ADVERTISEMENT

ಸಿಂದಗಿ | ಕಕ್ಕಳಮೇಲಿಯಿಂದ ಸಿಂದಗಿವರೆಗೆ ಕಾಲ್ನಡಿಗೆ ಜಾಥಾ ಇಂದು

ಅಂಬೇಡ್ಕರ್ ಮೂರ್ತಿ ಶಿರಚ್ಛೇದ ಮಾಡಿದ ಆರೋಪಿಗಳ ಮಾಹಿತಿ ಬಹಿರಂಗಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 5:36 IST
Last Updated 25 ಫೆಬ್ರುವರಿ 2026, 5:36 IST
ರಮೇಶ ಆಸಂಗಿ
ರಮೇಶ ಆಸಂಗಿ   

ಸಿಂದಗಿ: ಕಕ್ಕಳಮೇಲಿ ಗ್ರಾಮದಲ್ಲಿ 2019ರ ಅ. 15 ರಂದು ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಯ ಶಿರಚ್ಛೇದ ಮಾಡಿದ ಆರೋಪಿಗಳ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿ ಫೆ. 25 ರಂದು ಕಕ್ಕಳಮೇಲಿ ಗ್ರಾಮದಿಂದ ಸಿಂದಗಿ ನಗರದ ಡಾ.ಅಂಬೇಡ್ಕರ್ ವೃತ್ತದವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಘಟಕದ ಸಂಘಟನಾ ಸಂಚಾಲಕ ರಮೇಶ ಆಸಂಗಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಫೆ. 26 ರಂದು ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದರು.

‘ಕಕ್ಕಳಮೇಲಿ ಗ್ರಾಮದಲ್ಲಿ ದುಷ್ಕೃತ್ಯ ನಡೆದು ಏಳು ವರ್ಷಗಳಾದರೂ ಆರೋಪಿಗಳನ್ನು ಬಹಿರಂಗಪಡಿಸಲು ಪೊಲೀಸ್ ಇಲಾಖೆ ವಿಫಲವಾಗಿರುವುದನ್ನು ಖಂಡಿಸಿ ಈ ಜಾಥಾ ಮಾಡಲಾಗುತ್ತಿದೆ. ಪೊಲೀಸ್ ಚಾರ್ಜ್‌ಶೀಟ್‌ ಆಗಿದ್ದರೂ ಆರೋಪಿಗಳ ವಿವರ ಬಹಿರಂಗಪಡಿಸಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದರೆ ಪ್ರಕರಣ ಮುಚ್ಚಿ ಹಾಕುವ ಕುತಂತ್ರ ನಡೆದಿದೆ ಎಂಬ ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಆರೋಪಿಗಳ ಮಾಹಿತಿಯನ್ನು ತ್ವರಿತವಾಗಿ ಬಯಲಿಗೆ ತಂದು ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ದಸಂಸ ಬೆಳಗಾವಿ ವಿಭಾಗೀಯ ಸಂಚಾಲಕ ವಿನಾಯಕ ಗುಣಸಾಗರ ಮಾತನಾಡಿ, ‘ಪರಿಶಿಷ್ಟ ಜಾತಿ ಕುಂದು ಕೊರತೆ ಸಭೆಯಲ್ಲಿ ಈ ಕುರಿತು ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ಒತ್ತಾಯಿಸುತ್ತಲೇ ಬಂದಿದ್ದರೂ ಆರೋಪಿಗಳ ಮಾಹಿತಿ ಬಹಿರಂಗಗೊಳಿಸಿಲ್ಲ. ಈ ಪ್ರಕರಣವನ್ನು ಕೋರ್ಟ್‌ನಲ್ಲಿಯೇ ಹೊಂದಾಣಿಕೆಯಿಂದ ಮುಚ್ಚಿ ಹಾಕುವ ಹುನ್ನಾರ ನಡೆದಿದೆ’ ಎಂದು ಆರೋಪಿಸಿದರು.

ಈ ಪ್ರಕರಣವನ್ನು ಮುಚ್ಚಿ ಹಾಕುವ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಧ್ಯೆ ಪ್ರವೇಶಿಸಿ ಆರೋಪಿಯ ವಿವರ ಬಹಿರಂಗಪಡಿಸಬೇಕು. ಜಾಥಾದಲ್ಲಿ 2 ಸಾವಿರ ಹೋರಾಟಗಾರರು ಪಾಲ್ಗೊಳ್ಳುವರು ಎಂದು ದಸಂಸ ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ತಿಳಿಸಿದರು.

ದಲಿತ ಸಂಘಟನೆಯ ಮುಖಂಡ ಶ್ರೀಕಾಂತ ಸೋಮಜಾಳ ಮಾತನಾಡಿ, ‘ಈ ಪ್ರಕರಣ ಕುರಿತ ಹೋರಾಟಕ್ಕೆ ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ ಭೂಸನೂರ ಮತ್ತು ಶಾಸಕ ಅಶೋಕ ಮನಗೂಳಿ ಬೆಂಬಲಿಸಿದ್ದರು. ಆದರೆ ಈಗ ಸುಮ್ಮನಿರುವುದು ಏಕೆ’ ಎಂದು ಪ್ರಶ್ನಿಸಿದರು. ‍‘ಆರೋಪಿಗೆ ಪ್ರಭಾವಿ ನಾಯಕರ ರಕ್ಷಣೆ ಇದೆ ಎಂಬ ಅನುಮಾನ ಬರುತ್ತಿದೆ’ ಎಂದು ತಿಳಿಸಿದರು.

ದಸಂಸ ಪ್ರಮುಖರಾದ ಶ್ರೀನಿವಾಸ ಓಲೇಕಾರ, ಪ್ರಕಾಶ ಗುಡಿಮನಿ, ಸುಭದ್ರಾ ಮೇಲಿನಮನಿ ಮಾತನಾಡಿದರು. ಶ್ರೀಶೈಲ ಜಾಲವಾದಿ, ಸಂತೋಷ ಕಾಂಬಳೆ, ಲಕ್ಕಪ್ಪ ಬಡಿಗೇರ, ಮಂಜು ಯಂಟಮಾನ, ರಾಜು ಸಿಂದಗೇರಿ, ಮೋಹನ ಬರಗಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.