ADVERTISEMENT

ನಕಲಿ ಕೀಟನಾಶಕ ಮಾರಾಟ ತಡೆಯಿರಿ

ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 14:33 IST
Last Updated 8 ಏಪ್ರಿಲ್ 2022, 14:33 IST
ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು
ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು   

ಮುದ್ದೇಬಿಹಾಳ: ತಾಲ್ಲೂಕಿನಲ್ಲಿ ನಕಲಿ ಕೀಟನಾಶಕ ಮಾರಾಟ ಯಥೇಚ್ಛವಾಗಿ ನಡೆದಿರುವ ಆರೋಪ ಕೇಳಿಬರುತ್ತಿದೆ. ರೈತರಿಗೆ ನಕಲಿ ಕೀಟನಾಶಕ ಮಾರಿದರೆ ಅದು ಅವರ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಲಿದೆ. ಕೃಷಿ ಇಲಾಖೆ ಅಧಿಕಾರಿಗಳು ನಕಲಿ ಮಾರಾಟ ತಡೆಗಟ್ಟಲು ಯಾಕೆ ಕ್ರಮ ಕೈಕೊಳ್ಳುತ್ತಿಲ್ಲ ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ತರಾಟೆಗೆ ತೆಗೆದುಕೊಂಡರು.

ಇಲ್ಲಿನ ತಾ.ಪಂ. ಸಭಾ ಭವನದಲ್ಲಿ ಶುಕ್ರವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ತರುವ ಮಾಲಿನ ತೂಕದಲ್ಲೂ ಮೋಸ ಆಗುತ್ತಿದೆ ಎಂಬುದು ಗಮನಕ್ಕೆ ಬಂದಿದ್ದು, ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಕೃಷಿ ಇಲಾಖೆ ಪ್ರತಿನಿಧಿ ರಾಜೇಶ್ವರಿ ನಾಡಗೌಡ ಮಾತನಾಡಿ, ಪಟ್ಟಣ ಪ್ರದೇಶದಲ್ಲಿ ನಕಲಿ ಔಷಧ ಮಾರಾಟ ತಡೆಗಟ್ಟಲಾಗಿದೆ. ಗ್ರಾಮೀಣ ಭಾಗದಲ್ಲಿ ಇದೆ ಎನ್ನಲಾಗುತ್ತಿದೆ. ಸಂಬಂಧಿಸಿದವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ನಿಯಂತ್ರಣಕ್ಕೆ ಕ್ರಮ ಕೈಕೊಳ್ಳುವುದಾಗಿ ತಿಳಿಸಿದರು.

ADVERTISEMENT

ರೈತರ ಕೃಷಿ ಉತ್ಪನ್ನಗಳ ತೂಕ ವ್ಯಾಪ್ತಿ ಕೃಷಿ ಇಲಾಖೆಯದ್ದಲ್ಲ. ತೂಕ ಮತ್ತು ಮಾಪನ ಇಲಾಖೆಯವರು ಅದನ್ನು ಮಾಡಬೇಕು ಎಂದರು.

ತಾಲ್ಲೂಕಿನಲ್ಲಿ ಕೆರೆಗಳು ತುಂಬಿವೆ, ಹಳ್ಳಗಳು ಹರಿಯುತ್ತಿವೆ, ಅಂತರ್ಜಲ ಹೆಚ್ಚಾಗಿದೆ. ಪಶು ಸಂಗೋಪನೆ ಹೆಚ್ಚಿಸಲು ಜನರ ಮನವೊಲಿಸಿ ಅಗತ್ಯ ಕ್ರಮ ಕೈಕೊಳ್ಳಬೇಕು ಎಂದರು.

ಬಿಇಓ ಅವರು ಪ್ರತಿ ವಾರ 2-3 ಶಾಲೆಗೆ ಭೇಟಿ ನೀಡಿ ಗುಣಾತ್ಮಕ ಶಿಕ್ಷಣ ಖಚಿತಪಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆಯವರು ಪ್ರತಿ ವರ್ಷ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು. ಬಿಸಿಯೂಟದವರು ಬಿಸಿಯೂಟದಲ್ಲಿ ಸರ್ಕಾರ ನಿಗದಿಪಡಿಸಿದ ಮಾನದಂಡ ಬಳಕೆ ಬಗ್ಗೆ ಹೆಚ್ಚು ನಿಗಾವಹಿಸಿ ಬಿಸಿಯೂಟದಲ್ಲಿ ತರಕಾರಿ, ಬೇಳೆ ನಿಗದಿತ ಪ್ರಮಾಣದಲ್ಲಿ ಬಳಕೆ ಆಗುವಂತೆ ನೋಡಿಕೊಳ್ಳಬೇಕು. ಮಕ್ಕಳ ಊಟದ ವಿಷಯದಲ್ಲಿ ವಂಚಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಮೇ 16ಕ್ಕೆ ಶಾಲೆ ಆರಂಭ:

ಸಭೆಯಲ್ಲಿ ಮಾತನಾಡಿದ ಬಿಇಒ ಎಚ್.ಜಿ.ಮಿರ್ಜಿ, 2023ನೇ ಸಾಲಿನ ಶೈಕ್ಷಣಿಕ ವರ್ಷ ಮೇ 16ರಂದೇ ಪ್ರಾರಂಭಗೊಳ್ಳಲಿದೆ. ಶಿಕ್ಷಣ ಸಚಿವರು ಕಲಿಕಾ ಚೇತರಿಕೆ ಎನ್ನುವ ಹೊಸ ಯೋಜನೆ ಜಾರಿಗೊಳಿಸಿ ಮಕ್ಕಳ ಓದು, ಬರಹ, ಮೂಲ ಗಣಿತಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ ಎಂದರು.

ಜನಪ್ರತಿನಿಧಿಗಳ ಅಥವಾ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಗೆ ಬರುವಾಗ ಅಧಿಕಾರಿಗಳು ಸಿದ್ದ ಉತ್ತರದ ಬದಲು ವಾಸ್ತವ ಮಾಹಿತಿ ಸಮೇತ ಬಂದಲ್ಲಿ ಚರ್ಚೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಮುಂದಿನ ಸಭೆಗೆ ಬರುವಾಗ ಸಿದ್ದ ವರದಿ ತರಬೇಡಿ ಎಂದು ಶಾಸಕರು ಕಿವಿಮಾತು ಹೇಳಿದರು.

ತಾಳಿಕೋಟೆ ತಹಶೀಲ್ದಾರ್ ಅನೀಲಕುಮಾರ ಢವಳಗಿ, ಮುದ್ದೇಬಿಹಾಳ ತಾಪಂ ಇಓ ಎಸ್.ವೈ.ಹೊಕ್ರಾಣಿ, ತಾಳಿಕೋಟೆ ತಾಪಂ ಇಓ ಬಿ.ಎಂ.ಬಿರಾದಾರ ಇದ್ದರು.

ಪರೀಕ್ಷಾ ಅಕ್ರಮಕ್ಕೆ ಅವಕಾಶ ಬೇಡ: ನಡಹಳ್ಳಿ

ಮುದ್ದೇಬಿಹಾಳ: ತಾಲ್ಲೂಕಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ, ನಕಲು ರಹಿತವಾಗಿ ನಡೆಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಠಿಣ ಕ್ರಮ ಕೈಕೊಳ್ಳಬೇಕು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸೂಚಿಸಿದರು.

ಪ್ರಶ್ನೆಪತ್ರಿಕೆ ಬಹಿರಂಗ ಹಗರಣದ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಪಡೆದ ಅವರು, ಯಾವುದೇ ಕಾರಣಕ್ಕೂ ನನ್ನ ಮತಕ್ಷೇತ್ರ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಅಕ್ರಮ ನಡೆಸಲು ಅವಕಾಶ ಕೊಡಕೂಡದು ಎಂದರು.

ಪರೀಕ್ಷಾ ಹಗರಣದ ವಿಷಯದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕಾನೂನಾತ್ಮಕ ಕ್ರಮ ಕೈಕೊಳ್ಳಲು ಮುಕ್ತರಾಗಿದ್ದಾರೆ. ನಕಲು ರಹಿತವಾಗಿ ಪರೀಕ್ಷೆ ನಡೆಸಲು ಹೆಚ್ಚಿನ ಆದ್ಯತೆ ಕೊಡಬೇಕು ಎಂದರು.

ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಸಾಧನೆ ಸೊನ್ನೆ ಆಗಿರಬಾರದು. ನಿವೃತ್ತಿ ನಂತರವೂ ಜನ ನೆನಪಿಡುವ ರೀತಿಯಲ್ಲಿ ಸಮಾಜಕ್ಕೆ, ಜನರಿಗೆ ಉಪಯುಕ್ತವಾಗುವ ಕೆಲಸ ಮಾಡಬೇಕು.

–ಎ.ಎಸ್.ಪಾಟೀಲ ನಡಹಳ್ಳಿ, ಶಾಸಕ,ಮುದ್ದೇಬಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.