ADVERTISEMENT

ಶಿಕ್ಷಣ, ಸ್ವಚ್ಛತೆ, ನರೇಗಾ ಅನುಷ್ಠಾನಕ್ಕೆ ಆದ್ಯತೆ: ರಾಹುಲ್‌ ಶಿಂಧೆ.

ವಿಜಯಪುರ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ

ಬಸವರಾಜ ಸಂಪಳ್ಳಿ
Published 1 ಅಕ್ಟೋಬರ್ 2022, 16:00 IST
Last Updated 1 ಅಕ್ಟೋಬರ್ 2022, 16:00 IST
ರಾಹುಲ್ ಸಿಂಧೆ
ರಾಹುಲ್ ಸಿಂಧೆ   

ವಿಜಯಪುರ: ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಸುಧಾರಣೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರು ಮತ್ತು ಅಂಗವಿಕಲರ ಸಹಭಾಗಿತ್ವ, ಗ್ರಾಮೀಣ ಸ್ವಚ್ಛತೆಗೆವಿಶೇಷ ಆದ್ಯತೆ ನೀಡಿದ್ದಾರೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ.

ಜಿಲ್ಲಾ ಪಂಚಾಯ್ತಿ ಸಿಇಒ ಆಗಿ ವಿಜಯಪುರಕ್ಕೆ ಬಂದ ಬಳಿಕ ಇದುವರೆಗೆಜಿಲ್ಲೆಯ 50ಕ್ಕೂ ಅಧಿಕ ಗ್ರಾಮ ಪಂಚಾಯ್ತಿಗಳಿಗೆ ಖುದ್ದು ಭೇಟಿ ನೀಡಿ, ಪಂಚಾಯ್ತಿಗಳ ಕಾರ್ಯವೈಕರಿಯನ್ನು ಪರಿಶೀಲಿಸಿದ್ದಾರೆ.

ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳ ಅನುಷ್ಠಾನ ಕುರಿತು‘ಪ್ರಜಾವಾಣಿ’ಯೊಂದಿಗೆ ಅವರುಮಾತನಾಡಿದ್ದಾರೆ.

ADVERTISEMENT

ಮಿಷನ್‌ ವಿದ್ಯಾಪುರ:

‘ಮಿಷನ್‌ ವಿದ್ಯಾಪುರ’ ಎಂಬ ವಿನೂತನ ಯೋಜನೆ ರೂಪಿಸುವ ಮೂಲಕ ವಸತಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ತಜ್ಞರಿಂದ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ಇದರಿಂದ ಸಾವಿರಾರು ವಸತಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎನ್ನುತ್ತಾರೆ ಅವರು.

ಗ್ರಾಮೀಣ ಪ್ರದೇಶದಲ್ಲಿ ಕಸ ವಿಲೇವಾರಿಗೆ ಒತ್ತು ನೀಡಲಾಗಿದ್ದು, ಈಗಾಗಲೇ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಕಸ ಸಂಗ್ರಹ, ಸಾಗಾಟಕ್ಕೆ ವಾಹನ, ಡಬ್ಬಿ ವಿತರಿಸಲಾಗಿದೆ. ಅಲ್ಲದೇ, ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಲು ಘಟಕಗಳನ್ನು ಸ್ಥಾಪಿಸಲು ಆದ್ಯತೆ ನೀಡಲಾಗಿದೆ. ಕಸ ಸಂಗ್ರಹ, ಸಾಗಾಟ ಕಾರ್ಯವನ್ನು ಮಹಿಳಾ ಸ್ವಸಹಾಯ ಸಂಘಗಳಿಗೆ ವಹಿಸಿ, ಆಯ್ದ ಮಹಿಳೆಯರಿಗೆ ವಾಹನ ಚಾಲನಾ ತರಬೇತಿಯನ್ನು ನೀಡಲು ಉತ್ತೇಜನ ನೀಡಲಾಗಿದೆ. ಕಸ ಸಾಗಾಟ ವಾಹನಗಳ ಕಾರ್ಯವೈಕರಿ ಮೇಲೆ ನಿಗಾ ವಹಿಸಲು ಜಿಪಿಎಸ್‌ ಅಳವಡಿಕೆ ಮಾಡುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳು ಆದ್ಯತೆ ನೀಡಲಾಗಿದೆ.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಮಹಿಳಾ ಸಹಭಾಗಿತ್ವಕ್ಕೆ ವಿಶೇಷ ಒತ್ತು ನೀಡಿದ್ದು, ಈ ಹಿಂದೆ ಶೇ 45ರಷ್ಟಿದ್ದ ಮಹಿಳಾ ಸಹಭಾಗಿತ್ವ ಸದ್ಯ ಶೇ 51ಕ್ಕೆ ಏರಿಕೆಯಾಗಿದೆ.ಈ ಸಂಬಂಧ 6 ಸಾವಿರ ಹೊಸ ಜಾಬ್‌ ಕಾರ್ಡ್‌ ಮಾಡಿಸಲಾಗಿದೆ.

ಅಲ್ಲದೇ, ಅಂಗವಿಕಲರು ಎನ್‌ಆರ್‌ಇಜಿ ಯೋಜನೆಯಡಿ ಕಾರ್ಯನಿರ್ವಹಿಸಲು ಆದ್ಯತೆ ನೀಡಲಾಗಿದೆ. ಕೇವಲ ಅರ್ಧ ದಿನ ಕಾರ್ಯನಿರ್ವಹಿಸಿದರೂ ಸಾಕು ಒಂದು ದಿನದ ವೇತನ ಅಂಗವಿಕಲರಿಗೆ ಲಭಿಸುವಂತೆ ಮಾಡಲಾಗಿದೆ ಎನ್ನುತ್ತಾರೆ ರಾಹುಲ್‌ ಶಿಂಧೆ.

‘ಅಮೃತ ಗ್ರಾಮ’ ಯೋಜನೆಯಡಿ 52 ಗ್ರಾಮಗಳನ್ನು ಆಯ್ಕೆ ಮಾಡಿ, ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಶಾಲೆ ಕಂಪೌಂಡ್‌, ಆಟದ ಮೈದಾನ, ಶೌಚಾಲಯ, ಉದ್ಯಾನ, ಸ್ಮಶಾನ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

‘ಅಮೃತ ಸರೋವರ’ ಯೋಜನೆಯಡಿ ಜಿಲ್ಲೆ 75 ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಸದ್ಯ 15 ಕೆರೆಗಳು ಅಭಿವೃದ್ಧಿಯಾಗಿವೆ.

‘ಅಮೃತ ಗ್ರಾಮ’ ಯೋಜನೆ ಮಾದರಿಯಲ್ಲೇ ರಾಜ್ಯದ ಗಡಿ ಭಾಗದ 22 ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದ ನಿರ್ದೇಶನದಂತೆ ಆದ್ಯತೆ ನೀಡಲಾಗಿದೆ.

‘ಅಮೃತ ನರ್ಸರಿ’ ಯೋಜನೆಯಡಿ ತಲಾ 10 ಸಾವಿರ ಸಸಿಗಳನ್ನು ಬೆಳೆಸಲು ವಿಶೇಷ ಒತ್ತು ನೀಡಲಾಗಿದೆ. 211 ಗ್ರಾಮೀಣ ಸ್ವಸಹಾಯ ಒಕ್ಕೂಟಗಳನ್ನು ಸ್ಥಾಪಿಸಲಾಗಿದ್ದು, ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ನೀಡಲಾಗಿದೆ ಎನ್ನುತ್ತಾರೆ ಸಿಇಒ ರಾಹುಲ್ ಶಿಂಧೆ.

***

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಇದಕ್ಕೆಗ್ರಾ. ಪಂ.ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ ಸಹಕಾರ ಸಿಗುತ್ತಿದ್ದು, ಇನ್ನೂ ಹೆಚ್ಚಿನ ಸಹಕಾರ ಅಗತ್ಯವಿದೆ

–ರಾಹುಲ್‌ ಶಿಂಧೆ, ಸಿಇಒ,ಜಿ.ಪಂ.ವಿಜಯಪುರ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.