ADVERTISEMENT

ಸರ್ಕಾರಿ ಶಾಲೆ ಮುಚ್ಚುವ ಭೀತಿ: ಸಂಘಟನೆಗಳ ಹೋರಾಟಕ್ಕೆ ಮಕ್ಕಳ ಸಾಥ್

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 3:11 IST
Last Updated 4 ಮಾರ್ಚ್ 2026, 3:11 IST
ವಿಜಯಪುರ ಸಮೀಪದ ಅರಕೇರಿಯಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ವಿಜಯಪುರ ಸಮೀಪದ ಅರಕೇರಿಯಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ವಿಜಯಪುರ: ಕೆಪಿಎಸ್ ಮ್ಯಾಗ್ನೇಟ್ ಯೋಜನೆ ಹೆಸರಿನಲ್ಲಿವಿವಿಧ ತೋಟದ ವಸ್ತಿ ಶಾಲೆಗಳನ್ನು ಮುಚ್ಚುವ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಎಐಡಿಎಸ್‌ಒ ಸೇರಿದಂತೆ ವಿವಿಧ ಸಂಘಟನೆಗಳು ಈ ವಿಷಯವಾಗಿ ಹೋರಾಟ ನಡೆಸುತ್ತಿವೆ.

ಅರಕೇರಿ ಸೇರಿದಂತೆ ಸುತ್ತಮುತ್ತಲಿನ ಶಾಲೆಗಳು ಸಹ ಈ ಯೋಜನೆಯಡಿಯಲ್ಲಿ ಮುಚ್ಚುವ ಭೀತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಎಐಡಿಎಸ್‌ಒ ವಿಜಯಪುರ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಗೆ ಮಕ್ಕಳೂ ಸಾಥ್ ನೀಡಿದರು. ಅರಕೇರಿಯ ಮಾನೆ ಭಂಡಾರಿ, ಸೋಂಪೂರ ವಸ್ತಿ, ತಾಂಡಾದಲ್ಲಿರುವ ಸರ್ಕಾರಿ ಶಾಲೆ ನಂ.6 ಸೇರಿದಂತೆ ಹತ್ತಾರು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿ `ಸರ್ಕಾರಿ ಶಾಲೆ ಮುಚ್ಚಬೇಡಿ - ನಮ್ಮನ್ನು ಶಿಕ್ಷಣ ವಂಚಿತರನ್ನಾಗಿ ಮಾಡಬೇಡಿ’ ಎಂಬ ಫಲಕಗಳನ್ನು ಪ್ರದರ್ಶಿಸಿ, ಸರ್ಕಾರಕ್ಕೆ ಹಕ್ಕೊತ್ತಾಯ ರವಾನೆ ಮಾಡಿದರು.

ADVERTISEMENT

ಎಸ್‌ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಭಂಡಾಡಿ ಮಾತನಾಡಿ, ‘ಒಂದು ಸರ್ಕಾರಿ ಶಾಲೆ ಮುಚ್ಚುವುದರ ಪರಿಣಾಮ ಏನೆಂಬುದರ ಅರಿವು ನಮಗಿಲ್ಲವೇ? ಕೆಲವು ವರ್ಷಗಳ ಹಿಂದೆ, ಬಾಗಲಕೋಟೆಯ ಒಂದು ಪುಟ್ಟ ಹಳ್ಳಿಯಲ್ಲಿ, ಸ್ಥಳೀಯ ಸರ್ಕಾರಿ ಶಾಲೆಯನ್ನು ವಿಲೀನಗೊಳಿಸಿದ ನಂತರ, ಪುಟ್ಟ ಬಾಲಕಿ ಸವಿತಾ, ಮುಂದಿನ ಶಾಲೆಗೆ 6 ಕಿಲೋಮೀಟರ್‌ಗಳಷ್ಟು ದೂರ ನಡೆದುಕೊಂಡು ಹೋಗಬೇಕಾಯಿತು. ಕೆಲವೇ ತಿಂಗಳುಗಳಲ್ಲಿ, ಆಕೆ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದಳು. ಶಿಕ್ಷಕಿಯಾಗಬೇಕೆಂಬ ಆಕೆಯ ಕನಸು ಸಮಾಧಿಯಾಯಿತು. ಶಾಲೆಗಳು ಮುಚ್ಚಿದಾಗ, ನಮ್ಮ ನಾಡಿನ ಸಾವಿರಾರು ಮಕ್ಕಳ ಕನಸುಗಳು ಹೀಗೆಯೇ ಚಿವುಟಿ ಹೋಗುತ್ತವೆ. ನಮ್ಮ ಜಿಲ್ಲೆಯಲ್ಲಿಯೂ ದೂರದ ತೋಟದ ಪ್ರದೇಶಗಳಿಂದ ಮಕ್ಕಳು ನಡೆದುಕೊಂಡು ಬಂದೇ ಅಕ್ಷರ ಜ್ಞಾನ ಪಡೆಯುತ್ತಿವೆ. ಈ ಮಕ್ಕಳ ಭವಿಷ್ಯದ ಬಗ್ಗೆ ನಾವು ಯೋಚಿಸಬೇಕಲ್ಲವೇ’ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಎಐಡಿವೈಒ ಧುರೀಣ ಸಿದ್ದಲಿಂಗ ಬಾಗೇವಾಡಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಶೀನು ರಾಠೋಡ, ಪಾಲಕ ಚಂದ್ರಬಾನ ಭಂಡಾರಿ, ಎಐಎಂಎಸ್‌ಎಸ್ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶಿವರಂಜಿನಿ, ಅಡಿವೆಪ್ಪ ತಿಪ್ಪಣ್ಣ ಚನಬಸಪ್ಪಗೋಳ, ಕಾವೇರಿ ರಜಪೂತ, ಶ್ರೀಕಾಂತ ಕೊಂಡಗೂಳಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.