ದೇವರಹಿಪ್ಪರಗಿ: ಕೆರೂಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರಿಗೆ ಬೆಳೆ ವಿಮೆ ಜಮೆಯಾಗದ ಹಿನ್ನೆಲೆಯಲ್ಲಿ, ರೈತರು ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯಕ್ಕೆ ಮಂಗಳವಾರ ಬಂದ ರೈತರು, ತಮ್ಮ ಖಾತೆಗಳಿಗೆ ಬೆಳೆ ವಿಮೆ ಜಮೆ ಆಗದೇಇರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದು ಬುಳ್ಳಾ ಮಾತನಾಡಿ, ‘2024-25ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ರೈತರು ತೊಗರಿ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಮಳೆ ಕೊರತೆ ಹಾಗೂ ಇನ್ನಿತರ ಪ್ರಕೃತಿ ವಿಕೋಪಗಳಿಗೆ ಒಳಗಾಗಿ ಫಸಲು ಬಾರದಂತಾಯಿತು. ತೊಗರಿ ಬೆಳೆಯ ವಿಮೆ ತುಂಬಿದ್ದರೂ ಕೆಲವು ರೈತರಿಗೆ ವಿಮಾ ಪರಿಹಾರ ಜಮೆ ಆಗಿಲ್ಲ’ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ಮಾತನಾಡಿ, ‘ರೈತರ ಖಾತೆಗಳಿಗೆ ವಿಮೆ ಹಣ ಬಿಡುಗಡೆ ಮಾಡದೇ ಇರುವುದಕ್ಕೆ ಕಂಪನಿಗಳೇ ನೇರ ಕಾರಣ. ಆದ್ದರಿಂದ ತಹಶೀಲ್ದಾರರು ಕಂಪನಿಯೊಂದಿಗೆ ಮಾತನಾಡಿ ಪರಿಹಾರ ಜಮೆ ಮಾಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ನಂತರ ರೈತರೊಂದಿಗೆ ಸೇರಿ ಧರಣಿ ಕುಳಿತರು.
ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಹಾಗೂ ಪಿಡಿಒ ಅವರು ರೈತರಿಗೆ ವಿಮೆ ವಿತರಣೆ ಕುರಿತು ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ, ರೈತರ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದರು. ಕೊನೆಗೆ ವಿಮೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ 15 ದಿನಗಳ ಒಳಗಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ ಪಡಶೆಟ್ಟಿ, ಮಲಕಾಜಯ್ಯ ಹಿರೇಮಠ, ಮಲ್ಲು ಚಟ್ಟರಕಿ, ಶಂಕರಗೌಡ ಪಾಟೀಲ, ಸಿದ್ಧನಗೌಡ ಪೊಲೇಶಿ, ಅಂಬಾಬಾಯಿ ರಜಪೂತ, ಸೋಮಬಾಯಿ ಕರೆತಪ್ಪಗೋಳ, ಮಡೆವ್ವ ನಂದ್ಯಾಳ, ಕಲ್ಯಾಣಯ್ಯ ಹಿರೇಮಠ, ವಿನಾಯಕ ಹಿರೇಮಠ, ಮಹಾದೇವಪ್ಪ ಬರಗಲ್, ಸಿದ್ದಣ್ಣ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.