ADVERTISEMENT

ವಿಜಯಪುರ: ಮರದ ಟೊಂಗೆಬಿದ್ದು ನಜ್ಜುಗುಜ್ಜಾದ ಬೈಕ್‌; ಹಾರಿದ ಮನೆ ಪತ್ರಾಸ್‌

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 13:37 IST
Last Updated 10 ಏಪ್ರಿಲ್ 2022, 13:37 IST
ಬೈಕ್‌ ಮೇಲೆ  ಬೇವಿನಮರದ ಬೃಹತ್ ಟೊಂಗೆ ಮುರಿದು ಬಿದ್ದು,  ನುಜ್ಜುಗುಜ್ಜಾಗಿದೆ.
ಬೈಕ್‌ ಮೇಲೆ  ಬೇವಿನಮರದ ಬೃಹತ್ ಟೊಂಗೆ ಮುರಿದು ಬಿದ್ದು,  ನುಜ್ಜುಗುಜ್ಜಾಗಿದೆ.   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಗುಡುಗು, ಸಿಡಿಲು ಮತ್ತು ಗಾಳಿಯ ಅಬ್ಬರದೊಂದಿಗೆ ಸಾಧಾರಣ ಮಳೆಯಾಗಿದೆ. ರಭಸವಾಗಿ ಗಾಳಿ ಬೀಸಿದ ಪರಿಣಾಮ ಹಲವೆಡೆ ಗಿಡಮರಗಳ ಟೊಂಗೆ ಮುರಿದು ಬಿದ್ದಿವೆ. ವಿದ್ಯುತ್‌ ಪೂರೈಕೆಗೂ ಅಡಚಣೆಯಾಗಿದೆ.

ತಾಳಿಕೋಟೆ ತಾಲ್ಲೂಕಿನ ತುಂಬಗಿ ಬಳಿ ದೇವರಹಿಪ್ಪರಗಿ ರಸ್ತೆಯಲ್ಲಿನ ಸಜ್ಜನ ಅವರ ತೋಟದ ಬಳಿ ನಿಲ್ಲಿಸಲಾಗಿದ್ದ ಬೈಕ್‌ ಮೇಲೆ ಬೇವಿನಮರದ ಬೃಹತ್ ಟೊಂಗೆ ಮುರಿದು ಬಿದ್ದು, ನುಜ್ಜುಗುಜ್ಜಾಗಿದೆ.

ತಮದಡ್ಡಿಗೆ ಹೊರಟಿದ್ದ ಬಸನಗೌಡ ಎಂಬವರು ಜೋರಾದ ಮಳೆ ಗಾಳಿ ಕಾರಣ ಬೈಕ್‌ ಅನ್ನು ಬೇವಿನಮರದ ಬಳಿ ನಿಲ್ಲಿಸಿ ತೋಟದ ಮನೆಯಲ್ಲಿ ಆಶ್ರಯ ಪಡೆದಿದ್ದರು. ಕೆಲ ನಿಮಿಷಗಳಲ್ಲೇ ಜೋರಾದ ಗಾಳಿಗೆ ಮರದ ಬುಡದ ಟೊಂಗೆಯೇ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ನಂತರ ಟೊಂಗೆ ತೆಗೆದುಹಾಕಿದ ಬಳಿಕ ವಾಹನ ಸಂಚಾರ ಪುನರಾರಂಭವಾಯಿತು.

ADVERTISEMENT

ತಾಳಿಕೋಟೆ ವ್ಯಾಪ್ತಿಯ ತುಂಬಗಿ, ಚೋಕಾವಿ ತಮದಡ್ಡಿ, ಸುತ್ತಮುತ್ತ ಜೋರಾದ ಮಳೆಯಾಗಿದೆ.

ಚನ್ನಬಸವ ನಗರದ ವಾಸುದೇವ ಮ್ಯಾಗೇರಿ ಅವರ ಶೆಡ್‌ನ ಪತ್ರಾಸ್‌ ಗಾಳಿಗೆ ಹಾರಿ ಹೋಗಿದೆ

ಬಸವನಬಾಗೇವಾಡಿ ಪಟ್ಟಣದ ಚನ್ನಬಸವ ನಗರದ ವಾಸುದೇವ ಮ್ಯಾಗೇರಿ ಅವರ ಶೆಡ್‌ನ ಪತ್ರಾಸ್‌ ಗಾಳಿಗೆ ಹಾರಿ ಹೋಗಿದೆ.

ವಿಜಯಪುರ ನಗರದಲ್ಲಿ ಈ ವರ್ಷದ ಪ್ರಥಮ ಮಳೆ ಸಿಂಚನವಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆ ರಭಸದ ಗಾಳಿಯೊಂದಿಗೆ 10 ನಿಮಿಷಗಳ ಕಾಲಾ ಸಾಧಾರಣ ಮಳೆಯಾಯಿತು. ಕೆಲ ಹೊತ್ತು ವಿದ್ಯುತ್‌ ಕೈಕೊಟ್ಟಿತ್ತು.

ಬಸವನಬಾಗೇವಾಡಿ ತಾಲ್ಲೂಕಿನ ನಾಗೂರ ಗ್ರಾಮ ಜಮೀನೊಂದರಲ್ಲಿ ಉಪ್ಪಲದಿನ್ನಿ ಗ್ರಾಮದ ಯಶವಂತ ಲಮಾಣಿ ಅವರಿಗೆ ಸೇರಿದ ಆಕಳು (ಹಸು) ಸಿಡಿಲಿನಿಂದ ಸಾವಿಗೀಡಾಗಿದೆ.

ಬಬಲೇಶ್ವರ ತಾಲ್ಲೂಕಿನ ಯಕ್ಕುಂಡಿಯಲ್ಲಿ ಆಲಿಕಲ್ಲು ಸಹಿತ ಅರ್ಧ ಗಂಟೆ ಮಳೆ ಆಗಿದೆ. ಬಾರಿ ಬಿರುಗಾಳಿ ಸಹಿತ ಮಳೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.