ವಿಜಯಪುರ: ವೈದ್ಯಕೀಯ, ಎಂಜಿನಿಯರಿಂಗ್ ಕನಸು ಹೊತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಜಿಲ್ಲೆಯಿಂದ ದೂರದ ಮಂಗಳೂರು, ಉಡುಪಿ, ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳನ್ನು ಅರಸಿ ಹೋಗುತ್ತಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಕರಾವಳಿಯ ಪದವಿ ಪೂರ್ವ ಕಾಲೇಜುಗಳು ವಿಜಯಪುರ ಸೇರಿ ಉತ್ತರ ಕರ್ನಾಟಕ ಭಾಗದ ಪ್ರಮುಖ ಪ್ರೌಢಶಾಲೆಗಳಿಗೆ 6 ತಿಂಗಳ ಹಿಂದೆಯೇ ಲಗ್ಗೆ ಇಟ್ಟು, ವಿದ್ಯಾರ್ಥಿ–ಪೋಷಕರನ್ನು ಸಂಪರ್ಕಿಸಿ, ತಮ್ಮ ಕಾಲೇಜುಗಳಿಗೆ ಸೆಳೆಯುತ್ತಾರೆ.
ಕರಾವಳಿ ಕಾಲೇಜುಗಳು ವರ್ಷಕ್ಕೆ ವಿದ್ಯಾರ್ಥಿಗಳಿಂದ ಕಾಲೇಜು ಶುಲ್ಕ, ಹಾಸ್ಟೆಲ್ ಶುಲ್ಕ, ನೀಟ್, ಜೆಇಇ ತರಬೇತಿ ಶುಲ್ಕ, ಊಟ–ಉಪಹಾರ, ಡೋಬಿ,ಆರೋಗ್ಯ ಮತ್ತಿತರರ ಸೇರಿ ವರ್ಷಕ್ಕೆ ಕನಿಷ್ಠ ₹3.5 ಲಕ್ಷದಿಂದ ಗರಿಷ್ಠ ₹4.5 ಲಕ್ಷ ಶುಲ್ಕ ವಸೂಲಿ ಮಾಡುತ್ತಿವೆ. ಕರಾವಳಿ ಕಾಲೇಜುಗಳು ನೀಡುವ ಅದೇ ಗುಣಮಟ್ಟದ ಶಿಕ್ಷಣ ಜಿಲ್ಲೆಯ ಕಾಲೇಜುಗಳಲ್ಲೇ ಪಡೆದರೆ ವರ್ಷಕ್ಕೆ ₹1 ಲಕ್ಷದಿಂದ ₹2 ಲಕ್ಷದ ಒಳಗೆ ಮುಗಿಯುತ್ತದೆ’ ಎಂಬ ಅಭಿಪ್ರಾಯ ಶಿಕ್ಷಣ ತಜ್ಞರದ್ದು.
ಜಿಲ್ಲೆಯ ವಿಜ್ಞಾನ ಪದವಿ ಪೂರ್ವ ಕಾಲೇಜುಗಳು ಕೂಡ ಆಂಧ್ರಪ್ರದೇಶ, ತೆಲಂಗಾಣ, ಬೆಂಗಳೂರು, ರಾಜಸ್ಥಾನ ಕೋಟಾದಿಂದ ನುರಿತ ಉಪನ್ಯಾಸಕರನ್ನು ಕರೆತಂದು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಜೊತೆಗೆ ಈ ವರ್ಷದಿಂದ ಪ್ರತಿಷ್ಠಿತ ಜೆಇಇ, ನೀಟ್ ತರಬೇತಿ ಸಂಸ್ಥೆಗಳು ಸ್ಥಳೀಯ ಕಾಲೇಜುಗಳ ಜೊತೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿಜಯಪುರದಲ್ಲೇ ಗುಣಮಟ್ಟದ ತರಬೇತಿ ನೀಡುತ್ತಿವೆ’ ಎನ್ನುತ್ತಾರೆ ಅವರು.
ಜಿಲ್ಲೆಯಲ್ಲೂ ಉತ್ತಮ ಶಿಕ್ಷಣ
‘ಈ ವರ್ಷ ಜಿಲ್ಲೆಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 75.25 ಫಲಿತಾಂಶ ಬಂದಿದೆ. ವಿಜಯಪುರ ಸೇರಿ ಜಿಲ್ಲೆಯ ಖಾಸಗಿ, ಸರ್ಕಾರಿ ವಿಜ್ಞಾನ ಕಾಲೇಜುಗಳು ಪ್ರತಿ ವರ್ಷ ಉತ್ತಮ ಫಲಿತಾಂಶ ದಾಖಲಿಸುತ್ತಿವೆ. ಕರಾವಳಿಯ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ಮುನ್ನ ಎಲ್ಲರೂ ಆಲೋಚಿಸಬೇಕು’ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅರುಣ ಶಹಾಪೂರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ವರ್ಷ ಬಿ.ಎಂ.ಪಾಟೀಲ ಪಿಯು ಕಾಲೇಜಿನ ಜಾಹ್ನವಿ ತೋಸ್ನಿವಾಲ ಶೇ 98.83, ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದ ಎಕ್ಸ್‌ಫರ್ಟ್ ಪಿಯು ಕಾಲೇಜಿನ ವಾಣಿಶ್ರೀ ಹಳ್ಳದ ಶೇ 97.83, ವಿಜಯಪುರದ ತುಂಗಳ ಪಿಯು ಕಾಲೇಜಿನ ದಯಾನಂದ ಕಾರಟ್ ಶೇ 97.66, ಎಕ್ಸಲೆಂಟ್ ಪಿಯು ಕಾಲೇಜಿನ ಇಶಾ ಎಸ್. ದೇಸಾಯಿ ಶೇ 97.66 ಹಾಗೂ ಬೆನಕಟ್ಟಿ ಪಿಯು ಕಾಲೇಜಿನ ರಕ್ಷಿತಾ ಎನ್.ಸಿಖೇಡ ಶೇ 97.66 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಇಂತಹ ಸಾವಿರಾರು ಮಕ್ಕಳ ಉದಾಹರಣೆ ನೀಡಬಹುದಾಗಿದೆ’ ಎಂದರು.
ನಮ್ಮ ಜಿಲ್ಲೆಯ ವಿಜ್ಞಾನ ಕಾಲೇಜುಗಳು ಯಾವುದರಲ್ಲೂ ಕಮ್ಮಿಯಿಲ್ಲ. ಹೀಗಾಗಿ ಪೋಷಕರು ವಿದ್ಯಾರ್ಥಿಗಳು ಕರಾವಳಿ ಕಾಲೇಜುಗಳ ವ್ಯಾಮೋಹ ಬಿಡಬೇಕು. ಇಲ್ಲಿಯೇ ದಾಖಲಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.–ಅರುಣ ಶಹಾಪೂರ, ವಿಧಾನ ಪರಿಷತ್ ಮಾಜಿ ಸದಸ್ಯ
ನಮ್ಮ ಕಾಲೇಜು ವಿದ್ಯಾರ್ಥಿಗಳು ಗರಿಷ್ಠ ಅಂಕಗಳಿಸಿ ದಾಖಲೆ ಬರೆದಿದ್ದಾರೆ. ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಮೆಡಿಕಲ್ ಎಂಜಿನಿಯರಿಂಗ್‌ಗೆ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾಗುತ್ತಿದ್ದಾರೆ.–ಬಸವರಾಜ ಕವಲಗಿ, ಸಂಸ್ಥಾಪಕ ಚೇರ್ಮನ್ ಏಕ್ಸಲೆಂಟ್ ಶಿಕ್ಷಣ ಸಂಸ್ಥೆ ವಿಜಯಪುರ
ಉತ್ತಮ ಶಿಕ್ಷಣ ಸ್ವಂತ ಊರಲ್ಲೇ ಕಡಿಮೆ ಖರ್ಚಿನಲ್ಲಿ ಸಿಗುತ್ತಿರುವ ಈ ಕಾಲಘಟ್ಟದಲ್ಲಿ ಬೇರೆ ಬೇರೆ ಊರುಗಳಿಗೆ ತೆರಳಿ ಪಿಯು ಶಿಕ್ಷಣ ಪಡೆಯುವ ಅಗತ್ಯ ಇಲ್ಲ. ಈ ನಿಟ್ಟಿನಲ್ಲಿ ಪೋಷಕರು ವಿದ್ಯಾರ್ಥಿಗಳು ಯೋಚಿಸಬೇಕು.–ಜಯತೀರ್ಥ ಕುಲಕರ್ಣಿ, ಪ್ರಾಂಶುಪಾಲ ತುಂಗಳಾ ವಿಜ್ಞಾನ ಪದವಿ ಪೂರ್ವ ಕಾಲೇಜು ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.