ADVERTISEMENT

ಕಟ್ಟಡ ನಿರ್ಮಾಣ ಕಾರ್ಮಿಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮೇ 2021, 14:25 IST
Last Updated 21 ಮೇ 2021, 14:25 IST
ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ನಿರ್ಮಾಣ ಕಾರ್ಮಿಕರು ಆನ್‌ಲೈನ್ ಪ್ರತಿಭಟನೆ ನಡೆಸಿದರು
ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ನಿರ್ಮಾಣ ಕಾರ್ಮಿಕರು ಆನ್‌ಲೈನ್ ಪ್ರತಿಭಟನೆ ನಡೆಸಿದರು   

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ನಿರ್ಮಾಣ ಕಾರ್ಮಿಕರು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಶುಕ್ರವಾರ ಆನ್‌ಲೈನ್ ಪ್ರತಿಭಟನೆ ನಡೆಸಿದರು.

ಕಾರ್ಮಿಕರು ತಮ್ಮ ತಮ್ಮ ಸ್ಥಳಗಳಲ್ಲಿ ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸಿ,ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಪ್ಯಾಕೇಜ್‌ ಸಮರ್ಪಕವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಘೊಷಿಸಿರುವ ರೂ.3 ಸಾವಿರ ಪರಿಹಾರಧನ ಏನೇನು ಸಾಲುವುದಿಲ್ಲ. ಕೂಡಲೇ ಕಟ್ಟಡ ನಿರ್ಮಾಣ ಕಾರ್ಮಿಕರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾಸಿಕ ರೂ. 10 ಸಾವಿರ ಮೂರು ತಿಂಗಳಿಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಜೊತೆಗೆ ಕಳೆದ ವರ್ಷ ಘೋಷಿಸಲಾದ ಕೋವಿಡ್ ರೂ. 5 ಸಾವಿರ ಪರಿಹಾರ ಹಣ ಬಾಕಿ ಇರುವ 1ಲಕ್ಷ ಕಾರ್ಮಿಕರಿಗೆ ಕೂಡಲೇ ವರ್ಗಾವಣೆ ಮಾಡಬೇಕು. ಕೋವಿಡ್ ಸೋಂಕಿನಿಂದ ಮೃತಪಡುವ ನೋಂದಾಯಿತ ಪ್ರತಿ ಕಟ್ಟಡ ಕಾರ್ಮಿಕ ಅಥವಾ ಸಾವಿಗೀಡಾಗುವ ಕುಟುಂಬದ ಸದಸ್ಯರಿಗೆ ಕನಿಷ್ಟ ರೂ. 10 ಲಕ್ಷ ವಿಶೇಷ ಪರಿಹಾರ ಧನವನ್ನು ಪ್ರಕಟಿಸಬೇಕು. ನೋಂದಾಯಿತರಲ್ಲದ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಕನಿಷ್ಠ ರೂ 5 ಲಕ್ಷ ಪರಿಹಾರ ನೀಡಬೇಕು ಮತ್ತು ಕೋವೀಡ್ ಸೋಂಕಿಗೊಳಗಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವ ಕಟ್ಡಡ ಕಾರ್ಮಿಕರ ಮತ್ತು ಅವರ ಕುಟುಂಬದವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಮಂಡಳಿಯೇ ಭರಿಸಬೇಕು ಎಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಎಚ್.ಟಿ., ಕಾಸಿಬಾಯಿ ತಳವಾರ, ರಸೂಲ್‌ ಮುಜಾವರ, ರಫೀಕ ತಾಂಬೂಳಿ, ಸುನೀಲ ಸಿದ್ರಾಮಶೆಟ್ಟಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.