷಕರು ಮಕ್ಕಳಿಗೆ ಅಂಕ ಗಳಿಸುವುದನ್ನು ಮಾತ್ರ ಬೋಧಿಸದೇ ಜೀವನ ಪಾಠ ಹೇಳಿಕೊಡುವ, ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂದು ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಂಕಗಳಿಗಷ್ಟೇ ಹೆಚ್ಚಿನ ಪ್ರಾಮುಖ್ಯತೆ ನೀಡದೆ ಮಕ್ಕಳ ಪ್ರತಿಭೆ, ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ADVERTISEMENT

ತಂದೆ, ತಾಯಿಯ ನಂತರ ಮಕ್ಕಳ ಜೀವನ ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಮನಸ್ಸಿಟ್ಟು ಪಾಠ ಮಾಡುವ ಶಿಕ್ಷಕರು ವಿದ್ಯಾರ್ಥಿಯ ಮನಸ್ಸಿನಲ್ಲಿ ಸದಾ ಇರುತ್ತಾರೆ. ವಿದ್ಯಾರ್ಥಿಯು ಎಂತಹ ಉನ್ನತ ಸ್ಥಾನವನ್ನು ಅಲಂಕರಿಸಿದರೂ ಆ ಶಿಕ್ಷಕರನ್ನು ಮರೆಯುವುದಿಲ್ಲ ಎಂದು ಹೇಳಿದರು.

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ ಮಾತನಾಡಿ, ದೇಶದ ಭವಿಷ್ಯ ನಿರ್ಮಿಸುವವರು ಶಿಕ್ಷಕರು. ಗುರುಗಳನ್ನು ತ್ರಿಮೂರ್ತಿಗಳಿಗೆ ಹೋಲಿಸಲಾಗಿದೆ. ಅಂತೆಯೇ ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಸುಧಾರಿಸುವ ಕಾರ್ಯವಾಗಬೇಕಾಗಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ವಿ. ಹೊಸೂರು ಮಾತನಾಡಿ, ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಆ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಕೋವಿಡ್ ಕಾಲದಲ್ಲಿ ಕಾರ್ಯ ನಿರ್ವಹಿಸಿ ಶಿಕ್ಷಕರು ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಸುರೇಶ್ ದೇಸಾಯಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ, ಶಿವಾನಂದ ಗುಡ್ಡೋಡಗಿ, ಎಸ್.ಎಸ್ ಪಡಶೆಟ್ಟಿ, ರಾಜಶೇಖರ ಉಮರಾಣಿ, ಜಗದೀಶ, ಬಿ.ಎಚ್.ನಾಡಗೇರ, ಸಯ್ಯದ್ ಜುಬೇರ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

***

ಸರ್ಕಾರಿ ಶಾಲೆಗಳಲ್ಲಿ ಕಲಿತರೆ ಒಳ್ಳೆಯ ಭವಿಷ್ಯ ಇದೆ ಎಂಬ ಭಾವನೆಯನ್ನು ಎಲ್ಲರಲ್ಲೂ ಮೂಡಿಸುವಂತಾಗಬೇಕು
ಶ್ರೀಹರಿ ಗೋಳಸಂಗಿ, ಅಧ್ಯಕ್ಷ
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ

****

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು

ವಿಜಯಪುರ: 2021–22ನೇ ಸಾಲಿನಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಿಂದ ತಲಾ ಏಳು ಜನ ಶಿಕ್ಷಕರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.

ಪ್ರಾಥಮಿಕ ಶಾಲಾ ವಿಭಾಗ: ಅರವಿಂದ ಬಿರಾದಾರ(ಬರಡೋಲ), ಅಕ್ಕಮಹಾದೇವಿ ಕಾಳೆ(ಸಿಂದಗಿ ಪಟ್ಟಣ), ಬಿ.ಎಂ.ಬಿರಾದಾರ(ಹಿರೇಬೇನೂರ), ಜೆ.ವಿ.ಮೊಟಗಿ(ಮುದ್ದಾಪುರ), ಮಲ್ಲಿಕಾರ್ಜುನ ಎಚ್‌.ಮಾದರ(ನಿಡೋಣಿ), ಜಿ.ಎನ್‌.ಹೂಗಾರ(ಮುದ್ದೇಬಿಹಾಳ), ಬಿ.ಎಸ್‌.ಸಜ್ಜನ(ವಿಜಯಪುರ ನಗರ).

ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಅರ್ಚನಾ ಕೆ.(ಯಂಕಂಚಿ), ಎಂ.ಎಸ್‌.ಹದ್ಲಿ(ವಿಜಯಪುರ ನಗರ), ಗಿರಿಮಲ್ಲಪ್ಪ ತರಡಿ(ಹಲಸಂಗಿ), ಕೆ.ಬಿ.ಕೊಂಗಲ್‌(ಅಮರಗೋಳ), ಆರ್‌.ಬಿ.ಸೌದಾಗರ(ಹಿರೇಮಸಳಿ), ಮಹಾದೇವಿ ಕೆ. ಪಾಟೀಲ(ಮಖಣಾಪುರ),ಚನ್ನಬಸಪ್ಪ ಬಿರಾದಾರ(ಮಣಗೂರ ಪು.ಕೆ).

ಪ್ರೌಢಶಾಲಾ ವಿಭಾಗ: ಪ್ರಭಾಕರ ಹಿರೇಮಠ(ಸವನಹಳ್ಳಿ), ಮುಕುಂದ ಆಲೂರ(ವಿಜಯಪುರ ನಗರ), ರಮೇಶ ನಾಯಿಕ(ಹಲಸಂಗಿ), ಅಸ್ಲಾಂ ಯಾ.ನಗಾರ್ಚಿ(ಶಿರಸ್ಯಾಡ), ರಾಜಕುಮಾರ ಮ್ಯಾಗೇರಿ(ಮೂಕಿಹಾಳ), ಪಿ.ಎಸ್.ಅಗ್ನಿ(ಚಟ್ಟರಕಿ), ಎಚ್‌.ಅರ್‌.ಬಾಲಿ(ವಿಜಯಪುರ ನಗರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.