ADVERTISEMENT

ಬಸವನಬಾಗೇವಾಡಿ | ಸಾಕಾರಗೊಳ್ಳದ ‘ಪ್ರಜಾಸೌಧ’ ಕಟ್ಟಡ; ತಪ್ಪದ ಅಲೆದಾಟ

ಬಸವರಾಜ ಎಸ್.ಉಳ್ಳಾಗಡ್ಡಿ
Published 5 ಫೆಬ್ರುವರಿ 2026, 2:13 IST
Last Updated 5 ಫೆಬ್ರುವರಿ 2026, 2:13 IST
ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿರುವ ಯುಕೆಪಿ ಅತಿಥಿಗೃಹ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ತಹಶೀಲ್ದಾರ್‌ ಕಾರ್ಯಾಲಯ
ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿರುವ ಯುಕೆಪಿ ಅತಿಥಿಗೃಹ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ತಹಶೀಲ್ದಾರ್‌ ಕಾರ್ಯಾಲಯ   

ಬಸವನಬಾಗೇವಾಡಿ: ಅಖಂಡ ಬಸವನಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಹಾಗೂ ಕೊಲ್ಹಾರ ಹೊಸ ತಾಲ್ಲೂಕುಗಳೆಂದು ಘೋಷಣೆಯಾಗಿ ದಶಕವಾಗುತ್ತಿದ್ದರೂ ತಾಲ್ಲೂಕು ಕೇಂದ್ರಗಳಲ್ಲಿ ತಹಶೀಲ್ದಾರ್‌ ಕಾರ್ಯಾಲಯ, ತಾ.ಪಂ. ಕಚೇರಿ ಉಪ ಖಜಾನೆ ಹೊರತುಪಡಿಸಿ ಅತ್ಯವಶ್ಯವಾದ ಯಾವುದೇ ಪ್ರಮುಖ ಇಲಾಖೆ ಕಚೇರಿಗಳು ಸ್ಥಾಪನೆಯಾಗದಿರುವ ಕಾರಣ ಜನರಿಗೆ ಇನ್ನೂ ಸಹ ಹಳೆ ತಾಲ್ಲೂಕು ಕೇಂದ್ರಕ್ಕೆ ಅಲೆದಾಟ, ಕಚೇರಿಗಳ ಸ್ಥಾಪನೆಗೆ ಹೋರಾಟ ತಪ್ಪಿಲ್ಲ.

ನಿಡಗುಂದಿ ತಾ.ಪಂ ಕಚೇರಿ :

ನೂತನ ನಿಡಗುಂದಿ ತಾಲ್ಲೂಕಿನಲ್ಲಿ ತಹಶೀಲ್ದಾರ್‌ ಕಾರ್ಯಾಲಯ, ತಾ.ಪಂ, ಉಪ ಖಜಾನೆ ಹೊರತುಪಡಿಸಿ ಉಳಿದ ಇಲಾಖೆಗಳ ತಾಲ್ಲೂಕು ಕಚೇರಿಗಳಿಗೆ ಸ್ವಂತ ಸ್ಥಳಗಳಿಲ್ಲ. ವಿಪರ್ಯಾಸವೆಂದರೆ ಪಿಎಂಶ್ರೀ ಸರ್ಕಾರಿ ಶಾಲಾ ಕಟ್ಟಡದಲ್ಲೇ ತಾ.ಪಂ ಕಚೇರಿ ಕಾರ್ಯ ನಿರ್ವಹಿಸುತ್ತಿರುವುದು ಸರ್ಕಾರಿ ಕಚೇರಿಗಳಿಗೆ ಸ್ಥಳದ ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ.

ADVERTISEMENT

ಕೊಲ್ಹಾರ ತಹಶೀಲ್ದಾರ್ ಕಚೇರಿ:

ನೂತನ ಕೊಲ್ಹಾರ ತಾಲ್ಲೂಕು ಕೇಂದ್ರ ಸ್ಥಾನವಾದ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲೂ ಸಹ ತಹಶೀಲ್ದಾರ್‌ ಕಾರ್ಯಾಲಯ, ತಾ.ಪಂ, ಉಪ ಖಜಾನೆ, ಕಾರ್ಮಿಕ ಇಲಾಖೆ ಹೊರತುಪಡಿಸಿ ಉಳಿದ ಇಲಾಖೆಗಳ ಕಚೇರಿಗಳು ದಶಕ ಕಳೆದರೂ ಸ್ಥಾಪನೆಯಾಗಿಲ್ಲ.

ತಹಶೀಲ್ದಾರ್‌ ಕಚೇರಿಗೆ ಸ್ವಂತ ಕಟ್ಟಡವಿಲ್ಲದ ಕಾರಣ ಪಟ್ಟಣದಲ್ಲಿರುವ ಯುಕೆಪಿ ಅತಿಥಿಗೃಹದಲ್ಲೆ ತಹಶೀಲ್ದಾರ್‌ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ, ಉಪ ಖಜಾನೆ, ಕಾರ್ಮಿಕ ಇಲಾಖೆಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸಾಕಾರಗೊಳ್ಳದ ‘ಪ್ರಜಾಸೌಧ'

ಕಳೆದ ಬಜೆಟ್ ನಲ್ಲಿ‌ ನಿಡಗುಂದಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಘೋಷಣೆ ಮಾಡಲಾಗಿತ್ತು.‌ ಅದರಂತೆ 2025ರ ಮೇನಲ್ಲಿ ನಡೆದ ಸಚಿವ ಸಂಪುಟದಲ್ಲಿ ರಾಜ್ಯದ 21 ಹೊಸ‌ ತಾಲ್ಲೂಕುಗಳ‌ ಪೈಕಿ ನಿಡಗುಂದಿಯಲ್ಲೂ ಸುಮಾರು‌ ₹ 8.60 ಕೋಟಿ ವೆಚ್ಚದಲ್ಲಿ ‘ಎ’ ದರ್ಜೆಯ ಸುಸಜ್ಜಿತ ತಾಲ್ಲೂಕು‌ ಪ್ರಜಾಸೌಧ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಅದೇ ತಿಂಗಳು ಸಿಎಂ‌‌ ಅಧ್ಯಕ್ಷತೆಯಲ್ಲಿ ನಡೆದ ಡಿಸಿ, ಜಿ.ಪಂ ಸಿಇಒಗಳ‌ ಸಭೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳಿಗೆ ವಿಜಯಪುರ ಜಿಲ್ಲಾ‌ ಪ್ರಜಾಸೌಧ ನಿರ್ಮಾಣದ ಜೊತೆಗೆ ನೂತನ ಕೊಲ್ಹಾರ ತಾಲ್ಲೂಕಿನಲ್ಲೂ ‘ಪ್ರಜಾಸೌಧ’ ಕಟ್ಟಡ ನಿರ್ಮಿಸಲು ಮಂಜೂರಾತಿ ಪತ್ರ ಸಹ ವಿತರಿಸಿದ್ದರು. ಆದರೂ ಮತಕ್ಷೇತ್ರದ ಎರಡೂ ನೂತನ ತಾಲ್ಲೂಕುಗಳಲ್ಲಿ ಇನ್ನು ಸಹ ಪ್ರಜಾಸೌಧ ಕಟ್ಟಡಗಳ ನಿರ್ಮಾಣ ಕಾರ್ಯ ಆರಂಭವಾಗದಿರುವುದು ಜನರಲ್ಲಿ ತೀವ್ರ ಹತಾಶೆ ಮೂಡಿಸಿದೆ.

ನಿಡಗುಂದಿ ಪಟ್ಟಣದ ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾ.ಪಂ. ಕಾರ್ಯಾಲಯ 
ನಿಡಗುಂದಿ ಪಟ್ಟಣದ ಪೊಲೀಸ್ ಠಾಣೆ ಬಳಿ ಸುಮಾರು 6 ಎಕರೆ ಜಾಗದಲ್ಲಿ ಪ್ರಜಾಸೌಧ ನಿರ್ಮಿಸಲು ಜಾಗ ಗುರುತಿಸಿ ಈಗಾಗಲೇ ಅಂದಾಜು ಪತ್ರಿಕೆ ತಯಾರಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಶೀರ್ಘ ಟೆಂಡರ್ ಕರೆಯಲಾಗುವುದು
ಎ.ಡಿ. ಅಮರಾವದಗಿ ತಹಶೀಲ್ದಾರ್‌ ನಿಡಗುಂದಿ 
ಕೊಲ್ಹಾರ ಪಟ್ಟಣದ ಎನ್‌ಟಿಎಸ್ ಶಾಲಾ ಮೈದಾನದ 1 ಎಕರೆ 32 ಗುಂಟೆ ಜಾಗದಲ್ಲಿ ‘ಪ್ರಜಾಸೌಧ’ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಪಟ್ಟಣ ಪಂಚಾಯಿತಿಯಲ್ಲಿ ಬುಹುಮತದೊಂದಿಗೆ ಠರಾವು ಪಾಸಾಗಿದೆ 
ವಿರೇಶ ಹಟ್ಟಿ ಮುಖ್ಯಾಧಿಕಾರಿಗಳು ಕೊಲ್ಹಾರ ಪಟ್ಟಣ ಪಂಚಾಯಿತಿ
ಕೊಲ್ಹಾರ ನಿಡಗುಂದಿ ತಾಲ್ಲೂಕುಗಳಲ್ಲಿ ಹಲವಾರು ವರ್ಷಗಳಾದರೂ ಸರ್ಕಾರಿ ಕಚೇರಿಗಳು ಸ್ಥಾಪನೆಯಾಗದೇ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ‘ಪ್ರಜಾಸೌಧ’ ನಿರ್ಮಿಸಬೇಕು
ಈರಣ್ಣಗೌಡ ಕೋಮಾರಅಧ್ಯಕ್ಷ ಕೊಲ್ಹಾರ ತಾಲ್ಲೂಕು ಹೋರಾಟ ಸಮಿತಿ‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.