ADVERTISEMENT

ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದ ವ್ಯಕ್ತಿಗಳನ್ನು ಸ್ಮರಿಸಬೇಕು: ಬಿ.ಎನ್.ಕೃಷ್ಣಪ್ಪ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 13:13 IST
Last Updated 26 ನವೆಂಬರ್ 2021, 13:13 IST
ವಿಜಯಪುರ ಪಟ್ಟಣದಲ್ಲಿ ಜೈಗಣೇಶ್ ಗೆಳೆಯರ ಬಳಗದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎನ್. ಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿದರು
ವಿಜಯಪುರ ಪಟ್ಟಣದಲ್ಲಿ ಜೈಗಣೇಶ್ ಗೆಳೆಯರ ಬಳಗದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎನ್. ಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿದರು   

ವಿಜಯಪುರ: ‘ಭಾಷಾವಾರು ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿದ್ದ ಕನ್ನಡದ ಭಾಗಗಳನ್ನು ಒಗ್ಗೂಡಿಸಿ ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳಬೇಕು. ಕನ್ನಡವನ್ನು ಉಳಿಸಿ ಬೆಳೆಸಲು ಪ್ರತಿಜ್ಞೆ ಮಾಡಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎನ್. ಕೃಷ್ಣಪ್ಪ ಹೇಳಿದರು.

ಪಟ್ಟಣದ ರೋಜ್‌ಗಾರ್ ಕಚೇರಿ ಸಮೀಪದಲ್ಲಿ ಶುಕ್ರವಾರ ಜೈಗಣೇಶ ಗೆಳೆಯರ ಬಳಗದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ತಾಯಿಯಿಂದ ಕಲಿಯುವುದೇ ಮಾತೃಭಾಷೆ. ರಾಜ್ಯದಲ್ಲಿ ವಾಸಿಸುವ ಜನರು ಯಾವುದೇ ಜಾತಿ, ಮತ, ಧರ್ಮವನ್ನು ಲೆಕ್ಕಿಸದೆ ಕನ್ನಡಿಗರು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಪ್ರಸ್ತುತ ಕನ್ನಡವನ್ನು ಉಳಿಸಿ ಬೆಳೆಸಲಾಗುತ್ತಿದೆಯೇ ಎನ್ನುವ ಚಿಂತನೆಯ ಅಗತ್ಯವಿದೆ. ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸದೆ ಆಂಗ್ಲ ಮಾಧ್ಯಮ ಶಾಲೆಗಳಿಗೆ ದಾಖಲಿಸುತ್ತೇವೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಕುತ್ತು ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಎಸ್. ಭಾಸ್ಕರ್ ಮಾತನಾಡಿ, ರಾಜ್ಯದಲ್ಲಿ ನಾಡು, ನುಡಿ, ಜಲ, ನೆಲ, ಕಲೆ, ಸಾಹಿತ್ಯ ಉಳಿದರೆ ಮಾತ್ರ ಕನ್ನಡಿಗರ ಉಳಿವು ಸಾಧ್ಯ ಎಂದರು.

12ನೇ ಶತಮಾನದಲ್ಲಿ ವಚನಕಾರರು, ದಾಸರು, ಸಂತರು ಶ್ರೇಷ್ಠ ಮಹಾಕಾವ್ಯ ರಚಿಸಿದ್ದಾರೆ. ದಲಿತ ವಚನಕಾರರು ಸಾಹಿತ್ಯ ರಚನೆ ಮಾಡುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹ ಹೆಚ್ಚಾಗಿದೆ. ಇದರಿಂದ ಹಂತ ಹಂತವಾಗಿ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಕನ್ನಡ ಭಾಷೆಯ ಪ್ರಗತಿಗೆ ಮಾರಕವಾಗಿದೆ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗನೂ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಆರ್.ಕೆ. ನಂಜೇಗೌಡ ಮಾತನಾಡಿ, ‘ಹಲ್ಮಿಡಿ ಶಾಸನ, ‘ಕವಿರಾಜ ಮಾರ್ಗ’ ಕೃತಿಯಿಂದ ಮೊದಲಿಗೆ ಕನ್ನಡ ಭಾಷಾ ಪರಿಕಲ್ಪನೆಯ ಉದಯವಾಯಿತು. ರನ್ನ, ಜನ್ನ, ಪಂಪ, ಸರ್ವಜ್ಞ, ಬಸವಣ್ಣ, ವಚನಕಾರರು, ಸಂತರು, ಕವಿಗಳು, ಸಾಹಿತಿಗಳು ಕನ್ನಡ ಭಾಷೆ, ಕಲೆ, ಸಾಹಿತ್ಯದ ಪ್ರಗತಿಗೆ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

ಮುಖಂಡ ಕೇಶವನಾರಾಯಣ ಮಾತನಾಡಿ, ಕಲೆ, ಕ್ರೀಡೆ, ಸಂಸ್ಕೃತಿ, ಕೈಗಾರಿಕೆ, ಉದ್ಯಮ, ಶಿಕ್ಷಣ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ದೇಶದಲ್ಲಿ ಗಮನ ಸೆಳೆಯುವಂತಹ ಸಾಧನೆ ಮಾಡಿದೆ. ಈ ಕಾರಣಕ್ಕೆ ಭಾರತದಲ್ಲಿ ಕನ್ನಡ ನಾಡಿಗೆ ಎತ್ತರದ ಸ್ಥಾನವಿದೆ. ಈ ಸಾಧನೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಪುರಸಭಾ ಸದಸ್ಯ ರಾಮು, ಮುಖಂಡರಾದ ಮಹೇಶ್ ಕುಮಾರ್, ಕನಕರಾಜು, ಹರೀಶ್, ಸುರೇಶ್, ಬಾಬಾಜಾನ್, ಅಶ್ವಥಪ್ಪ, ರಜನಿ ಕನಕರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.