ADVERTISEMENT

ಬಿಜೆಪಿಯಿಂದ ರೈತ ಪರ ನಿರ್ಧಾರ: ಈರಣ್ಣ ಕಡಾಡಿ

ರೈತರ ದಿಕ್ಕು ತಪ್ಪಿಸಲು ಯತ್ನಿಸುತ್ತಿರುವ ವಿರೋಧ ಪಕ್ಷಗಳು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 13:52 IST
Last Updated 7 ಅಕ್ಟೋಬರ್ 2020, 13:52 IST
ಈರಣ್ಣ ಕಡಾಡಿ
ಈರಣ್ಣ ಕಡಾಡಿ   

ವಿಜಯಪುರ: ಕೇಂದ್ರ ಮತ್ತು ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮಸೂದೆಗಳು ರೈತ ‍ಪರ ನಿರ್ಧಾರಗಳಾಗಿವೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳು ರೈತರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತವಾಗಿವೆ ಎಂದು ಆರೋಪಿಸಿದರು.

ಕೃಷಿ ಕ್ಷೇತ್ರದ ಸುಧಾರಣೆಯ ದಿಸೆಯಲ್ಲಿ ಕೇಂದ್ರ ಸರ್ಕಾರ ಅಂಗೀಕಾರ ಪಡೆದ ಮೂರು ಮಸೂದೆಗಳಿಂದ ರೈತರಿಗೆ ಸಿಗುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಲ್ಲುವುದಿಲ್ಲ. ಎಪಿಎಂಸಿಗಳನ್ನು ಮುಚ್ಚುವುದಿಲ್ಲ, ಇವುಗಳ ಜೊತೆಗೆ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಕೂಡ ರೈತರ ಉತ್ಪನ್ನಗಳನ್ನು ಖರೀದಿಸುತ್ತವೆ. ಈ ಎರಡೂ ವ್ಯವಸ್ಥೆ ಒಟ್ಟಿಗೆ ಕಾರ್ಯ ನಿರ್ವಹಿಸುವ ಕಾರಣ ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ಸ್ಪರ್ಧಾತ್ಮಕ ಬೆಲೆ ಸಿಗಲಿದೆ ಎಂದರು.

ADVERTISEMENT

ದೇಶದಲ್ಲಿ 10 ಸಾವಿರ ವಿಶೇಷ ಕೃಷಿ ಉತ್ಪನ್ನ ವಲಯಗಳನ್ನು ನಿರ್ಮಾಣ ಮಾಡಲಾಗುವುದು. ಆ ಮೂಲಕ ಚಿಕ್ಕ ಹಿಡುವಳಿದಾರರಿಗೂ ಕೂಡ ಸಮಾನ ಅವಕಾಶ ಸಿಗಲಿದೆ. ಇದರ ಜೊತೆಗೆ ಕಂಪನಿಗಳು ರೈತರ ಉತ್ಪನ್ನಗಳ ಜೊತೆಗೆ ಒಪ್ಪಂದ ಮಡಿಕೊಳ್ಳುತ್ತಾರೆಯೇ ಹೊರತು ಅವರ ಭೂಮಿಯೊಂದಿಗೆ ಅಲ್ಲ ಎಂದರು.

ಅಗತ್ಯ ಸರಕುಗಳ ಕಾಯ್ದೆಯಿಂದಾಗಿ ದೇಶದಲ್ಲಿ ಲೈಸನ್ಸ್‌ ರಾಜ್‌ ಪದ್ಧತಿ ಜಾರಿಯಲ್ಲಿತ್ತು. ದವಸ–ಧಾನ್ಯಗಳ ಸಂಗ್ರಹ, ದಾಸ್ತಾನು ಹಾಗೂ ಸಂಸ್ಕರಣೆ ಮೇಲೆ ನಿಯಂತ್ರಣ ಇತ್ತು. ಇದರಿಂದಾಗಿ ಎಪಿಎಂಸಿಯಲ್ಲಿ ಕಡಿಮೆ ಬೆಲೆಗೆ ರೈತರು ಉತ್ಪನ್ನ ಮಾರಾಟ ಮಾಡಬೇಕಿತ್ತು. ಆದರೆ, ನೂತನ ಕಾಯ್ದೆಯಿಂದ ರೈತರು ಯಾವಾಗ ಬೇಕಾದರೂ ತಮಗೆ ಲಾಭ ಸಿಗುವ ದರಕ್ಕೆ ಉತ್ಪನ್ನ ಮಾರಾಟ ಮಾಡಬಹುದು ಎಂದು ಹೇಳಿದರು.

ಮಸೂದೆಗಳ ಅನ್ವಯ ರೈತರು ಎಪಿಎಂಸಿ ಮಂಡಿಯ ಹೊರತಾಗಿ ಕಡಿಮೆ ಸುಂಕ, ಹೆಚ್ಚುವರಿ ಸುಂಕ, ದಲ್ಲಾಳಿಗಳಿಗೆ ಕಮಿಷನ್‌ ನೀಡದೆಯೇ ತಮಗೆ ಬೇಕಾದವರಿಗೆ ಉತ್ಪನ್ನ ಮಾರಾಟ ಮಾಡಬಹುದು. ಆಲ್‌ನೈಲ್‌ ಮೂಲಕವೂ ಮಾರಬಹುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಮಂಡಿಸಿದ ಮಸೂದೆಗಳಿಗೆ ವಿರೋಧ ಮಾಡುತ್ತಿರುವ ಕಾಂಗ್ರೆಸ್‌ ಈ ಹಿಂದೆ ಆಡಳಿತದಲ್ಲಿದ್ದಾಗಲೂ ಇಂತಹದೇ ಕಾಯ್ದೆ ತರಲು ಮುಂದಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವವಿತ್ತು ಎಂದರು.

ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ₹25 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇದ್ದವು ಕೃಷಿ ಭೂಮಿ ಖರೀದಿಗೆ ಅವಕಾಶ ಸಿಗಲಿದೆ. ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿ ಮಾಡಬಹುದು, ನೀರಾವರಿ ಆಶ್ರಯದ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸುವುದಕ್ಕೆ ಪೂರ್ಣ ನಿಷೇಧವಿದೆ. ಐದು ಜನ ಇರುವ ಕುಟುಂಬಕ್ಕೆ ಗರಿಷ್ಠ 54 ಹಾಗೂ ಐದಕ್ಕಿಂತ ಹೆಚ್ಚು ಜನ ಇರುವ ಕುಟುಂಬಕ್ಕೆ ಗರಿಷ್ಠ 108 ಎಕರೆ ಜಮೀನು ಖರೀದಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಆರ್‌.ಪಾಟೀಲ ಕೂಚಬಾಳ, ಮುಖಂಡರಾದ ಎಸ್‌.ಕೆ.ಬೆಳ್ಳುಬ್ಬಿ, ಶಿವರುದ್ರ ಬಾಗಲಕೋಟೆ, ವಿಜುಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಿಜಯ ಜೋಶಿ, ಚಂದ್ರಶೇಖರ ಕವಟಗಿ,ಶಿವಪ್ರಸಾದ್‌. ಆರ್‌.ಟಿ.ಪಾಟೀಲ, ಲೋಕೇಶಗೌಡ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.