ADVERTISEMENT

ಕಟ್ಟಿಗೆ ಅಡ್ಡೆಗೆ ಬೀಗ; ಆತ್ಮಹತ್ಯೆ ಯತ್ನದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 14:04 IST
Last Updated 3 ಮೇ 2019, 14:04 IST
ವಿಜಯಪುರದ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಶುಕ್ರವಾರ, ಕಟ್ಟಿಗೆ ಅಡ್ಡೆ ಮಾಲೀಕರು, ಕಾರ್ಮಿಕರು ತಮ್ಮ ಅಡ್ಡೆಗಳನ್ನು ಸೀಜ್‌ ಮಾಡಿರುವುದನ್ನು ಖಂಡಿಸಿ ಪ್ರತಿಭಟಿಸುವ ಸಂದರ್ಭ ಆತ್ಮಹತ್ಯೆಗೆ ಯತ್ನಿಸಿದರು
ವಿಜಯಪುರದ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಶುಕ್ರವಾರ, ಕಟ್ಟಿಗೆ ಅಡ್ಡೆ ಮಾಲೀಕರು, ಕಾರ್ಮಿಕರು ತಮ್ಮ ಅಡ್ಡೆಗಳನ್ನು ಸೀಜ್‌ ಮಾಡಿರುವುದನ್ನು ಖಂಡಿಸಿ ಪ್ರತಿಭಟಿಸುವ ಸಂದರ್ಭ ಆತ್ಮಹತ್ಯೆಗೆ ಯತ್ನಿಸಿದರು   

ವಿಜಯಪುರ:‘ಕಟ್ಟಿಗೆ ಅಡ್ಡೆಗಳನ್ನು ಸಕಾರಣವಿಲ್ಲದೇ ಸೀಜ್‌ ಮಾಡಲಾಗಿದೆ’ ಎಂದು ದೂರಿ ಜಿಲ್ಲೆಯ ವಿವಿಧ ಕಟ್ಟಿಗೆ ಅಡ್ಡೆಗಳ ಮಾಲೀಕರು, ಕಾರ್ಮಿಕರು ನಗರದ ಟಕ್ಕೆಯಲ್ಲಿರುವ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನಡುವೆ ಕಾರ್ಮಿಕರಾದ ಫಯಾಜ್, ಮೈನುದ್ದೀನ್ ಮೊಕಾಶಿ ತಮ್ಮ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ನೆಗೆ ಯತ್ನಿಸಿದರು. ತಕ್ಷಣವೇ ಪ್ರತಿಭಟನಾಕಾರರು ಇಬ್ಬರನ್ನು ತಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಮೈನುದ್ದೀನ್ ಮೊಕಾಶಿ ‘ವಿಜಯಪುರ ಜಿಲ್ಲೆಯಲ್ಲಿ 137 ಕಟ್ಟಿಗೆ ಅಡ್ಡೆಗಳನ್ನು ಬಂದ್ ಮಾಡಿ ಸೀಜ್ ಮಾಡಲಾಗಿದೆ. ಯಾವುದೋ ನೆಪ ಹೇಳಿ, ಸಕಾರಣವಿಲ್ಲದೇ ಕಟ್ಟಿಗೆ ಅಡ್ಡೆಗಳನ್ನು ಬಂದ್ ಮಾಡಲಾಗಿದೆ. ಈ ಉದ್ಯಮವನ್ನೇ ನಂಬಿ ಅಪಾರ ಸಂಖ್ಯೆಯ ಕಾರ್ಮಿಕರು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದೇವೆ.

ADVERTISEMENT

ಏಕಾಏಕಿಯಾಗಿ ಕಳೆದ ಹಲ ದಿನಗಳಿಂದ ಕಟ್ಟಿಗೆ ಅಡ್ಡೆಗಳನ್ನು ಬಂದ್ ಮಾಡಿರುವುದರಿಂದ ಕಾರ್ಮಿಕರ ಕುಟುಂಬಗಳು ಉಪವಾಸ ಬೀಳುವಂತಾಗಿದೆ. ಕಾರ್ಮಿಕರು ಕೆಲಸವಿಲ್ಲದೇ ಪರದಾಡುವಂತಾದರೆ; ಕಟ್ಟಿಗೆ ಅಡ್ಡೆ ನಿರ್ಮಾಣಕ್ಕೆ ಮಾಲೀಕರು ಸಾಲ ಮಾಡಿದ್ದಾರೆ. ಈಗ ಜೀವನಾಧಾರವೇ ನಿಂತು, ಬ್ಯಾಂಕಿಗೆ ಸಾಲದ ಕಂತು ಸಹ ಪಾವತಿ ಮಾಡಲಾಗದೇ ಅತ್ಯಂತ ಗಂಭೀರ ಸ್ಥಿತಿ ಎದುರಿಸುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಯಾವುದೇ ನೋಟಿಸ್ ನೀಡದೇ, ಮನ ಬಂದಂತೆ ನಿಯಮಾವಳಿ ಮೀರಿದೆ ಎಂದು ಹೇಳಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಟ್ಟಿಗೆ ಅಡ್ಡೆ ಮೇಲೆ ದಾಳಿ ನಡೆಸಿ, ಸೀಜ್ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ದಾಳಿ ನಡೆಸಿ ಸೀಜ್ ಮಾಡಲಾಗಿದೆ ಎಂಬ ಉತ್ತರ ನೀಡುತ್ತಾರೆ.

ಮೇಲಾಧಿಕಾರಿಗಳಿಗೆ ವಿಚಾರಿಸಿದರೆ, ಯಾವುದೇ ಈ ತರಹದ ಆದೇಶ ನೀಡಿಲ್ಲ ಎನ್ನುತ್ತಾರೆ. ಹೀಗಾದರೆ ನಾವು ಯಾರಿಗೆ ನ್ಯಾಯ ಕೇಳಬೇಕು’ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ನೆರೆಯ ಬಾಗಲಕೋಟೆ, ಕಲಬುರ್ಗಿ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಕಟ್ಟಿಗೆ ಅಡ್ಡೆಗಳು ಚಾಲ್ತಿಯಲ್ಲಿವೆ. ಆದರೆ ನಮ್ಮ ಜಿಲ್ಲೆಯಲ್ಲಿ ಮಾತ್ರ ಏಕೆ ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ಕಟ್ಟಿಗೆ ಅಡ್ಡೆಯ ಮಾಲೀಕರು, ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.