ಮುದ್ಧೇಬಿಹಾಳ: ವಿಜಯಪುರದಲ್ಲಿ ಸರ್ಕಾರ ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿರೋಧ ಇದ್ದರೂ ಅದರ ಕುರಿತಾಗಿಯೇ ಜನಪ್ರತಿನಿಧಿಗಳು ಹೇಳಿಕೆ ಕೊಡುತ್ತಿರುವುದು ಖಂಡನೀಯ. ಜಿಲ್ಲೆಯ ಸಂಸದರು ಈ ವಿಷಯದಲ್ಲಿ ಮೌನವಹಿಸಿರುವುದು ಸರಿಯಲ್ಲ ಎಂದು ಕಾರ್ಮಿಕ ಮುಖಂಡ ಮಲ್ಲಿಕಾರ್ಜುನ ಎಚ್.ಟಿ.ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ಪ್ರತಿಭಟನಾಕಾರರು,ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜಿಗೆ ವಿರೋಧ ವ್ಯಕ್ತಪಡಿಸಿದರು.
ವಕೀಲ ಕೆ.ಬಿ.ದೊಡಮನಿ ಮಾತನಾಡಿ, ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಯೋಜನೆಯು ಸಾರ್ವಜನಿಕ ಆಸ್ಪತ್ರೆಯನ್ನು ಖಾಸಗಿ ಕೈಗಳಿಗೆ ಒಪ್ಪಿಸುವ ಅಪಾಯವನ್ನು ಹೊಂದಿದ್ದು, ಇದು ಸಾರ್ವಜನಿಕ ಪ್ರವೇಶ, ಪಾರದರ್ಶಕತೆ ಮತ್ತು ಆರೋಗ್ಯ ಸೇವೆಗಳ ಲಭ್ಯತೆ ಹಾಗೂ ಖರ್ಚುಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. ಸಾರ್ವಜನಿಕ ಹಣದಿಂದ ನಿರ್ಮಿತವಾದ ಸರ್ಕಾರಿ ಆಸ್ಪತ್ರೆಯ ಮೂಲ ಉದ್ದೇಶವನ್ನೇ ಇದು ಹಾಳುಮಾಡುತ್ತದೆ ಎಂದು ಅವರು ಎಚ್ಚರಿಸಿದರು.
ಮನವಿಯಲ್ಲಿ ಪಿಪಿಪಿ ವೈದ್ಯಕೀಯ ಕಾಲೇಜು ಸ್ಥಾಪನೆ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯುಂಟು ಮಾಡುತ್ತದೆ. ಅಗತ್ಯ ಸೇವೆಗಳ ಖಾಸಗೀಕರಣವನ್ನು ಹೆಚ್ಚಿಸುತ್ತದೆ. ಸಾಮಾನ್ಯ ಕುಟುಂಬಗಳಿಗೆ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ವೆಚ್ಚವನ್ನು ಹೆಚ್ಚಿಸುತ್ತದೆ. ಸರ್ಕಾರವು ಪಿಪಿಪಿ ಮಾದರಿಯಿಂದ ಹಿಂದೆ ಸರಿದು, ಸಾರ್ವಜನಿಕ ಹೂಡಿಕೆಯನ್ನು ಬಲಪಡಿಸಿ, ಎಲ್ಲರಿಗೂ ಸಮಾನ, ಲಭ್ಯವಿರುವ ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣವನ್ನು ಖಚಿತಪಡಿಸಬೇಕು ಎಂದು ತಿಳಿಸಲಾಗಿದೆ.
ಶಿರಸ್ತೇದಾರ ಎಂ.ಎಸ್.ಬಾಗೇವಾಡಿ ಅವರಿಗೆ ಮನವಿ ಸಲ್ಲಿಸಲಾಯಿತು. ಹೋರಾಟಗಾರರಾದ ಸಂಗಮ್ಮ ಬಿರಾದಾರ, ಸಾವಿತ್ರಿ ನಾಗರತ್ತಿ, ರೇಣುಕಾ ಹಡಪದ,ಶರಣಮ್ಮ ಅಂಗಡಿ, ಝೇವಿಯರ್,ಬಂದಗೀಸಾಬ ,ಭಾರತಿ ನಿಡಗುಂದಿ, ಟೀನಾ ಸೇರಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ, ಮುದ್ಧೇಬಿಹಾಳ ಘಟಕ ಮತ್ತು ಕಿತ್ತೂರು ಚೆನ್ನಮ್ಮ ಸ್ವಸಹಾಯ ಸಂಘಗಳ ಒಕ್ಕೂಟ ನೇತೃತ್ವ ನೀಡಿತು. ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಸ್ಥಳೀಯ ಮಹಿಳಾ ಸಂಘಟನೆಗಳು, ಆರೋಗ್ಯ ಹಕ್ಕುಗಳ ಹೋರಾಟಗಾರರು, ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.