ಮುದ್ದೇಬಿಹಾಳ: ಈರುಳ್ಳಿಗೆ ಏಕಾಏಕಿ ದರ ಕುಸಿತವಾಗಿರುವ ಪರಿಣಾಮ ಬಿತ್ತಿದ ಖರ್ಚು ವೆಚ್ಚವನ್ನು ಸರಿದೂಗಿಸಲಾಗದೇ ತಾಲ್ಲೂಕಿನ ರೂಢಗಿ ಗ್ರಾಮದಲ್ಲಿ ಈರುಳ್ಳಿ ಬೆಳೆಗಾರರೊಬ್ಬರು ತಮ್ಮ ಹೊಲದಲ್ಲಿ ಬೆಳೆದ ಸುಮಾರು 500 ಕ್ವಿಂಟಾಲ್ ಈರುಳ್ಳಿಯನ್ನು ಸೋಮವಾರ ನೆಲಸಮ ಮಾಡಿದ್ದಾರೆ.
ರೂಢಗಿ ಗ್ರಾಮದ ಈರುಳ್ಳಿ ಬೆಳೆಗಾರ ಬಸವರಾಜ ಈಳಗೇರ ಅವರು 6 ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಸಿಗದೇ, ಬೆಳೆಯಲು ಖರ್ಚು ಮಾಡಿದ ಹಣವೂ ಬಾರದ್ದರಿಂದ ಹೊಲದ ಬದುವಿನಲ್ಲೇ ಈರುಳ್ಳಿ ರಾಶಿ ಹಾಕುವ ಮೂಲಕ ಕಣ್ಣೀರಾದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರೈತ ಬಸವರಾಜ ಈಳಗೇರ, ‘ಆರು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೇವು. ಒಳ್ಳೆಯ ಫಸಲು ಬಂದಿದೆ ಎಂದು ಮಾರಾಟ ಮಾಡಲು ಹೋದರೆ ಕ್ವಿಂಟಾಲ್‌ಗೆ ₹300ರಿಂದ ₹400ಗೆ ಕೇಳುತ್ತಿದ್ದಾರೆ. ದೂರದ ಹುಬ್ಬಳ್ಳಿ, ಬೆಂಗಳೂರು, ಬಾಗಲಕೋಟೆಗೆ ಲಾರಿ ಬಾಡಿಗೆ, ಆಳುಗಳ ಕೂಲಿ, ಈರುಳ್ಳಿ ತುಂಬುವ ಚೀಲಗಳು, ಹಮಾಲರಿಗೆ ಕೊಡುವ ಕೂಲಿ ಎಲ್ಲವೂ ಸೇರಿದರೆ ಬೆಳೆಗೆ ಮಾಡಿರುವ ಖರ್ಚು ಸೇರಿ ನಷ್ಟವೇ ಆಗುವುದನ್ನು ಮನಗಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ’ ಹೇಳಿದರು.
‘ಒಮ್ಮೆ ಲಾರಿ ಬಾಡಿಗೆ ಮಾಡಿಕೊಂಡು ಮಾರಾಟಕ್ಕೆ ತೆಗೆದುಕೊಂಡು ಹೋದ ವೇಳೆ ನನ್ನ ಜೇಬಿನಿಂದಲೇ ₹400 ಕೈಬಿಟ್ಟವು. ಆದರೆ ಲಾಭ ಮಾತ್ರ ದೊರೆಯಲಿಲ್ಲ. ಹೀಗಾಗಿ ಹೊಲದಲ್ಲಿ ಬೆಳೆದಿದ್ದ ಸುಮಾರು 500 ಕ್ವಿಂಟಾಲ್ ಈರುಳ್ಳಿ ನೆಲಸಮ ಮಾಡಿದ್ದೇನೆ’ ಎಂದು ಹೇಳಿದರು.
ಯುವ ಮುಖಂಡ ಕಿರಣ ಹಿರೇಗೌಡರ ಮಾತನಾಡಿ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬಸವನ ಬಾಗೇವಾಡಿ, ಕೊಲ್ಹಾರ, ಕೂಡಗಿ ಸುತ್ತಮುತ್ತಲಿನ ಗ್ರಾಮದ ರೈತರು ಈರುಳ್ಳಿ ಬೆಳೆದಿದ್ದು, ಒಳ್ಳೆಯ ಫಸಲು ಬಂದಿದೆ. ಆದರೆ, ಅದಕ್ಕೆ ಸರಿಯಾದ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಹಲವು ಬೆಳೆಗಳಿಗೆ ಬೆಂಬಲ ಬೆಲೆ ನೀಡಿರುವಂತೆ ಈರುಳ್ಳಿ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಲಿ’ ಎಂದು ಒತ್ತಾಯಿಸಿದರು.
ಜಿಲ್ಲೆಯ ರೈತರು ಈರುಳ್ಳಿ ಬೆಳೆಯಲು ಮಾಡಿದ ಖರ್ಚು ತೆಗೆಯಲು ಪರದಾಡುತ್ತಿದ್ದು, ಅವರ ಕಣ್ಣಲ್ಲಿ ನೀರು ತರಿಸುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಅವರ ನೆರವಿಗೆ ಬರಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.