ವಿಜಯಪುರ: ರಾಜ್ಯದ ರೈತರಿಗೆ ಕಳಪೆ ಸ್ಪಿಂಕ್ಲರ್ ಪೈಪ್‌ಗಳನ್ನು ಮತ್ತು ಕೃಷಿ ಇಲಾಖೆಯಿಂದ ಒದಗಿಸಿರುವ ಕೃಷಿ ಸಲಕರಣೆಗಳು ಕಳಪೆಯಿಂದ ಕೂಡಿದ್ದರೂ ಪೂರೈಕೆ ಮಾಡಿರುವ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸದ ಸರ್ಕಾರದ ವಿರುದ್ಧ ಸಿ.ಬಿ.ಐ. ಅಥವಾ ಇ.ಡಿ. ತನಿಖೆ ನಡೆಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸುತ್ತಿರುವ ಸ್ಪಿಂಕ್ಲರ್ ಪೈಪ್‌ಗಳು ಸಂಪೂರ್ಣ ಕಳಪೆ ಮಟ್ಟದಾಗಿದ್ದು, ರೈತರಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಿದರು.
ಕಳಪೆ ಪೈಪ್‌ಗಳನ್ನು ವಿತರಿಸಿರುವ ಬಗ್ಗೆ ಮೂರು ವರ್ಷಗಳಿಂದ ಸರ್ಕಾರದ ಗಮನ ಸೆಳೆದಿದ್ದರೂ ಕೂಡಾ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸರ್ಕಾರದ ರೈತ ವಿರೋಧಿ ನಡೆಯನ್ನು ಪ್ರಶ್ನಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿತ್ತು. 2 ಬಾರಿ ದೂರು ಕೊಟ್ಟರು ಲೋಕಾಯುಕ್ತ ಕ್ರಮ ಕೈಗೊಳ್ಳದ ಕಾರಣ ಸರ್ಕಾರ ಹಾಗೂ ಲೋಕಾಯುಕ್ತ, ಇಲಾಖೆ ಕೃಷಿ ಪ್ರಧಾನ ಕಾರ್ಯದರ್ಶಿ, ಕೃಷಿ ಇಲಾಖೆ ಆಯುಕ್ತರು, ತೋಟಗಾರಿಕೆ ಇಲಾಖೆ ನಿರ್ದೇಶಕರ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ಹೂಡಲಾಗಿತ್ತು. ಈ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ಮತ್ತು ಲೋಕಾಯುಕ್ತ ಸಂಸ್ಥೆಗೆ, ಕೃಷಿ ಇಲಾಖೆ ಎಲ್ಲ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದರು.
ಇದೀ ಸರ್ಕಾರ ಎಚ್ಚೆತ್ತುಗೊಂಡು ಕಳಪೆ ಸ್ಪಿಂಕ್ಲರ್ ಪೈಪ್‌ಗಳನ್ನು ತಯಾರಿಸಿ ರೈತರಿಗೆ ಮೋಸ ಮಾಡಿದ ಕೆಲವೊಂದು ಕಂಪನಿಗಳನ್ನು ಮಾತ್ರ ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಕೃಷಿ ಸಚಿವರು, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಕೃಷಿ ಇಲಾಖೆ ಆಯುಕ್ತರು ಮತ್ತು ತೋಟಗಾರಿಕೆ ಇಲಾಖೆ ನಿರ್ದೇಶಕರು ಸೇರಿದಂತೆ ರಾಜ್ಯ ಸರ್ಕಾರವೇ ಈ ದೊಡ್ಡ ಹಗರಣದಲ್ಲಿ ಭಾಗಿಯಾಗಿದ್ದು, ಸಿ.ಬಿ.ಐ. ಅಥವಾ ಇ.ಡಿ.ಯಿಂದ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಪೂಜಾರ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶಾರದಾ ಕಾಳೆಣ್ಣವರ, ಮುದ್ದೇಬಿಹಾಳ ತಾಲ್ಲೂಕು ಮಹಿಳಾ ಅಧ್ಯಕ್ಷೆ ಸುಜಾತಾ ಬಂಡಿವಡ್ಡರ, ತಾಳಿಕೋಟಿ ತಾಲ್ಲೂಕು ಅಧ್ಯಕ್ಷ ದವಲಪ್ಪಗೌಡ ಲಿಂಗದಳ್ಳಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.