ADVERTISEMENT

ಪಿಪಿಪಿ ವಿರೋಧಿ ಹೋರಾಟಗಾರರಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 14:07 IST
Last Updated 13 ಜನವರಿ 2026, 14:07 IST
<div class="paragraphs"><p>ಜಾಮೀನು</p></div>

ಜಾಮೀನು

   

ವಿಜಯಪುರ: ವಿಜಯಪುರದಲ್ಲಿ ರಾಜ್ಯ ಸರ್ಕಾರವು ಉದ್ದೇಶಿಸಿದ್ದ ಖಾಸಗಿ–ಸಾರ್ವಜನಿಕ ಸಹಭಾಗಿತ್ವ(ಪಿಪಿಪಿ)ದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆದ ಹೋರಾಟದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಪಾಲಾಗಿರುವ ಆರು ಜನ ಹೋರಾಟಗಾರರಿಗೆ ಮಂಗಳವಾರ ಜಿಲ್ಲಾ ಸೆಷನ್ಸ್‌ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಜನವರಿ 1ರಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಹೋರಾಟಗಾರರು ಯತ್ನಿಸಿದಾಗ ನಡೆದ ತಳ್ಳಾಟದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದ ಮೇರೆಗೆ ಹೋರಾಟಗಾರರಾದ ಅನಿಲ ಹೊಸಮನಿ, ಅರವಿಂದ ಕುಲಕರ್ಣಿ, ಬಿ.ಭಗವಾನ್‌ರೆಡ್ಡಿ, ಭೋಗೇಶ ಸೋಲಾಪುರ, ಸಿದ್ದರಾಮ ಹಳ್ಳೂರ ಹಾಗೂ ಹುಳಶ್ಯಾಳದ ಸಂಗನ ಬಸವ ಸ್ವಾಮೀಜಿ ಅವರು ಬಂಧಿತರಾಗಿ ಜೈಲು ಪಾಲಾಗಿದ್ದರು.

ADVERTISEMENT

ಇದೇ ಪ್ರಕರಣದಲ್ಲಿ ಇನ್ನೂ 21 ಜನ ಹೋರಾಟಗಾರರ ವಿರುದ್ಧ ಕೊಲೆ ಯತ್ನ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ ಕೇಸು ದಾಖಲಾಗಿತ್ತು. ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಜಿಲ್ಲಾ ಪೊಲೀಸ್‌ ಹಾಗೂ ಸರ್ಕಾರದ ವಿರುದ್ಧ ವ್ಯಾಪಕ ವಿರೋಧ, ಟೀಕೆ ವ್ಯಕ್ತವಾಗಿತ್ತು. 

ಪಿಪಿಪಿ ವಿರೋಧಿ ಹೋರಾಟಕ್ಕೆ ಮಣಿದ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಿಜಯಪುರಕ್ಕೆ ಜನವರಿ 9ರಂದು  ಭೇಟಿ ನೀಡಿ, ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವುದಾಗಿ ಹಾಗೂ ಪಿಪಿಪಿ ಕೈಬಿಟ್ಟಿರುವುದಾಗಿ ಘೋಷಣೆ ಮಾಡಿ ಹೋಗಿದ್ದಾರೆ. 

ವಿಜಯೋತ್ಸವ...

ಕೋರ್ಟ್‌ ಜಾಮೀನು ನೀಡಿದ ಆದೇಶ ಪ್ರತಿ ಮಂಗಳವಾರ ಲಭಿಸದ ಕಾರಣ ಬಿಡುಗಡೆ ಸಾಧ್ಯವಾಗಿಲ್ಲ. ಜನವರಿ 14ರಂದು ಹೋರಾಟಗಾರರ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಅಂದು ದರ್ಗಾ ಜೈಲಿನಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ವರೆಗೆ ಮೆರವಣಿಗೆ ಮಾಡಿ, ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ಸದಸ್ಯ ಎಚ್‌.ಟಿ.ಭರತ್‌ಕುಮಾರ್‌ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.