ADVERTISEMENT

ಎಸ್ಸೆಸ್ಸೆಲ್ಸಿ ಶೇ 98.08 ಅಂಕ ಪಡೆದ ರಾಜಮಹಮ್ಮದ ಓದಿಗೆ ಬೇಕಿದೆ ನೆರವಿನ ಹಸ್ತ

ಶರಣಬಸಪ್ಪ ಎಸ್‌.ಗಡೇದ
Published 4 ಮೇ 2019, 20:00 IST
Last Updated 4 ಮೇ 2019, 20:00 IST
ತಾಳಿಕೋಟೆ ತಾಲ್ಲೂಕಿನ ಗಡಿಸೋಮನಳ ಗ್ರಾಮದಲ್ಲಿನ ತನ್ನ ಮನೆಯ ಮುಂದೆ ಅಜ್ಜಿ ರಾಜನಬಿ ಜೊತೆ ರಾಜಮಹಮ್ಮದ ಸಾಸನೂರ
ತಾಳಿಕೋಟೆ ತಾಲ್ಲೂಕಿನ ಗಡಿಸೋಮನಳ ಗ್ರಾಮದಲ್ಲಿನ ತನ್ನ ಮನೆಯ ಮುಂದೆ ಅಜ್ಜಿ ರಾಜನಬಿ ಜೊತೆ ರಾಜಮಹಮ್ಮದ ಸಾಸನೂರ   

ತಾಳಿಕೋಟೆ: ಪ್ರತಿಭೆಗಳು ಗುಡಿಸಲಲ್ಲಿ ಹುಟ್ಟುತ್ತವೆ. ಕಷ್ಟಗಳು ಬದುಕಿನ ಪಾಠ ಕಲಿಸುತ್ತವೆ. ಛಲ ಮೂಡಿಸಿ ಸಾಧನೆಗೆ ಕಾರಣವಾಗುತ್ತವೆ ಎನ್ನುವುದಕ್ಕೆ ಉತ್ತಮ ಉದಾಹರಣೆ ರಾಜಮಹಮ್ಮದ ದವಲಸಾಬ್‌ ಸಾಸನೂರ.

2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 513 (ಶೇ 98.08) ಅಂಕ ಗಳಿಸಿ, ಪೀರಾಪುರ ಸರ್ಕಾರಿ ಪ್ರೌಢಶಾಲೆಗೆ ಪ್ರಥಮ ಸ್ಥಾನಕ್ಕೆ ಲಗ್ಗೆಯಿಟ್ಟವರು ರಾಜಮಹಮ್ಮದ, ತಾಳಿಕೋಟೆ ತಾಲ್ಲೂಕಿನ ಗಡಿಸೋಮನಾಳ ಗ್ರಾಮದವ.

ಪ್ರಥಮಭಾಷೆ ಕನ್ನಡದಲ್ಲಿ 122, ಇಂಗ್ಲಿಷ್ 97, ಹಿಂದಿ 96, ವಿಜ್ಞಾನದಲ್ಲಿ 98, ಗಣಿತ ಹಾಗೂ ಸಮಾಜ ವಿಜ್ಞಾನದಲ್ಲಿ 100 ಅಂಕದ ಸಾಧನೆ ಮಾಡಿದ್ದಾರೆ.

ADVERTISEMENT

ಮನೆಯಲ್ಲಿ ಕಿತ್ತು ತಿನ್ನುವ ಬಡತನ. ದುಡಿಯುವ ಶಕ್ತಿ ಇದ್ದರೂ ಸ್ವಂತ ಜಮೀನಿಲ್ಲ. ಇತ್ತ ಗ್ರಾಮದಲ್ಲಿ ಕೂಲಿಯೂ ಸಿಕ್ಕದು. ಕೂಲಿ ಸಿಕ್ಕರೆ ಮಾತ್ರ ಅಂದು ಒಲೆ ಹೊತ್ತಬೇಕು, ಗಂಜಿ ಕಾಯಿಸಬೇಕು ಎನ್ನುವ ಸ್ಥಿತಿ. ಸರ್ಕಾರದ ಕರುಣೆಯಿಂದ ದೊರೆತ ಆಶ್ರಯ ಮನೆಯಲ್ಲಿ ವಾಸ.

ಹೀಗಾಗಿ ತಂದೆ-ತಾಯಿ ಪ್ರತಿ ವರ್ಷ ಮಕ್ಕಳ ಓದಿಗೆ, ಸಂಸಾರ ಬಂಡಿ ಎಳೆಯಲು ದೂರದ ಮಹಾರಾಷ್ಟ್ರದ ರತ್ನಗಿರಿಗೆಕೂಲಿಗಾಗಿ ಹೋಗಿ ರಮ್ಜಾನ್‌ಗೆ ಮರಳುತ್ತಾರೆ.

ದಿನಕ್ಕೆ ತಂದೆಗೆ ಐನೂರು, ತಾಯಿಗೆ ಮುನ್ನೂರು. ದಣಿವಾದರೂ, ಜ್ವರ ಬಂದರೂ ಎಲ್ಲ ಮರೆತು ದುಡಿದರೆ ಮಾತ್ರ ಕೂಲಿ ಸಿಕ್ಕಿತು. ಅವರು ಕಳಿಸುವ ಹಣದಲ್ಲಿ ಮನೆಯಲ್ಲಿ ಅಜ್ಜಿ ರಾಜನಬಿ ರೊಟ್ಟಿ ಬೇಯಿಸಿ ಮೂವರು ಮೊಮ್ಮಕ್ಕಳ ಹೊಟ್ಟೆ ತುಂಬಿಸುತ್ತ ಮನೆಯ ಕಾವಲಿದ್ದಾರೆ. ಅಣ್ಣ ಸಲೀಂ ತಾಳಿಕೋಟೆಯಲ್ಲಿ ಮೊದಲ ವರ್ಷದ ಡಿಗ್ರಿಯಲ್ಲಿದ್ದರೆ, ತಮ್ಮ ಈ ವರ್ಷ 9ನೇ ತರಗತಿ.

‘ಇವರ ಅಪ್ಪ–ಅವ್ವ ದುಡಿಯಾಕ ಹೋಗ್ತಾರ್ರೀ. ರಮ್ಜಾನ್‌ಗೆ ಬರತಾರ. ಅವರೂ ಸಾಲಿ ಕಲಿತಿಲ್ಲ, ಮಕ್ಕಳಾರ ಕಲೀಲಿ ಅಂತ ಆಶಾ ಅದ. ಇವರ ಕಾಕಾನೂ ಇದೇ ಊರಾಗ ಅದಾನ. ಅವನೂ ಅಷ್ಟಿಷ್ಟು ಕೈ ಹಿಡಿತಾನ್ರೀ. ಅವ್ಗೂ ಕಷ್ಟ ಐತ್ರಿ. ಮಕ್ಕಳು ಮರೀ ಅದಾವ್ರೀ...‘ ಎಂದು ನಿಟ್ಟುಸಿರಿನೊಂದಿಗೆ ಕಷ್ಟವ ಬಿಚ್ಚಿಟ್ಟರು ಅಜ್ಜಿ.

‘ದಿನಾ ಏಳು ತಾಸು ಓದಿನ್ರೀ. ಹಿಂದ ಇಲ್ಲಿ ಕನ್ನಡ ಸಾಲಿಗೆ ಹೋಗುವಾಗ ರಾಘವೇಂದ್ರ ಕೇರಿ ಹಾಗೂ ಚನ್ನು ಗಿರಣಿ ವಡ್ಡರ ಸರ್ ಬಹಳ ಕಾಳಜಿ ಮಾಡಿದ್ರು. ಪೀರಾಪುರ ಸಾಲಿಯೊಳಗ ಎಲ್ಲಾ ಶಿಕ್ಷಕರೂ ನನಗ ತಿದ್ದಿ ತೀಡಿದರು. ಅವರ ಆಶೀರ್ವಾದದಿಂದಲೇ ಇಷ್ಟು ಅಂಕ ತೆಗೆದುಕೊಳ್ಳಲು ಸಾಧ್ಯವಾಯಿತು‘ ಎಂದು ರಾಜಮಹಮ್ಮದ ಸ್ಮರಿಸಿದ.

‘ಪಿಯುಸಿಲಿ ವಿಜ್ಞಾನ ಓದಿ ಎಂಜಿನಿಯರಿಂಗ್‌ ಕಲಿಬೇಕು ಅಂತಿನ್ರೀ. ಸಿಇಟಿ ಕೋಚಿಂಗ್, ಹಾಸ್ಟೆಲ್, ಕಾಲೇಜು ಫೀ, ಪುಸ್ತಕ... ಹಿಂಗ ಬಹಳ ಖರ್ಚ್‌ ಐತಿ. ಆದ್ರ ಅಷ್ಟು ರೂಪಾಯಿ ನಮ್ಮ ಹತ್ರಾ ಇಲ್ಲ. ಅದಕ್ಕಂತ ರತ್ನಗಿರಿಗೆ ದುಡಿಯಾಕ ಹೋಗಿದ್ದೆ. ಅಲ್ಲಿಯೂ ಕೆಲಸ ಬಾಳ ಸಿಗಲಿಲ್ಲರೀ. ಅಲ್ಲಿ ದುಡಿದ ₹ 5000 ವನ್ನೇ ತಂದೆ ರಮ್ಜಾನ್‌ ಹಬ್ಬಕ್ಕ ಬಟ್ಟಿ ಹೊಲಿಸು ಅಂದರ್ರೀ. ಆದ್ರ ಪಿಯು ವಿಜ್ಞಾನ ಓದಲಿಕ್ಕೆ ಅಂತ ಆ ಹಣನ ಹಾಗೇ ಇಟ್ಟೀನ್ರಿ‘ ಎಂದು ರಾಜಮಹಮ್ಮದ ಹೇಳಿದನು.

ರಾಜಮಹಮ್ಮದ ಓದಿಗೆ ನೆರವಾಗ ಬಯಸುವವರು ಅವನ ಸಿಂಡಿಕೇಟ್ ಬ್ಯಾಂಕ್ ತಾಳಿಕೋಟೆ ಖಾತೆ ಸಂಖ್ಯೆ 08102210023715 ಗೆ ಹಣ ನೀಡಬಹುದು. ಸಂಪರ್ಕ ಸಂಖ್ಯೆ 7709089331.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.