ADVERTISEMENT

ಆಲಮಟ್ಟಿ: ಅಪರೂಪದ ಚಿತ್ರಕಲಾವಿದೆ ರಾಜೇಶ್ವರಿ ಕೌಲಗಿ

ಚಂದ್ರಶೇಖರ ಕೊಳೇಕರ
Published 24 ಏಪ್ರಿಲ್ 2021, 19:30 IST
Last Updated 24 ಏಪ್ರಿಲ್ 2021, 19:30 IST
ಬುದ್ಧನ ಮಂದಸ್ಮಿತ ನಗು
ಬುದ್ಧನ ಮಂದಸ್ಮಿತ ನಗು   

ಆಲಮಟ್ಟಿ: ಚಿತ್ರಕಲಾ ಜಗತ್ತಿನಲ್ಲಿಎಸ್.ಬಿ. ಕುಮಸಿ ಎಂದೇ ಪರಿಚಿತರಾಗಿರುವ ರಾಜೇಶ್ವರಿ ಕೌಲಗಿ ಅವರು ರಚಿತ ವರ್ಣಚಿತ್ರಗಳು ನವದೆಹಲಿ, ಬೆಂಗಳೂರು, ಕಲಬುರ್ಗಿ, ಮುಂಬೈ, ಹೈದಾರಾಬಾದ್ ಹಾಗೂ ವಿಜಯಪುರದಲ್ಲಿ ಪ್ರದರ್ಶನಗೊಂಡು, ಜನ ಮೆಚ್ಚುಗೆಗೆ ಪಾತ್ರವಾಗಿವೆ.

‘ಕಲಬುರ್ಗಿಯಲ್ಲಿ ನಮ್ಮದು ಹಳೆಯ ದೊಡ್ಡ ಮನೆ, ಅಜ್ಜನಿಗೆ ಚಿತ್ರಕಲೆಯ ಬಗ್ಗೆ ಅಪಾರ ಆಸಕ್ತಿ. ಕಾರಣ ನಾಡಿನ ಖ್ಯಾತ ಚಿತ್ರ ಕಲಾವಿದರನ್ನು ಕರೆಯಿಸಿ ಮನೆಯ ಒಳಗೋಡೆಯಲ್ಲಿ ಬಣ್ಣ ಬಣ್ಣದ ಸುಂದರ ಚಿತ್ರಗಳನ್ನು ಬರೆಸುತ್ತಿದ್ದರು. ಪ್ರಾಥಮಿಕ ಶಾಲೆ ಓದುತ್ತಿದ್ದ ನಾನು ಮನೆಯ ಗೋಡೆಯ ಮೇಲೆ ಚಿತ್ರ ಬಿಡಿಸುವುದನ್ನು ಗಮನಿಸಿ ಚಿತ್ರಕಲೆಯಲ್ಲಿ ಆಸಕ್ತಿ ತಳೆದು ಬಾಲ್ಯದಲ್ಲಿಯೇ ಚಿತ್ರಗಳನ್ನು ಬಿಡಿಸತೊಡಗಿದೆ. ಕಲೆಯನ್ನು ತಪಸ್ಸಿನಂತೆ ಆರಾಧಿಸಿದೆ, ರಿಯಲಿಸ್ಟಿಕ್ ಮಾದರಿಯ ತೈಲ ವರ್ಣ, ಅಕ್ರೆಲಿಕ್ ವರ್ಣದಲ್ಲಿ ಚಿತ್ರಗಳನ್ನು ಬಿಡಿಸಿ ನಾಡಿನ ಹೆಸರಾಂತ ಕಲಾವಿದರಿಂದ ಸೈ ಎನಿಸಿಕೊಂಡೆ, ಸದ್ಯ ನಮ್ಮ ಕುಟುಂಬಕ್ಕೆ ನನ್ನ ಚಿತ್ರಕಲೆಯೇ ಆಸರೆಯಾಗಿದೆ. ವಿಜಯಪುರದ ಖಾಸಗಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಅಲ್ಪ ಸಂಬಳದಲ್ಲಿ ದುಡಿಯುತ್ತಿದ್ದೇನೆ' ಎನ್ನುತ್ತಾರೆ ರಾಜೇಶ್ವರಿ.

ಇವರು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ. ಇನ್ ಫೈನ್ ಆರ್ಟ್ ಪದವಿ ಪಡೆದಿದ್ದಾರೆ. ಕಲಬುರ್ಗಿಯ ಅಕಾಡೆಮಿ ಆರ್ಟ್ ಆಂಡ್ ಲಿಟ್ರೇಚರ್ ಅವರು ಏರ್ಪಡಿಸಿದ್ದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಮ್ಯಾನ್ ಪವರ್ ಕಲಾಕೃತಿ, ಸಿದ್ಧಗಂಗಾ ಫೈನ್ ಆರ್ಟ್ಸ್ ಸಂಸ್ಥೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಲೈಫ್ ಬಿಗನಿಂಗ್ ಎಂಬ ಕಲಾಕೃತಿಗೆ ‘ಉತ್ತಮ ಕಲಾಕೃತಿ’ ಪ್ರಶಸ್ತಿಯೂ ಲಭಿಸಿದೆ.

ADVERTISEMENT

ಬದುಕು ಹೋರಾಟ, ಚಿತ್ರಕಲೆ:ಸ್ತ್ರೀ ಸಮಸ್ಯೆ, ಅಂತರಂಗದ ಬಯಕೆ, ಕುಟುಂಬ ಪ್ರೀತಿ, ದುಃಖ ಸೇರಿದಂತೆ ಹೊಸ ಅಲೆಯ ಹಲವಾರು ಚಿತ್ರಗಳನ್ನು ರಚಿಸಿದ್ದಾರೆ.

ಬುದ್ಧ, ಬಸವ, ಗಾಂಧೀಜಿ, ಅಂಬೇಡ್ಕರ ಅವರ ಬದುಕು-ಬರಹ, ಹೋರಾಟ, ಬೋಧನೆಗೆ ಸಂಬಂಧಿಸಿದ ‘ದೊಡ್ಡವರ ಬದುಕಿನ ಧಾರೆ’ ಎಂಬ ಸಚಿತ್ರ ಕಥಾವಳಿ ಹೆಣೆದಿದ್ದಾರೆ. ಈ ಮಹಾತ್ಮರ ಗಟ್ಟಿತನ, ತ್ಯಾಗವನ್ನು ಚಿತ್ರಗಳ ಮೂಲಕ ಹಿಡಿದಿಡುವ ಕಠಿಣವಾದ ಕೆಲಸವನ್ನು ಸಾಧಿಸಿದ್ದಾರೆ. ಬುದ್ಧನ ಮುಖದಲ್ಲಿ ಅರಳಿರುವ ಮಂದಸ್ಮಿತ ನಗೆಯನ್ನು ರೇಖಾಚಿತ್ರದಲ್ಲಿ ಹಿಡಿದಿಡುವಂತಹ ಪ್ರಯಾಸದ ಕೆಲಸವನ್ನು ರಾಜೇಶ್ವರಿ ಸಾಧಿಸಿದ್ದಾರೆ.

ರಾಜೇಶ್ವರಿ ಅವರ ಕಲಾಕೃತಿಯಲ್ಲಿ ಅಕೆಡೆಮಿಕ್ ಶೈಲಿಯ ಶುದ್ಧ ವರ್ಣಗಳ ಬಳಕೆ, ನಯಗಾರಿಕೆ ಮತ್ತು ಲಾಲಿತ್ಯ ಕಂಡು ಬರುತ್ತದೆ. ದೊಡ್ಡ ಗಾತ್ರದ ಚಿತ್ರ ಸಂಯೋಜನೆಯಲ್ಲಿಯೂ ಅವರು ನಿಯಂತ್ರಣ ಸಾಧಿಸಿದ್ದಾರೆ. ಆಧುನಿಕ ಶೈಲಿಯ ತೈಲ ಮತ್ತು ವಿವಿಧ ಮಾಧ್ಯಮಗಳಲ್ಲಿ ರಚಿಸಲಾದ ಆಧುನಿಕ ದೃಷ್ಠಿಕೋನ ಇವರ ಕಲಾಕೃತಿಗಳು ನೋಡುಗರನ್ನು ಸೆಳೆಯುತ್ತದೆ.

ಆ ಕವಯಿತ್ರಿಯಾಗಿಯೂ ಅನೇಕ ಕವನಗಳನ್ನು ಬರೆದಿರುವ ಇವರು ಕವನ ವಾಚನಕ್ಕೆ ತಕ್ಕಂತೆ ಕ್ಷಣಮಾತ್ರದಲ್ಲಿ ಚಿತ್ರಗಳನ್ನು ತಾವೇ ಬಿಡಿಸುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.